ADVERTISEMENT

‘ಮಾನಸಿಕ ಖಿನ್ನತೆ: ವೈದ್ಯರ ಸಲಹೆ ಅತ್ಯವಶ್ಯ’

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 14:14 IST
Last Updated 30 ಅಕ್ಟೋಬರ್ 2019, 14:14 IST
ಬುಧವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ ಉದ್ಘಾಟಿಸಿದರು
ಬುಧವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ ಉದ್ಘಾಟಿಸಿದರು   

ರಾಮನಗರ: ಮಾನಸಿಕ ಖಿನ್ನತೆಗೆ ಒಳಗಾಗುವ ವ್ಯಕ್ತಿ ಆತ್ಮಹತ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಮಾನಸಿಕ ಖಿನ್ನತೆಗೆ ತುತ್ತಾದರೆ ಜೀವನ ನಡೆಸುವುದು ದುಸ್ಥರವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ ಹೇಳಿದರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 1992 ರಿಂದ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ಇದರ ಉದ್ದೇಶ ಎಲ್ಲರಲ್ಲೂ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದಾಗಿದೆ. ಯಾವುದೇ ವ್ಯಕ್ತಿ ದೈಹಿಕವಾಗಿ ಚೆನ್ನಾಗಿದ್ದರೂ ಮಾನಸಿಕವಾಗಿ ಒತ್ತಡದಲ್ಲಿದ್ದರೆ, ಆ ವ್ಯಕ್ತಿಯ ವರ್ತನೆಗಳು ಬದಲಾಗುತ್ತವೆ ಎಂದು ತಿಳಿಸಿದರು.

ಜನರಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಕೂಡ ಅಷ್ಟೇ ಮುಖ್ಯವಾಗುತ್ತದೆ. 14 ರಿಂದ 24 ರ ವರ್ಷದಲ್ಲಿನ ಯುವಕ ಯುವತಿಯರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲವಾರು ಬದಲಾವಣೆಗಳು ಆಗುತ್ತವೆ. ನಂತರದಲ್ಲಿ ವಿವಿಧ ಒತ್ತಡಗಳನ್ನು ತಾಳಲಾರದೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಶೇ 80ರಷ್ಟು ಜನ ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಅಥವಾ ವೈದ್ಯರ ಬಳಿ ಹೋಗಲು ಕೂಡ ಹಿಂಜರಿಯುತ್ತಾರೆ. ಅವರನ್ನು ಎಲ್ಲಿ ಹುಚ್ಚರಂತೆ ಕಾಣುತ್ತಾರೋ ಎಂಬ ಮನೋಭಾವನೆ ಅವರಲ್ಲಿರುತ್ತದೆ. ಇಂತಹ ಮನೋಭಾವನೆ ಬಿಟ್ಟು ಮನೋವೈದ್ಯರ ಬಳಿ ತೆರಳಿ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆಯ ಮನೋರೋಗ ತಜ್ಞ ಡಾ. ಶಿವಸ್ವಾಮಿ ಮಾತನಾಡಿ, ಯಾವುದೇ ಕೆಲಸ ಮಾಡುವಾಗ ಅದನ್ನು ಒತ್ತಡದಿಂದ ಮಾಡಿದರೆ ಸಫಲವಾಗುವುದಿಲ್ಲ. ಬದಲಿಗೆ ನಮ್ಮ ಕೆಲಸದ ಸಮಯ ಬಿಟ್ಟು ಉಳಿದ ಸಮಯದಲ್ಲಿ ವಿಶ್ರಾಂತಿ ಪಡೆಯಬೇಕು. ಮನೆಯವರೊಂದಿಗೆ ಬೆರೆಯಬೇಕು. ಸ್ನೇಹಿತರೊಂದಿಗೆ ಮಾತುಕತೆ ನಡೆಸಬೇಕು. ಅದನ್ನು ಯಾವ ವೇಳೆಯಲ್ಲಿ ಮಾಡಬೇಕು ಎಂಬುದನ್ನು ನೀವೇ ಯೋಜನೆ ರೂಪಿಸಿಕೊಳ್ಳಬೇಕು ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಸಿ. ಮಂಜುನಾಥ್ ಮಾತನಾಡಿ, ಜೀವನದಲ್ಲಿ ಸಂತೋಷ, ನಗು, ಪ್ರೀತಿ ಎಂಬುದು ಬಂದಾಗ ಜೀವನ ನೆಮ್ಮದಿಯಾಗಿರುತ್ತದೆ. ಕೋಪ, ಗಾಬರಿ, ಆತಂಕದಲಿದ್ದರೆ ಅದೇ ಒತ್ತಡವಾಗಿ ಮಾರ್ಪಾಟಾಗುತ್ತದೆ. ಇದರಿಂದ ನಮಗೆ ತಿಳಿಯದ ಹಾಗೆ ನಾವು ಬದಲಾಗುತ್ತೇವೆ. ಹಾಗಾಗಿ ನಮ್ಮ ಮೇಲಿರುವ ಒತ್ತಡವೇನು? ನಮ್ಮ ಸಮಸ್ಯೆ ಏನು ಎಂಬುದನ್ನು ಅರಿತುಕೊಂಡು ಅದನ್ನು ಪರಿಹರಿಸಿಕೊಂಡರೆ ಯಾವುದೇ ಸಮಸ್ಯೆಗಳಿಲ್ಲದೆ ನಗು ನಗುತ್ತಾ ಜೀವನ ಮಾಡಬಹುದಾಗಿದೆ ಎಂದರು.

ಮನೋರೋಗ ತಜ್ಞ ಡಾ.ಎ.ಎಂ. ಆದರ್ಶ, ಹಿರಿಯ ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಾಚಾರ್ಯೆ ಹರಿಣಾಕ್ಷಿ, ಜಿಲ್ಲಾ ಆಸ್ಪತ್ರೆಯ ರಾಜೇಂದ್ರ, ದಾಸಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಎಂ. ದಕ್ಷಿಣಮೂರ್ತಿ, ಎಸ್. ಪದ್ಮರೇಖಾ ಇದ್ದರು.

ಸಂವರ್ಧನ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಹಿರಿಯ ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.