ADVERTISEMENT

ರಾಮನಗರದ ಈ ಕ್ಯಾಂಟೀನ್‌ನಲ್ಲಿ ಊಟ, ಉಪಾಹಾರ ಬರೀ 10₹!

ಬಡವರ ಹಸಿವು ನೀಗಿಸಲು ಕ್ಯಾಂಟೀನ್‌ ತೆರೆದ ಅಟಲ್‌-ದಯಾಳ್‌ ಚಾರಿಟಬಲ್‌ ಟ್ರಸ್ಟ್‌

ಆರ್.ಜಿತೇಂದ್ರ
Published 15 ಆಗಸ್ಟ್ 2020, 5:01 IST
Last Updated 15 ಆಗಸ್ಟ್ 2020, 5:01 IST
ಕ್ಯಾಂಟೀನ್‌ನಲ್ಲಿ ಆಹಾರ ವಿತರಿಸುತ್ತಿರುವ ಟ್ರಸ್ಟ್‌ ಸದಸ್ಯರು
ಕ್ಯಾಂಟೀನ್‌ನಲ್ಲಿ ಆಹಾರ ವಿತರಿಸುತ್ತಿರುವ ಟ್ರಸ್ಟ್‌ ಸದಸ್ಯರು   

ರಾಮನಗರ: ಈ ಕ್ಯಾಂಟೀನ್‌ನಲ್ಲಿ ಊಟ, ಉಪಾಹಾರ ಏನೇ ತೆಗೆದುಕೊಂಡರೂ ಬರೀ ₹10. ಕೊರೊನಾ ಸಂಕಷ್ಟದ ಕಾಲದಲ್ಲಿ ಬಡವರು, ನಿರ್ಗತಿಕರ ಕೈಗೆಟಕುವ ದರದಲ್ಲಿ ಆಹಾರ ಉಣಬಡಿಸುತ್ತಿದೆ ಅಟಲ್‌ ಅನ್ನಪೂರ್ಣ ಕ್ಯಾಂಟೀನ್.

ಅಂದಹಾಗೇ ಈ ಕ್ಯಾಂಟೀನ್‌ ಇರುವುದು ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಪಟ್ಟಣದಲ್ಲಿ. ಅಟಲ್‌-ದಯಾಳ್‌ ಚಾರಿಟಬಲ್‌ ಟ್ರಸ್ಟ್‌ ಇದನ್ನು ತೆರೆದಿದೆ. ಕಳೆದೊಂದು ತಿಂಗಳಿಂದ ಇಲ್ಲಿ ನೂರಾರು ಮಂದಿ ಹಸಿವು ನೀಗಿಸಿಕೊಳ್ಳುತ್ತಿದ್ದಾರೆ.

ಬೆಳಗ್ಗಿನ ಉಪಾಹಾರಕ್ಕೆ ಬಿಸಿಬಿಸಿಯಾದ ಇಡ್ಲಿ, ಚಿತ್ರಾನ್ನ, ರೈಸ್‌ ಬಾತ್‌ ದೊರೆಯುತ್ತದೆ. ಮಧ್ಯಾಹ್ನದ ಊಟಕ್ಕೆ ಚಪಾತಿ, ಪಲ್ಯ, ಹಪ್ಪಳದ ಜತೆಗೆ ಅನ್ನ ಸಾಂಬಾರ್ ನೀಡಲಾಗುತ್ತಿದೆ. ಏನೇ ತೆಗೆದು ಕೊಂಡರೂ ಬರೀ ₹10 ಮಾತ್ರ. ಜನರ ಹಸಿವು ನೀಗಿಸುವುದೇ ಇದರ ಸ್ಥಾಪನೆ ಮೂಲ ಉದ್ದೇಶ. ಹೀಗಾಗಿ ಹಣ ಇಲ್ಲದವರಿಗೂ ಆಹಾರ ನೀಡುತ್ತೇವೆ ಎನ್ನುತ್ತಾರೆ ಟ್ರಸ್ಟ್‌ನ ಪದಾಧಿಕಾರಿಗಳು.

ADVERTISEMENT

ಹಾರೋಹಳ್ಳಿಯ ಅದೆಷ್ಟೋ ಬೀದಿ ಬದಿ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು, ನಿರ್ಗತಿಕರಿಗೆ ಈ ಕ್ಯಾಂಟೀನ್‌ ಪ್ರಯೋಜನ ಆಗುತ್ತಿದೆ. ಕ್ರಮೇಣ ಇಲ್ಲಿಗೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ರುಚಿ-ಶುಚಿಯಾದ ಆಹಾರಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ.

ರಾಜಕೀಯ ನಾಯಕರ ಹೆಸರಿನಲ್ಲಿ ಈಗಾಗಲೇ ಹಲವು ಕ್ಯಾಂಟೀನ್‌ಗಳು ತೆರೆದಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಹೆಸರಿನಲ್ಲಿ ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನ್‌ ತೆರೆದಿತ್ತು. ತದ ನಂತರದಲ್ಲಿ ಜೆಡಿಎಸ್‌ ಮುಖಂಡರು ಮಾಜಿ ಪ್ರಧಾನಿ ಎಚ್‌.ಡಿ. ದೇವೇ ಗೌಡರ ಹೆಸರಿನಲ್ಲಿ ’ಅಪ್ಪಾಜಿ’ ಕ್ಯಾಂಟೀನ್ ತೆರೆದಿದ್ದರು. ಇದೀಗ ಮತ್ತೊಬ್ಬ ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಹೆಸರಿನಲ್ಲಿ ಈ ಕ್ಯಾಂಟಿನ್‌ ಆರಂಭ ಆಗಿದೆ.

’ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎನ್ನುವುದು ನಮ್ಮ ಆಶಯ. ಹೀಗಾಗಿ ಬಿಜೆಪಿ, ಆರ್‌ಎಸ್‌ಎಸ್‌ನ ಸಮಾನ ಮನಸ್ಕ ಗೆಳೆಯರು ಸೇರಿ ಈ ಟ್ರಸ್ಟ್‌ ಮಾಡಿಕೊಂಡಿದ್ದೇವೆ. ಇದಕ್ಕೆ ಸಾಕಷ್ಟು ಮಂದಿ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ. ವಿಷಯ ತಿಳಿದು ಅನೇಕರು ಸ್ವಯಂಪ್ರೇರಿತರಾಗಿ ನೆರವು ನೀಡಲು ಮುಂದೆ ಬರುತ್ತಿದ್ದಾರೆ’ ಎನ್ನುತ್ತಾರೆ ಟ್ರಸ್ಟ್‌ನ ಅಧ್ಯಕ್ಷ ಮುರಳೀಧರ್.

‘ಸದ್ಯ ಕ್ಯಾಂಟೀನ್‌ ನಿರ್ವಹಣೆಗೆ ನಿತ್ಯ ₹6ರಿಂದ 7ಸಾವಿರ ವೆಚ್ಚ ತಗುಲುತ್ತಿದೆ. ಬೆಳಿಗ್ಗೆ 6.30ಕ್ಕೆಲ್ಲ ಹೋಟೆಲ್‌ನ ಬಾಗಿಲು ತೆರೆಯುತ್ತದೆ. 9ಕ್ಕೆಲ್ಲ ಮಾಡಿದಷ್ಟೂ ಉಪಾಹಾರ ಖಾಲಿಯಾಗಿರುತ್ತದೆ. ಮಧ್ಯಾಹ್ನ 12ರ ಸುಮಾರಿಗೆ ಊಟ ಆರಂಭಗೊಂಡು, 2ಗಂಟೆ ಸುಮಾರಿಗೆ ಮುಗಿಯುತ್ತದೆ. 500-600 ಮಂದಿ ಉಪಾಹಾರ ಹಾಗೂ 400 ಮಂದಿಯಷ್ಟು ಊಟ ಮಾಡುತ್ತಿದ್ದಾರೆ. ಹಾರೋಹಳ್ಳಿ ಜನರಿಗೆ ಅತಿ ಕಡಿಮೆ ದರದಲ್ಲಿ ಆಹಾರ ಒದಗಿಸುವ ನಮ್ಮ ಪ್ರಯತ್ನಕ್ಕೆ ಉತ್ತಮ ಬೆಂಬಲ ದೊರೆತಿದೆ’ ಎನ್ನುತ್ತಾರೆ ಅವರು.

ಬಿಜೆಪಿ ಮುಖಂಡ ಎಂ.ರುದ್ರೇಶ್‌ ಈ ಟ್ರಸ್ಟ್‌ಗೆ ಗೌರವ ಅಧ್ಯಕ್ಷರಾಗಿದ್ದಾರೆ. ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್‌, ಖಜಾಂಚಿ ಸುಬ್ರಹ್ಮಣ್ಯ, ಪ್ರಕಾಶ್‌, ಗಿರೀಶ್, ಕುಮಾರ್‌, ಮಲ್ಲೇಶ್‌ ಮತ್ತಿತರರು ಒತ್ತಾಸೆಯಾಗಿ ಕೆಲಸ ಮಾಡುತ್ತಿದ್ದಾರೆ. ಬಿಡದಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವರದರಾಜುಗೌಡ, ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್‌ ಸಹಿತ ಹಲವರು ಅಗತ್ಯ ಸಹಕಾರ ನೀಡುತ್ತಿದ್ದಾರೆ.

ಮುಂದೆ ಪ್ರತಿ ಹೋಬಳಿಯಲ್ಲಿಯೂ ಇಂತಹದ್ದೊಂದು ಕ್ಯಾಂಟಿನ್‌ ತೆರೆಯಬೇಕು ಎನ್ನುವುದು ಟ್ರಸ್ಟ್‌ನ ಪದಾಧಿಕಾರಿಗಳ ಆಶಯವಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿ, ತಾಲ್ಲೂಕಿನಲ್ಲೂ ಗೋಶಾಲೆ, ವೃದ್ದಾಶ್ರಮ ಮೊದಲಾದವುಗಳ ಆರಂಭದ ಮೂಲಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಿದ್ದೇವೆ ಎನ್ನುತ್ತಾರೆ ಮುರಳೀಧರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.