ADVERTISEMENT

ರಾಮನಗರ | ಸ್ಕ್ಯಾನಿಂಗ್ ಯಂತ್ರ ದುರ್ಬಳಕೆ: ಸಿಐಡಿ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 6:41 IST
Last Updated 17 ಜನವರಿ 2024, 6:41 IST
ಕನಕಪುರದ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಭ್ರೂಣ ಪತ್ತೆ ಸ್ಕ್ಯಾನಿಂಗ್ ಯಂತ್ರ ದುರ್ಬಳಕೆ ಆರೋಪ ಎದುರಿಸುತ್ತಿರುವ ವೈದ್ಯೆಯನ್ನು ಅಮಾನತುಗೊಳಿಸಿ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು ಎಂದು ಆಗ್ರಹಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು
ಕನಕಪುರದ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಭ್ರೂಣ ಪತ್ತೆ ಸ್ಕ್ಯಾನಿಂಗ್ ಯಂತ್ರ ದುರ್ಬಳಕೆ ಆರೋಪ ಎದುರಿಸುತ್ತಿರುವ ವೈದ್ಯೆಯನ್ನು ಅಮಾನತುಗೊಳಿಸಿ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು ಎಂದು ಆಗ್ರಹಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು   

ರಾಮನಗರ: ಜಿಲ್ಲೆಯ ಕನಕಪುರದ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಭ್ರೂಣ ಪತ್ತೆ ಸ್ಕ್ಯಾನಿಂಗ್ ಯಂತ್ರ ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಪ್ರಸೂತಿ ತಜ್ಞೆ ಡಾ. ದಾಕ್ಷಾಯಿಣಿ ಅವರನ್ನು ಅಮಾನತುಗೊಳಿಸಬೇಕು ಹಾಗೂ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಧರಣಿ ನಡೆಸಿದ ಪದಾಧಿಕಾರಿಗಳು, ಘಟನೆ ಬೆಳಕಿಗೆ ಬಂದು ಹನ್ನೆರಡು ದಿನಗಳಾದರೂ ವೈದ್ಯೆ ವಿರುದ್ಧ ಕ್ರಮ ಕೈಗೊಳ್ಳದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ವಿರುದ್ಧ ಅಸಮಾಧಾನ ಹೊರಹಾಕಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ಸ್ಕ್ಯಾನಿಂಗ್ ಯಂತ್ರವನ್ನು ದಾಕ್ಷಾಯಿಣಿ ಅವರು ಮೇಲಧಿಕಾರಿಗಳ ಅನುಮತಿ ಇಲ್ಲದೆ ತಮ್ಮ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಪ್ರಸವಪೂರ್ವ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ತಡೆ (ಪಿಸಿ ಆ್ಯಂಡ್ ಪಿಎನ್‌ಡಿಟಿ) ಕಾಯ್ದೆ ಉಲ್ಲಂಘಿಸಿ, ಎಂಪ್ಯಾನಲ್ ತರಬೇತಿ ಪಡೆಯದಿದ್ದರೂ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿ ಭ್ರೂಣ ಪತ್ತೆ ಮತ್ತು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ ಎಂದು ದೂರಿದರು.

ADVERTISEMENT

ಜಿಲ್ಲಾ ತಪಾಸಣೆ ಮತ್ತು ಮೇಲ್ವಿಚಾರಣೆ ಸಮಿತಿ ಸದಸ್ಯರ ತಂಡ ಜ. 4ರಂದು ಆಸ್ಪತ್ರೆಗೆ ಭೇಟಿ ನೀಡಿದಾಗ, ಹೆರಿಗೆ ಕೊಠಡಿಯಲ್ಲಿ ಸ್ಕ್ಯಾನಿಂಗ್ ಯಂತ್ರ ಇರುವುದನ್ನು ಪತ್ತೆ ಹಚ್ಚಿದೆ. ಸ್ಥಳದಲ್ಲಿದ್ದ ಸಿಬ್ಬಂದಿಯಿಂದಲೂ ಲಿಖಿತ ಹೇಳಿಕೆ ಪಡೆದಿದೆ. ಸಾಕ್ಷ್ಯ ಸಮೇತ ಕೃತ್ಯವನ್ನು ಪತ್ತೆ ಹಚ್ಚಿದ್ದರೂ, ವೈದ್ಯೆ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಒಕ್ಕೂಟ ದನಿ ಎತ್ತಿದ ಬಳಿಕ ಜ. 8ರಂದು ವೈದ್ಯೆಗೆ ಡಿಎಚ್‌ಒ ನೋಟಿಸ್ ಕೊಟ್ಟಿದ್ದಾರೆ. ಇಷ್ಟಾದರೂ ವೈದ್ಯೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರೂ, ಸ್ವಂತ ಕ್ಲಿನಿಕ್ ನಡೆಸುತ್ತಿರುವ ವೈದ್ಯೆ ಅಲ್ಲಿಯೂ ಸ್ಕ್ಯಾನಿಂಗ್ ಯಂತ್ರ ಬಳಸಿ ಅಕ್ರಮವಾಗಿ ಹೆಣ್ಣು ಭ್ರೂಣ ಪತ್ತೆಯಲ್ಲಿ ತೊಡಗಿರುವ ಆರೋಪಗಳಿವೆ. ಅವರ ರಕ್ಷಣೆಗೆ ಪತಿ ಡಾ. ಮಲ್ಲೇಶ್, ಮೇಲಧಿಕಾರಿಗಳು ಹಾಗೂ ಕಾಣದ ಕೈಗಳು ನಿಂತಿವೆ. ಬಲವಾದ ಸಾಕ್ಷ್ಯವಿದ್ದರೂ ಅಮಾನತುಗೊಳಿಸದೆ, ಕೇವಲ ನೋಟಿಸ್ ಕೊಟ್ಟು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಬೇಕು, ಅಕ್ರಮವಾಗಿ ಹಣ ಸಂಪಾದಿಸಿ ಆದಾಯ ಮೀರಿ ಆಸ್ತಿ ಹೊಂದಿರುವ ವೈದ್ಯೆ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಇಲಾಖೆಯ ಆಯುಕ್ತರು, ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಎರಡು ದಿನದೊಳಗೆ ವೈದ್ಯೆಯನ್ನು ಅಮಾನತುಗೊಳಿಸದಿದ್ದರೆ ಆಸ್ಪತ್ರೆ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಒಕ್ಕೂಟದ ಕೆ.ಆರ್. ಸುರೇಶ್, ಭಾಸ್ಕರ, ರಾ.ಬಿ. ನಾಗರಾಜ್, ಜಗದೀಶ್, ಎಚ್‌.ಎಂ. ಗಿರೀಶ್, ಕುಮಾರ್, ಜಯಕುಮಾರ್ ಹಾಗೂ ಇತರರು ಇದ್ದರು.

ಪ್ರತಿಕ್ರಿಯೆ ಆಧರಿಸಿ ಕ್ರಮ: ಡಿಎಚ್‌ಒ

‘ವೈದ್ಯೆ ದಾಕ್ಷಾಯಿಣಿ ಅವರು ಸಾರ್ವಜನಿಕ ಆಸ್ಪತ್ರೆಯಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸ್ಕ್ಯಾನಿಂಗ್ ಯಂತ್ರ ಸ್ಥಳಾಂತರಿಸಿ ಬಳಕೆ ಮಾಡಿದ್ದಾರೆ. ಯಂತ್ರದ ಸ್ಥಿತಿ ಕುರಿತು ಕಚೇರಿಗೆ ಯಾವುದೇ ಮಾಹಿತಿ ನೀಡಿಲ್ಲ. ಇನ್ನೂ ಕೆಲ ಸೇವಾ ನ್ಯೂನತೆ ಹಿನ್ನೆಲೆಯಲ್ಲಿ ಕಾರಣ ಕೇಳಿ ಜ. 8ರಂದು ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರತಿಕ್ರಿಯೆಗೆ 7 ದಿನ ಕಾಲಾವಕಾಶವಿದ್ದು ಇಂದು ಕಡೆಯ ದಿನವಾಗಿದ್ದು ಪ್ರತಿಕ್ರಿಯೆ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು. ಪ್ರತಿಕ್ರಿಯೆ ನೀಡಿದರೆ ಅದನ್ನು ಆಧರಿಸಿ ಮುಂದಿನ ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಒಕ್ಕೂಟದ ಪದಾಧಿಕಾರಿಗಳಿಗೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.