ADVERTISEMENT

ಬಾಲಕಿ ಶವ ಪತ್ತೆ ಪ್ರಕರಣ: ನ್ಯಾಯಕ್ಕಾಗಿ 2 ದಿನ ಶವದೊಂದಿಗೆ ಕಳೆದ ಕುಟುಂಬ

ಓದೇಶ ಸಕಲೇಶಪುರ
Published 15 ಮೇ 2025, 4:08 IST
Last Updated 15 ಮೇ 2025, 4:08 IST
ಕೊಲೆಯಾದ ಬಾಲಕಿಯ ಗ್ರಾಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ಭೇಟಿ ನೀಡಿದಾಗ, ಗ್ರಾಮಸ್ಥರು ಅವರನ್ನು ಮುತ್ತಿಕೊಂಡು ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು
ಕೊಲೆಯಾದ ಬಾಲಕಿಯ ಗ್ರಾಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ಭೇಟಿ ನೀಡಿದಾಗ, ಗ್ರಾಮಸ್ಥರು ಅವರನ್ನು ಮುತ್ತಿಕೊಂಡು ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು   

ಬಿಡದಿ (ರಾಮನಗರ): ‘ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಮಗಳ ಸಾವಿಗೆ ನ್ಯಾಯ ಬೇಕು. ಪೊಲೀಸರು ಕೊಲೆಗಡುಕರನ್ನು ಬಂಧಿಸುವವರೆಗೆ ಆಕೆಯ ಶವಸಂಸ್ಕಾರ ಮಾಡುವುದಿಲ್ಲ...’ – ಹೋಬಳಿ ವ್ಯಾಪ್ತಿಯ ರೈಲ್ವೆ ಹಳಿ ಪಕ್ಕ ಮೂರು‌ ದಿನದ ಹಿಂದೆ ಅರೆ ನಗ್ನಾವಸ್ಥೆಯಲ್ಲಿ ಶವವಾಗಿ ಪತ್ತೆಯಾದ, ಮಾತು ಬಾರದ ಮತ್ತು ಕಿವಿ ಕೇಳಿಸದ 15 ವರ್ಷದ ಬಾಲಕಿ ತಾಯಿ ಹಾಗೂ ಕುಟುಂಬದವರ ನೋವಿನ ನುಡಿಗಳಿವು.

ತಮ್ಮ ಶೀಟಿನ ಮನೆ ಮುಂದೆ ಮಗಳ ಶವವನ್ನು ಎರಡು ದಿನಗಳಿಂದ ಇಟ್ಟುಕೊಂಡಿದ್ದ ಕುಟುಂಬ, ಪೊಲೀಸರು ಯಾವಾಗ ಹಂತಕರನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸುತ್ತಾರೊ ಎಂದು ಅನ್ನ, ನೀರು ಹಾಗೂ ನಿದ್ರೆ ಬಿಟ್ಟು ಹಗಲು–ರಾತ್ರಿ ಕಾದರು. ಊದಿಕೊಂಡಿದ್ದ ಶವ ದುರ್ನಾತ ಬೀರುತ್ತಿದ್ದರೂ ಅದ್ಯಾವುದೂ ಲೆಕ್ಕಿಸದೆ, ಮನೆ ಬಳಿ ರಾತ್ರಿಯಿಡೀ ಕಾವಲು ಕುಳಿತ ಊರಿನವರು ಸಹ ತಮ್ಮೂರ ಹುಡುಗಿಯ ಸಾವಿಗೆ ವಿಧಿಯನ್ನು ಶಪಿಸುತ್ತಾ, ಕುಟುಂಬದ ಜೊತೆಗೆ ನಿಂತರು.

ಶಾಸಕರು, ಪೊಲೀಸರು, ಅಧಿಕಾರಿಗಳು, ಮುಖಂಡರು, ಸಂಘ–ಸಂಸ್ಥೆ, ಸಂಘಟನೆಗಳ ಪದಾಧಿಕಾರಿಗಳು, ಮಾಧ್ಯಮದವರು ಸೇರಿದಂತೆ ಊರಿಗೆ ಯಾರೇ ಭೇಟಿ ನೀಡಿದರೂ, ‘ಯಾರೊ ದುಷ್ಟರು ನಮ್ಮ ಹುಡುಗಿಯನ್ನು ಹೊಡೆದು ಸಾಯಿಸಿದ್ದಾರೆ. ಅವಳ ಸಾವಿಗೆ ನ್ಯಾಯ ಕೊಡಿಸಿ ಸ್ವಾಮಿ’ ಎಂದು ಕುಟುಂಬದವರು ಹಾಗೂ ಊರಿನವರು ಅಂಗಲಾಚಿದರು.

ADVERTISEMENT

ದಿನದ ಬಳಿಕ ಮರಣೋತ್ತರ ಪರೀಕ್ಷೆ:

ಬಾಲಕಿ ಶವ ಗ್ರಾಮದಿಂದ ಅನತಿ ದೂರದಲ್ಲಿರುವ ರೈಲು ಹಳಿ ಬಳಿ ಮೇ 12ರಂದು ಬೆಳಿಗ್ಗೆ 7ರ ಸುಮಾರಿಗೆ ಪತ್ತೆಯಾಗಿತ್ತು. ಬೇರೆ ಕಡೆ ಬಾಲಕಿಯನ್ನು ಕೊಲೆ ಮಾಡಿ ಹಳಿ ಬಳಿಯ ಹಳ್ಳದಲ್ಲಿ ಶವ ಎಸೆದಿದ್ದ ಹಂತಕರು, ರೈಲು ಅಪಘಾತದಲ್ಲಿ ಸತ್ತಿದ್ದಾಳೆಂದು ಬಿಂಬಿಸಲು ಯತ್ನಿಸಿದ್ದರು. ಹಾಗಾಗಿ, ರೈಲ್ವೆ ಪೊಲೀಸರ ಬದಲು, ಬಿಡದಿ ಪೊಲೀಸರೇ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ರಾಜರಾಜೇಶ್ವರಿ ಆಸ್ಪತ್ರೆಗೆ ಶವ ಸಾಗಿಸಿದ್ದ ಪೊಲೀಸರು ಮಾರನೇಯ ದಿನ ಮರಣೋತ್ತರ ಪರೀಕ್ಷೆ ಮಾಡಿಸಿ, ಮಧ್ಯಾಹ್ನ ಕುಟುಂಬದವರಿಗೆ ಶವವನ್ನು ಹಸ್ತಾಂತರಿಸಿದ್ದರು. ಇದೇ ಸಂದರ್ಭದಲ್ಲಿ ಸ್ಥಳೀಯ ಶಾಸಕ ಎಚ್.ಸಿ. ಬಾಲಕೃಷ್ಣ ಸೇರಿದಂತೆ ಕೆಲ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ ಹೋಗಿದ್ದರು.

ಮರಣೋತ್ತರ ಪರೀಕ್ಷೆ ಬಳಿಕ ವೈದ್ಯರ ವರದಿಯಲ್ಲಿ, ಬಾಲಕಿ ಮೇಲೆ ಅತ್ಯಾಚಾರ ನಡೆದಿದೆಯೇ ಇಲ್ಲವೇ? ಹೇಗೆ ಮೃತಪಟ್ಟಿದ್ದಾಳೆ ಎಂಬ ಮಾಹಿತಿಯನ್ನು ತಿಳಿಯಲು ಕುಟುಂಬ ಹಾಗೂ ಇಡೀ ಗ್ರಾಮ ಕಾದಿತ್ತು. ಆದರೆ, ವೈದ್ಯರು ವರದಿ ನೀಡಲು ಕಾಲಾವಕಾಶ ಕೇಳಿರುವುದಾಗಿ ಪೊಲೀಸರು ತಿಳಿಸುತ್ತಿದ್ದಂತೆ, ಕುಟುಂಬದವರು ಶವದ ಅಂತ್ಯಸಂಸ್ಕಾರ ಮಾಡಲು ಹಿಂದೇಟು ಹಾಕಿದರು.

‘ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ’, ‘ಏನೊ ಮುಚ್ಚಿಡುತ್ತಿದ್ದಾರೆ’ ಎಂದು ಕುಟುಂಬದವರು ಮತ್ತು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದರು. ಅದಕ್ಕೆ ಗ್ರಾಮಸ್ಥರು ಹಾಗೂ ಕೆಲ ಸಂಘಟನೆಗಳ ಪದಾಧಿಕಾರಿಗಳು ದನಿಗೂಡಿಸಿದರು. ವರದಿ ಬಂದು, ನಮಗೆ ನ್ಯಾಯ ಸಿಗುವವರೆಗೆ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದು ಶವದೊಂದಿಗೆ ರಾತ್ರಿ ಕಳೆದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರ ಮನವೊಲಿಕೆಗೂ ಬಗ್ಗದೆ ಧರಣಿ ಮುಂದುವರಿಸಿದರು.

ಬಾಲಕಿ ಸಾವಿಗೆ ನ್ಯಾಯಕ್ಕೆ ಆಗ್ರಹಿಸಿ ರಾಮನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದ ಹಕ್ಕಿಪಿಕ್ಕಿ ಸಮುದಾಯದವರನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಭೇಟಿ ಮಾಡಿದರು
ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ ಒತ್ತಡ ಹಾಗೂ ಪ್ರಭಾವಕ್ಕೂ ಒಳಗಾಗದೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಬಾಲಕಿ ಸಾವಿಗೆ ನ್ಯಾಯ ಒದಗಿಸಲಾಗುವುದು
ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ಡಿ.ಕೆ. ಶಿವಕುಮಾರ್
ಕೆಲವರು ಬಾಲಕಿ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಬಾಲಕಿ ಸಾವಿಗೆ ನ್ಯಾಯಕ್ಕೆ ಆಗ್ರಹಿಸುವ ಭರದಲ್ಲಿ ಆಕೆಯ ಚಿತ್ರವನ್ನು ಪೋಸ್ಟ್‌ ಮಾಡುತ್ತಿದ್ದಾರೆ. ಕಾನೂನಿಗೆ ವಿರುದ್ಧವಾಗಿ ಯಾರೂ ಈ ರೀತಿ ಮಾಡಬಾರದು
ಆರ್. ಶ್ರೀನಿವಾಸ ಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಆರ್. ಶ್ರೀನಿವಾಸ ಗೌಡ
ಕಡೆಗೂ ಅಂತ್ಯಕ್ರಿಯೆಗೆ ಮನವೊಲಿಕೆ
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಬುಧವಾರ ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿದರು. ಕುಟುಂಬದವರಿಗೆ ಸಾಂತ್ವನ ಹೇಳಿ ಬಾಲಕಿ ಸಾವಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಶವವನ್ನು ಮನೆ ಮುಂದೆ ಇಟ್ಟುಕೊಳ್ಳದೆ ಅಂತ್ಯಕ್ರಿಯೆ ನೆರವೇರಿಸುವಂತೆ ಸಲಹೆ ನೀಡಿದರು. ಸಂಜೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಗ್ರಾಮಕ್ಕೆ ಭೇಟಿ ನೀಡುವುದು ಖಚಿತವಾಯಿತು. ಅದರ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ಹಿರಿಯ ಪೊಲೀಸರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಕೆಲ ಮುಖಂಡರು ಅಂತ್ಯಕ್ರಿಯೆ ನಡೆಸುವಂತೆ ಕುಟುಂಬದವರಿಗೆ ಮನವೊಲಿಕೆ ಮಾಡಲು ಮುಂದಾದರು. ಈ ವೇಳೆ ಕೆಲ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಮುದಾಯದ ಕೆಲವರು ‘ನ್ಯಾಯ ಸಿಗುವವರೆಗೆ ಅಂತ್ಯಕ್ರಿಯೆ ನಡೆಸಲ್ಲ’ ಎಂದು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಪದಾಧಿಕಾರಿಗಳು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದು ಗೊಂದಲ ಸೃಷ್ಟಿಯಾಯಿತು. ಆಗ ಬಾಲಕಿ ತಾಯಿ ಅಂತ್ಯಕ್ರಿಯೆ ಒಪ್ಪಿಗೆ ಸೂಚಿಸಿದರು. ತಕ್ಷಣ ಪೊಲೀಸರು ಸ್ಥಳೀಯರ ನೆರವಿನಿಂದ ಆಂಬುಲೆನ್ಸ್‌ಗೆ ಬಾಲಕಿ ಶವ ಸಾಗಿಸಿದರು. ನಂತರ ಅಧಿಕಾರಿಗಳು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಊರಿನ ಸ್ಮಶಾನದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಬಾಲಕಿ ಅಂತ್ಯಕ್ರಿಯೆ ಜರುಗಿತು. ಬಳಿಕ 5.30ರ ಸುಮಾರಿಗೆ ಉಪ ಮುಖ್ಯಮಂತ್ರಿ ಗ್ರಾಮಕ್ಕೆ ಭೇಟಿ ನೀಡಿದರು.

ಪರಿಹಾರ ವಿತರಿಸಿದ ಡಿಸಿಎಂ; ನ್ಯಾಯದ ಭರವಸೆ

ಗ್ರಾಮಕ್ಕೆ ಸಂಜೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬಾಲಕಿ ಕುಟುಂಬಕ್ಕೆ ಪರಿಹಾರವಾಗಿ ₹412500 ಹಾಗೂ ಅಂತ್ಯಕ್ರಿಯೆ ವೆಚ್ಚಕ್ಕಾಗಿ ಸ್ಥಳೀಯ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ₹50 ಸಾವಿರದ ಚೆಕ್ ವಿತರಿಸಿದರು.

ಬಳಿಕ ಮಾತನಾಡಿದ ಅವರು ‘ಬಾಲಕಿ ಸಾವು ಶಂಕಾಸ್ಪದವಾಗಿದೆ. ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಸೇರಿದಂತೆ ವಿವಿಧ ರೀತಿಯ ಅನುಮಾನಗಳನ್ನು ಕುಟುಂಬದವರು ಮತ್ತು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಯಾರ‌ ಮೇಲೂ ಅನುಮಾನವಿಲ್ಲ ಎಂದು ಬಾಲಕಿ ಕುಟುಂಬದವರು ಹೇಳುತ್ತಿದ್ದಾರೆ. ಆಕೆಯ ಸಾವಿಗೆ ನ್ಯಾಯ ಕೊಡುವ ಜೊತೆಗೆ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಡಿಸಿಎಂ ಹೊರಡುವಾಗ ಅವರನ್ನು ಮುತ್ತಿಕೊಂಡ ‌ಗ್ರಾಮಸ್ಥರು ‘ಬೇಕೇ ಬೇಕು ನ್ಯಾಯ ಬೇಕು’ ಎಂದು ಕೂಗಿದರು. ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಉಪ ವಿಭಾಗಾಧಿಕಾರಿ ಪಿ.ಕೆ. ಬಿನೋಯ್ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

ಶವ ಕಂಡು ಕಣ್ಣೀರಿಟ್ಟ ಅಧ್ಯಕ್ಷೆ

ಗ್ರಾಮಕ್ಕೆ ಭೇಟಿ ನೀಡಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಬಾಲಕಿ ಶವ ನೋಡಿ ಆಕೆಯ ತಾಯಿಯ ಕೈ ಹಿಡಿದುಕೊಂಡು ಕಣ್ಣೀರು ಹಾಕಿದರು. ಬಳಿಕ ಮಾತನಾಡಿದ ಅವರು ‘ಮುಗ್ಧೆಯನ್ನು ಕೊಲೆ ಮಾಡಿರುವ ಕ್ರೂರಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಬಿಡುವ ಪ್ರಶ್ನೆಯೆ ಇಲ್ಲ. ಅಲೆಮಾರಿ ಸಮುದಾಯದ ಹೆಣ್ಣು ಮಗಳಾಗಿರುವ ನಾನು ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೆ ಕುಟುಂಬದೊಂದಿಗೆ ನಿಲ್ಲುತ್ತೇನೆ’ ಎಂದರು.

‘ಬಾಲಕಿ ಕುಟುಂಬಕ್ಕೆ ಸೂಕ್ತ ಪರಿಹಾರದ ಜೊತೆಗೆ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವೆ. ಗ್ರಾಮದಲ್ಲಿ ಮೂಲಸೌಕರ್ಯ ಒದಗಿಸಲು ನಿಗಮದಿಂದ ಅನುದಾನ ಒದಗಿಸಲಾಗುವುದು’ ಎಂದು ಹೇಳಿದರು. ನಂತರ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟಿಸುತ್ತಿದ್ದ ಸಮುದಾಯದವರನ್ನು ಭೇಟಿ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರವನ್ನು ಆಗ್ರಹಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರನ್ನು ಭೇಟಿಯಾಗಿ ಬೇಗ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದರು. ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆನಂದ್ ಕುಮಾರ್ ತಹಶೀಲ್ದಾರ್ ತೇಜಸ್ವಿನಿ ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್ ಹಾಗೂ ಸಮುದಾಯದ ಮುಖಂಡರು ಇದ್ದರು.

ಹಂತಕರನ್ನು ಎನ್‌ಕೌಂಟರ್‌ ಮಾಡಿ: ಪ್ರತಿಭಟನಾ ಮೆರವಣಿಗೆಯಲ್ಲಿ ಆಗ್ರಹ

ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ನಡೆದ 15 ವರ್ಷದ ಬಾಲಕಿಯ ಕೊಲೆ ಖಂಡಿಸಿ, ಕರ್ನಾಟಕ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದರು. ಅದಕ್ಕೂ ಮುಂಚೆ ಸದಸ್ಯರು ಐಜೂರು ವೃತ್ತದಿಂದ ಡಿ.ಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬೇಕೇ ಬೇಕು, ನ್ಯಾಯ ಬೇಕು ಎಂದು ಘೋಷಣೆಗಳನ್ನು ಕೂಗಿದರು. ಮಾತು ಬಾರದ ಮತ್ತು ಕಿವಿ ಕೇಳಿಸದ ಮುಗ್ಧ ಬಾಲಕಿಯನ್ನು ಕೊಲೆ ಮಾಡಿದ ದುರುಳರನ್ನು ಪೊಲೀಸರು ಆದಷ್ಟು ಬೇಗ ಬಂಧಿಸಿ ಅವರನ್ನು ಎನ್‌ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಬಾಲಕಿಯ ಚಿತ್ರವನ್ನು ಪ್ರದರ್ಶಿಸುತ್ತಾ ಕಣ್ಣೀರು ಹಾಕಿದರು.

ಈ ವೇಳೆ ಮಾತನಾಡಿದ ಸಮಿತಿ ರಾಜ್ಯಾದ್ಯಕ್ಷ ಜಗ್ಗು, ‘ಮೃತ ಬಾಲಕಿಯ ಗ್ರಾಮದಲ್ಲಿರುವ ಸಮುದಾಯದವರಿಗೆ ಸೂಕ್ತ ಭದ್ರತೆ ಇಲ್ಲ. ಅಮಾಯಕ ಬಾಲಕಿ ಕೊಲೆಯಾಗಿ ಮೂರು ದಿನಗಳಾದರೂ ಪೊಲೀಸರು ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಬಡವರಿಗೆ ನ್ಯಾಯ ಮರೀಚಿಕೆಯಾಗಿದೆ. ಪೊಲೀಸರು ಇನ್ನಾದರೂ ತನಿಖೆಯನ್ನು ತೀವ್ರಗೊಳಿಸಿ ಆರೋಪಿಗಳನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು. ಈ ವೇಳೆ ಸಮುದಾಯದವರು ಅಳಲು ತೋಡಿಕೊಂಡರು. ಅವುಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರ ನಿಯೋಗ ಜಿಲ್ಲಾಧಿಕಾರಿ ಭೇಟಿ ಮಾಡಿ ಮನವಿ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.