ರಾಮನಗರ: ‘ಮೇಕೆದಾಟು ಯೋಜನೆ ವಿಷಯದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕಾರಣ ಬಿಟ್ಟು ಕೆಲಸ ಮಾಡಬೇಕು. ಆ ಮೂಲಕ ಜಿಲ್ಲೆಯ ಋಣವನ್ನು ತೀರಿಸಬೇಕು. ಕಾಂಗ್ರೆಸ್ ನಾಯಕರು ತಮಿಳುನಾಡು ಸರ್ಕಾರವನ್ನು ಒಪ್ಪಿಸಿದರೆ, ಇನ್ನು ಕುಮಾರಸ್ವಾಮಿ ಅವರಿಗೆ ಏನು ಕೆಲಸ ಉಳಿಯುತ್ತದೆ?’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ತಿರುಗೇಟು ನೀಡಿದರು.
ನಗರದ ವಿವಿಧೆಡೆ ಶನಿವಾರ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೇಕೆದಾಟು ಯೋಜನೆ ಕುರಿತು ಎಚ್‌ಡಿಕೆ ಆಡಿರುವ ಮಾತುಗಳನ್ನು ಹೊಲ ಉಳುವ ರೈತನೂ ಹೇಳುವುದಿಲ್ಲ. ಭಗವಂತ ಅವರಿಗೆ ಶಕ್ತಿ ಕೊಟ್ಟಿದ್ದಾನೆ. ಎರಡು ಸಲ ರಾಜ್ಯದ ಮುಖ್ಯಮಂತ್ರಿಯಾಗಿ, ಇದೀಗ ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರುವ ಅವರು, ಮೇಕೆದಾಟು ವಿಷಯದಲ್ಲಿ ರಾಜಕಾರಣ ಬದಿಗೊತ್ತಿ ಕೆಲಸ ಮಾಡಬೇಕು’ ಎಂದರು.
‘ಕುಡಿಯುವ ನೀರಿನ ಕೊರತೆ ನೀಗಿಸುವ ದೂರದೃಷ್ಟಿಯ ಆಲೋಚನೆಯೊಂದಿಗೆ ನಾವು ಮೇಕೆದಾಟು ಪಾದಯಾತ್ರೆ ಮಾಡಿದ್ದೆವು. ಯೋಜನೆಗಾಗಿ ನಮ್ಮ ಸರ್ಕಾರಿ ಒಂದು ಸಾವಿರ ಕೋಟಿಯನ್ನು ಮೀಸಲಿರಿಸಿದೆ. ಕುಮಾರಸ್ವಾಮಿ ಅವರು ಯೋಜನೆಯ ಅಗತ್ಯದ ಕುರಿತು ಪ್ರಧಾನಿಗೆ ಮನವರಿಕೆ ಮಡಿ ಕೊಡಬೇಕು. ನಾವು ಮಾಡಿದ ಹೋರಾಟಕ್ಕೆ ಎಚ್‌ಡಿಕೆ ಅವರು ಫಲ ಕೊಡಿಸುವ ಪ್ರಯತ್ನ ಮಾಡಲಿ’ ಎಂದು ಹೇಳಿದರು.
ಹಕ್ಕು ಕೇಳಿದ್ದೇನೆ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕೆಂಬ ತಮ್ಮ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ, ‘ನಮ್ಮ ಹಕ್ಕನ್ನು ಕೇಳಿದ್ದೇನೆ. ಸಮಯ ಬಂದಾಗ ನಮ್ಮ ನಾಯಕರು ಮುಖ್ಯಮಂತ್ರಿಯಾಗುತ್ತಾರೆ. ನನ್ನ ಹೇಳಿಕೆಗಾಗಿ ಪಕ್ಷ ನೀಡಿರುವ ನೋಟಿಸ್‌ಗೆ ಪ್ರತಿಕ್ರಿಯಿಸಲು ಇನ್ನೂ ಮೂರು ದಿನ ಇದೆ. ಏನೆಂದು ಪ್ರತಿಕ್ರಿಯೆ ನೀಡಬೇಕೆಂದು ಆಲೋಚಿಸುತ್ತಿರುವೆ’ ಎಂದರು.
ನಗರದ ಚಾಮುಂಡೇಶ್ವರಿ ಬಡಾವಣೆ, ವಿಜಯನಗರ, ಛತ್ರದ ಬೀದಿ ಸರ್ಕಾರಿ ಮೆಯಿನ್ ಸ್ಕೂಲ್ ಆವರಣ, ಬಾಲಗೇರಿ ಹಾಗೂ ಐಜೂರು ಬಡಾವಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಹುಸೇನ್ ಭೂಮಿಪೂಜೆ ನೆರವೇರಿಸಿದರು. ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರು ಹಾಗೂ ಇಲಾಖೆ ಅಧಿಕಾರಿಗಳು ಇದ್ದರು.
ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ಪ್ರಯತ್ನ ಫಲ ಕೊಡದಿರಬಹುದು. ಪ್ರಾರ್ಥನೆ ಫಲ ಕೊಡುತ್ತದೆ ಎಂದು ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ. ದೈವಶಕ್ತಿ ಜೊತೆಗೆ ಹಣೆಯಲ್ಲೂ ಭಗವಂತ ಬರೆದಿರಬೇಕು. ಅವರ ಪ್ರಾರ್ಥನೆ ಖಂಡಿತವಾಗಿ ಫಲಿಸುತ್ತದೆಎಚ್.ಎ. ಇಕ್ಬಾಲ್ ಹುಸೇನ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.