
ಮಾಗಡಿ: ಪಟ್ಟಣದಲ್ಲಿ ನಾಲ್ಕೈದು ದಿನಗಳಿಂದ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ ಎಂಬ ಮಾತುಗಳು ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಆ ಕಡೆಯಿಂದ ಕರೆ ಬಂದರೂ, ಈ ಕಡೆಯಿಂದ ಕರೆ ಮಾಡಿದರೂ ಸರಿಯಾಗಿ ನೆಟ್‌ವರ್ಕ್ ಸಿಗುತ್ತಿಲ್ಲ ಎಂಬ ಮಾತು ಮೊಬೈಲ್ ಫೋನ್ ಬಳಕೆದಾರರ ಬಾಯಲ್ಲಿ ಸಾಮಾನ್ಯವಾಗಿದೆ.
ಪಟ್ಟಣದ ಮಂಜುನಾಥ ಬಡಾವಣೆಯಲ್ಲಿ ಅಳವಡಿಸಿದ್ದ ಜಿಯೋ ಟವರ್ ತೆರವು ಮಾಡಿದಾಗಿನಿಂದ ಈ ಸಮಸ್ಯೆ ಎದುರಾಗಿದೆ. ಮೊಬೈಲ್ ಫೋನ್‌ನಲ್ಲಿ ಇಂಟರ್‌ನೆಟ್ ಬಳಕೆದಾರರು, ಬ್ಯಾಂಕ್, ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳು, ಅಂಗಡಿಗಳು ಸೇರಿದಂತೆ ವಿವಿಧಡೆ ವೈಫೈ ಬಳಸುವವರು ನೆಟ್‌ವರ್ಕ್ ಸಮಸ್ಯೆಯಿಂದಾಗಿ ತತ್ತರಿಸಿದ್ದಾರೆ.
ಜಿಲ್ಲಾಧಿಕಾರಿ ಆದೇಶ:
‘ದೂರಿನ ಮೇರೆಗೆ ಮಂಜುನಾಥ ಬಡಾವಣೆಯಲ್ಲಿದ್ದ ಟವರ್ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಇತ್ತೀಚೆಗೆ ಆದೇಶ ಮಾಡಿದ್ದಾರೆ. ಹಾಗಾಗಿ, ಟವರ್ ತೆರವುಗೊಳಿಸಲಾಗಿದೆ. ಹೀಗಾಗಿ, ಪಟ್ಟಣದಲ್ಲಿ ಜಿಯೊ ನೆಟ್‌ವರ್ಕ್ ಸಮಸ್ಯೆ ಎದುರಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಟವರ್ ವಿರುದ್ಧ 2017ರಲ್ಲಿ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿತ್ತು. ಈ ಪತ್ರವನ್ನು ಜಿಲ್ಲಾಧಿಕಾರಿಗೆ ಮತ್ತು ಪುರಸಭೆಗೆ ಕಳಿಸಿ, ಅಲ್ಲಿಂದ ಇಲ್ಲಿವರೆಗೂ ಯಾವುದೇ ಆದೇಶ ಆಗಿರಲಿಲ್ಲ. 2008ರಲ್ಲಿ ಭಾರತೀಯ ಏರ್‌ಟೆಲ್ 20 ವರ್ಷಗಳ ಅಗ್ರಿಮೆಂಟ್‌ನೊಂದಿಗೆ ಟವರ್ ನಿರ್ಮಾಣ ಮಾಡಿತ್ತು’ ಎಂದು ಹೇಳಿದರು.
ಶಿಥಿಲ ಮನೆ ಮೇಲಿದ್ದ ಟವರ್ ತೆರವು ವಿಷಯವು ಲೋಕಾಯುಕ್ತ ಕುಂದುಕೊರತೆ ಸಭೆಯಲ್ಲಿ ಪ್ರಸ್ತಾಪವಾಗಿ ಕೂಡಲೇ ತೆರವಿಗೆ ಡಿ.ಸಿ ಅವರಿಗೆ ಲೋಕಾಯುಕ್ತ ಸೂಚಿಸಿದ್ದರು. ಅದರಂತೆ ತೆರವುಗೊಳಿಸಲಾಗಿದೆ.ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ
‘2028ಕ್ಕೆ ಅವಧಿ ಮುಗಿಯುತಿತ್ತು. ಆದರೆ ಟವರ್ ಅಳವಡಿಸಿದ್ದ ಮನೆ ಶಿಥಿಲವಾಗಿದ್ದರಿಂದ, ಯಾವಾಗ ಬೇಕಾದರೂ ಟವರ್ ಬಿದ್ದು ಅನಾಹುತ ಸಂಭವಿಸುವ ಸ್ಥಿತಿಗೆ ತಲುಪಿತ್ತು. ಪುರಸಭೆ ಎಂಂಜಿನಿಯರ್ ಸ್ಥಳ ಪರಿಶೀಲನೆ ಮಾಡಿದಾಗ, ಟವರ್ ಇದ್ದ ಮನೆ ಬಿರುಕು ಬೀಡುತ್ತಿದೆ ಎಂದು ವರದಿ ಕೊಟ್ಟಿದ್ದರು. ಟವರ್ ಭಾರಕ್ಕೆ ಮನೆ ಬೀಳುವ ಸ್ಥಿತಿಗೆ ತಲುಪಿರುವುದರಿಂದ ತೆರವು ಮಾಡುವಂತೆ ಕಂಪನಿಗೆ ನೋಟಿಸ್ ಕೊಡಲಾಗಿತ್ತು’ ಎಂದರು.
‘ಪಟ್ಟಣದಲ್ಲಿ ಲೋಕಾಯುಕ್ತ ನಡೆಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಈ ಪ್ರಕರಣ ಪ್ರಸ್ತಾಪವಾಗಿತ್ತು. ಆಗ ಲೋಕಾಯುಕ್ತರು ಕೂಡಲೇ ಟವರ್ ತೆರವಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ಅದರಂತೆ, ಡಿ.ಸಿ ಆದೇಶದ ಮೇರೆಗೆ ಕಂಪನಿಯವರೇ ಟವರ್ ತೆರವು ಮಾಡಿದ್ದಾರೆ. ಇದು ಏಕಾಏಕಿ ಒಂದು ದಿನಕ್ಕೆ ನಡೆದ ಪ್ರಕರಣವಲ್ಲ’ ಎಂದು ಸ್ಪಷ್ಟಪಡಿಸಿದರು.
4 ತಿಂಗಳು ಬೇಕು:
ನಿಯಮಾನುಸಾರ ಯಾವುದೇ ಕಂಪನಿ ಹೊಸದಾಗಿ ಟವರ್ ನಿರ್ಮಾಣ ಮಾಡಬೇಕಾದರೆ ಕನಿಷ್ಠ ನಾಲ್ಕು ತಿಂಗಳು ಬೇಕು. ಹೊಸ ಜಾಗ ಹುಡುಕಿ ಸರ್ಕಾರದಿಂದ ಎಲ್ಲಾ ರೀತಿಯ ಅನುಮತಿ ಪಡೆದುಕೊಂಡು ನೆಟ್ ವರ್ಕ್ ಸಮಸ್ಯೆ ಬಗೆಹರಿಸಲು ನಾಲ್ಕು ತಿಂಗಳು ಬೇಕಾಗಬಹುದು ಎಂದು ಕಂಪನಿಯ ನೆಟ್ ವರ್ಕ್ ಇಂಜಿನಿಯರ್ ತಿಳಿಸಿದರು.
ಮೂರು ವರ್ಷದಿಂದ ಪಟ್ಟಣದಲ್ಲಿ ಹೊಸದಾಗಿ ಮೊಬೈಲ್ ಟವರ್ ನಿರ್ಮಾಣಕ್ಕೆ ಬಾರಿ ವಿರೋಧ ವ್ಯಕ್ತವಾಗಿದೆ. ಕಲ್ಯಾಗೇಟ್ ಬಳಿ ನಿರ್ಮಿಸಲು ಜಾಗ ಹುಡುಕಿ ಕಂಪನಿಯವರು ಬಂದಾಗ ಜನಗಳಿಂದ ತೀವ್ರ ವಿರೋಧವಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಕೆಲಸ ಪೂರ್ಣವಾಗಿಲ್ಲ. ಟವರ್‌ನಿಂದ ಹೆಚ್ಚು ವಿಕಿರಣ ಹೊರಹೊಮ್ಮುವುದರಿಂದ ಮನುಷ್ಯರ ಆರೋಗ್ಯದ ಮೇಲೆ ಸಮಸ್ಯೆಯಾಗುತ್ತದೆ ಎಂದು ಜನ ವಿರೋಧಿಸುತ್ತಿದ್ದಾರೆ. ಇದರಿಂದಾಗಿ ಗ್ರಾಹಕರಿಗೆ ಸರಿಯಾಗಿ ಸೇವೆ ಸಹ ನೀಡಲು ಸಾಧ್ಯವಾಗಿಲ್ಲ ಎಂದು ನೆಟ್‌ವರ್ಕ್ ಮ್ಯಾನೇಜರ್ ನವೀನ್ ಹೇಳಿದರು.
ಮಾಗಡಿಯ ಕಲ್ಯಾಗೇಟ್ ಬಳಿ ಇರುವ ಕೆನರಾ ಬ್ಯಾಂಕ್‌ನಲ್ಲಿ ಇಂಟರ್‌ನೆಟ್ ಸಮಸ್ಯೆಯಿಂದಾಗಿ ತಮ್ಮ ಕೆಲಸ ವಿಳಂಬವಾಗಿದ್ದರಿಂದ ಗ್ರಾಹಕರು ಬ್ಯಾಂಕ್ ಹೊರಗಡೆ ನಿಂತಿದ್ದರು
ಟವರ್ ನಿರ್ಮಾಣಕ್ಕೆ ಕನಿಷ್ಠ 4 ತಿಂಗಳು ಬೇಕು
ನಿಯಮಾನುಸಾರ ಯಾವುದೇ ಕಂಪನಿ ಹೊಸದಾಗಿ ಟವರ್ ನಿರ್ಮಾಣ ಮಾಡಬೇಕಾದರೆ ಕನಿಷ್ಠ ನಾಲ್ಕು ತಿಂಗಳು ಬೇಕು. ಹೊಸ ಜಾಗ ಹುಡುಕಿ ಸರ್ಕಾರದಿಂದ ಎಲ್ಲಾ ರೀತಿಯ ಅನುಮತಿ ಪಡೆದುಕೊಂಡು ಟವರ್ ನಿರ್ಮಾಣ ಮಾಡಿ ಈಗಿನ ನೆಟ್‌ವರ್ಕ್ ಸಮಸ್ಯೆ ಬಗೆಹರಿಸಲು ನಾಲ್ಕು ತಿಂಗಳು ಬೇಕಾಗುತ್ತದೆ ಎನ್ನುತ್ತಾರೆ ಕಂಪನಿಯ ನೆಟ್‌ವರ್ಕ್ ಎಂಜಿನಿಯರ್.
ಪಟ್ಟಣದಲ್ಲಿ ಎರಡು ಸಾವಿರ ಜಿಯೊ ಗ್ರಾಹಕರಿದ್ದು ಕಂಪನಿಯ 3 ಟವರ್ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಪ್ರತಿ ದಿನ 3 ಟಿಬಿ ಇಂಟರ್‌ನೆಟ್ ಬಳಕೆಯಾಗುತ್ತಿದ್ದು ನೆರ್ಟ್‌ವರ್ಕ್ ಸಮಸ್ಯೆ ಹೆಚ್ಚಾಗಿದೆ. ಪಟ್ಟಣದಲ್ಲಿ ಕನಿಷ್ಠ 5ರಿಂದ 6 ಟವರ್ ಇದ್ದಾಗ ಮಾತ್ರ ಸರಿಯಾಗಿ ಸೇವೆ ನೀಡಲು ಸಾಧ್ಯ. ಒಂದು ಟವರ್ ನಿರ್ಮಾಣಕ್ಕೆ ₹1.50 ಕೋಟಿ ವೆಚ್ಚವಾಗಲಿದೆ ಎಂದು ಜಿಯೊ ಕಂಪನಿ ವ್ಯವಸ್ಥಾಪಕರು ತಿಳಿಸಿದರು. ಮೂರು ವರ್ಷದಿಂದಲೂ ಹೊಸ ಟವರ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈಗ ಹಳೆ ಟವರ್ ತೆರವಿನಿಂದ ಗ್ರಾಹಕರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಹೊಸ ಟವರ್ ನಿರ್ಮಾಣ ಮಾಡಬೇಕಾದರೆ ಕಂಪನಿಯವರಿಗೆ ಜನಗಳಿಂದ ವಿರೋಧ ಬರುವುದಿಲ್ಲ ಎಂಬ ಭರವಸೆ ಸಿಗಬೇಕು. ಆಗ ಮಾತ್ರ ಹೊಸ ಟವರ್ ಮಂಜೂರಾತಿ ಮಾಡಬಹುದು. ಇಲ್ಲವಾದರೆ ನೆಟ್‌ವರ್ಕ್ ಸಮಸ್ಯೆ ಹೀಗೆಯೇ ಮುಂದುವರಿಯುತ್ತದೆ ಎಂಂದು ಹೇಳಿದರು.
ಜನ ಏನಂತಾರೆ?
‘ನೆಟ್‌ವರ್ಕ್ ಇಲ್ಲದೆ ವ್ಯವಹಾರವಿಲ್ಲ’
ಜಿಯೋ ಟವರ್ ತೆರವಾಗಿರುವುದರಿಂದ ಪ್ರತಿ ದಿನ ಗ್ರಾಹಕರು ಮೊಬೈಲ್ ಇಂಟರ್‌ನೆಟ್ ಸಮಸ್ಯೆ ಇದೆ ಎಂದು ಹೇಳಿಕೊಂಡು ಅಂಗಡಿಗೆ ಬರುತ್ತಿದ್ದಾರೆ. ಅವರಿಗೆ ಸಮಸ್ಯೆ ಕುರಿತು ಹೇಳಿ ಕಳಿಸುತ್ತಿದ್ದೇವೆ. ನೆಟ್‌ವರ್ಕ್ ಸಮಸ್ಯೆ ಹೆಚ್ಚಾಗಿರುವುದರಿಂದ ಗ್ರಾಹಕರಿಗೆ ತುಂಬಾ ತೊಂದರೆಯಾಗಿದೆ. ಆದಷ್ಟು ಬೇಗನೆ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ವ್ಯಾಪಾರ–ವ್ಯವಹಾರಕ್ಕೆ ಸಮಸ್ಯೆಯಾಗಲಿದೆ – ಪವನ್ ಮೊಬೈಲ್ ಅಂಗಡಿ ಮಾಲೀಕ ಮಾಗಡಿ
‘ಬೇಗ ಹೊಸ ಟವರ್ ಅಳವಡಿಸಿ’
ನೆಟ್‌ವರ್ಕ್ ಇಲ್ಲದೆ ಯಾವುದೇ ಕರೆಗಳು ಬರುತ್ತಿಲ್ಲ. ಈಗ ಮೊಬೈಲ್ ಮೂಲಕವೇ ಎಲ್ಲಾ ವ್ಯವಹಾರ ಮಾಡುತ್ತಿದ್ದು ಅಂಗಡಿಗೆ ಬೇಕಾದ ವಸ್ತುಗಳನ್ನು ಸರಿಯಾದ ಸಮಯಕ್ಕೆ ತರಿಸಿಕೊಳ್ಳಲು ಆರ್ಡರ್ ಮಾಡಲು ಆಗುತ್ತಿಲ್ಲ. ಜಾಲತಾಣಗಳಲ್ಲಿ ಸಂದೇಶ ಕಳಿಸಲು ಆಗುತ್ತಿಲ್ಲ. ಕೂಡಲೇ ಜಿಯೋ ಕಂಪನಿ ಹೊಸ ಟವರ್ ನಿರ್ಮಿಸಿ ಸಮಸ್ಯೆ ಬಗೆಹರಿಸಿ ಕೊಡಬೇಕು – ಯಶಸ್ ಪಶು ಔಷಧಿ ಅಂಗಡಿ ಮಾಲೀಕ ಮಾಗಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.