ಕನಕಪುರ: ‘ಕಾಲ ಕಳೆದಂತೆ ನ್ಯಾಯಾಂಗ ವ್ಯವಸ್ಥೆಗೆ ತನ್ನದೇ ಆದ ಸೌಕರ್ಯಗಳ ಅಗತ್ಯವಿದೆ. ಅತ್ಯಾಧುನಿಕ ನ್ಯಾಯಲಯ ಸಂಕೀರ್ಣದ ಅವಶ್ಯಕತೆ ಇತ್ತು. ಇದನ್ನು ಮನಗಂಡ ರಾಜ್ಯ ಸರ್ಕಾರ ನೂತನ ಕಟ್ಟಡವನ್ನು ನಿರ್ಮಿಸಿ ತನ್ನ ಬದ್ಧತೆ ತೋರಿಸಿದೆ’ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ನಿರ್ಮಿಸಿರುವ ನೂತನ ನ್ಯಾಯಾಲಯಗಳ ಸಂಕೀರ್ಣವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ‘ಕನಕಪುರದಲ್ಲಿರುವ ಅತ್ಯಾಧುನಿಕ ಹಾಗೂ ಸುಸಜ್ಜಿತ ನ್ಯಾಯಾಲಯ ಕಟ್ಟಡವು ಮಾದರಿ ನ್ಯಾಯಾಲಯ ಸಂಕೀರ್ಣವಾಗಿದೆ. ಕಟ್ಟಡವಿಂದು ಲೋಕಾರ್ಪಣೆಯಾಗಿರುವುದು ಐತಿಹಾಸಿಕ ಕ್ಷಣವಾಗಿದೆ.
‘ಪಟ್ಟಣದಲ್ಲಿ 1989ರಲ್ಲಿ ನಿರ್ಮಿಸಿದ್ದ ಕಟ್ಟಡ ಈವರೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ಕನಕಪುರ ಸಣ್ಣ ಪಟ್ಟಣವಲ್ಲ. ಆರ್ಥಿಕವಾಗಿ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿಯಾಗುತ್ತಿದೆ. ಅದಕ್ಕೆ ಪೂರಕವಾಗಿ ಈ ಕಟ್ಟಡ ನಿರ್ಮಾಣವಾಗಿದೆ’ ಎಂದು ಹೇಳಿದರು.
‘ನೂತನ ಕಟ್ಟಡವು ವಕೀಲರು, ನ್ಯಾಯಾಧೀಶರು, ಕಕ್ಷಿದಾರರು ಹಾಗೂ ಸಾರ್ವಜನಿಕರಿಗೆ ಬೇಕಾದ ಅತ್ಯುತ್ತಮ ಸೌಕರ್ಯಗಳನ್ನು ಹೊಂದಿದೆ. ತಾಯಿ ಮಗುವಿಗೆ ಬೇಕಾದ ವ್ಯವಸ್ಥೆ, ವಿಶೇಷ ಚೇತನರಿಗೆ ರ‍್ಯಾಂಪ್ ವ್ಯವಸ್ಥೆಯೂ ಇಲ್ಲಿದೆ’ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ‘ನಾನು ವಿದ್ಯಾರ್ಥಿಯಾಗಿದ್ದಾಗ ವಕೀಲನಾಗಬೇಕು ಎಂಬ ಆಸೆ ಇತ್ತು. ಆದರೆ, ಪದವಿ ಓದುತ್ತಿರುವಾಗಲೇ ನನಗೆ ಪಕ್ಷದ ಟಿಕೆಟ್ ಸಿಕ್ಕಿತು. ಹೀಗಾಗಿ ನಾನು ನನ್ನ ಮಗನನ್ನು ಕಾನೂನು ಓದಿಸುತ್ತಿದ್ದೇನೆ. ನನಗೆ ದಿನ ಬೆಳಗಾದರೆ ನ್ಯಾಯಾಲಯದ ನೋಟಿಸ್ ಬರುತ್ತಿರುತ್ತದೆ. ನೀನಾದರೂ ವಕೀಲನಾಗು ಎಂದು ಆತನಿಗೆ ಹೇಳಿದ್ದೇನೆ’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ ಶಿಸ್ತು ಬದ್ದ ನ್ಯಾಯಾಂಗ ವ್ಯವಸ್ಥೆ ಇದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಧೀಶರಿಗೆ ಹಾಗೂ ನ್ಯಾಯವಾದಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇಲ್ಲಿನ ಜನರ ಪ್ರೀತಿ–ವಿಶ್ವಾಸವೇ ನನ್ನ ಶಕ್ತಿ. ನನ್ನನ್ನು 8 ಸಲ ಗೆಲ್ಲಿಸಿ ಸೇವೆ ಮಾಡಲು ಸಹಕರಿಸಿದ್ದಾರೆ’ ಎಂದರು.
‘ಕನಕಪುರ ತಾಲ್ಲೂಕು ರೇಷ್ಮೆ ಮತ್ತು ಹಾಲು ಉತ್ಪಾದನೆಗೆ ಖ್ಯಾತಿ ಗಳಿಸಿದೆ. ಮುಂದಿನ ದಿನಗಳಲ್ಲಿ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಮುಂದಿನ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಲಾಗುವುದು’ ಎಂದು ಭರವಸೆ ನೀಡಿದರು.
ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ, ಸಂಸದ ಡಾ.ಸಿ.ಎನ್. ಮಂಜುನಾಥ್, ಹೈಕೋರ್ಟ್ ಮಹಾ ವಿಲೇಖನಾಧಿಕಾರಿ ಕೆ.ಎಸ್. ಭರತ್ ಕುಮಾರ್, ಕನಕಪುರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ಸಿ. ಚೆನ್ನೇಗೌಡ, ವೇದಿಕೆಯಲ್ಲಿದ್ದರು. ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶೆ ಬಿ.ವಿ. ರೇಣುಕಾ ಸ್ವಾಗತಿಸಿದರು.
ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಉತ್ತಮವಾದ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಲು ನಮ್ಮ ಸರ್ಕಾರ ಬದ್ಧವಾಗಿದೆ. ಅದಕ್ಕಾಗಿ ಅಲ್ಲಿನ ಶಾಸಕರು ಎರಡು ಎಕರೆ ಜಮೀನು ಹುಡುಕಿದ್ದಾರೆಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
‘ನ್ಯಾ. ನಾಗರತ್ನ ಅವರಿಲ್ಲದಿದ್ದರೆ ಕಟ್ಟಡ ನಿರ್ಮಾಣವಾಗುತ್ತಿರಲಿಲ್ಲ’
‘ನಾವು ನಮ್ಮ ಮೂಲವನ್ನು ಮರೆತರೆ ಯಶಸ್ಸು ಸಿಗುವುದಿಲ್ಲ ಎಂಬುದನ್ನು ನಾನು ನಂಬಿದ್ದೇನೆ. ಅದೇ ರೀತಿ ನ್ಯಾಯಮೂರ್ತಿ ನಾಗರತ್ನ ಅವರಿಲ್ಲದಿದ್ದರೆ ಇಂದು ಈ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗುತ್ತಿರಲಿಲ್ಲ. ಇದೇ ತಾಲ್ಲೂಕಿನವರಾದ ಅವರು ಜಿಲ್ಲಾ ಮುಖ್ಯ ನ್ಯಾಯಾಧೀಶರಾಗಿದ್ದರು. ಅವರ ತಂದೆ ವೆಂಕಟರಮಣಯ್ಯ ಅವರು ನಮ್ಮ ಊರಿನ ಅಳಿಯ. ಅವರು ಸಹ ಮುಖ್ಯ ನ್ಯಾಯಾಧೀಶರಾಗಿದ್ದರು. ನಾಗರತ್ನ ಅವರು ಈ ಜಾಗಕ್ಕೆ ಬಂದು ಇಲ್ಲಿನ ಸಮಸ್ಯೆ ಅರಿತು ಅದನ್ನು ಬಗೆಹರಿಸಿ ಆದೇಶ ಹೊರಡಿಸಿದರು. ಅವರಿಗೆ ನಾನು ಇಲ್ಲಿಂದಲೇ ನಮಿಸುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.