ಮೊಗಳ್ಳಿ ಗಣೇಶ್
ರಾಮನಗರ: ‘ಸೃಜನಶೀಲ ಕ್ಷೇತ್ರದಲ್ಲಿ ಮೊಗಳ್ಳಿ ಗಣೇಶ್ ಅವರಷ್ಟು ಎತ್ತರಕ್ಕೆ ಬೇರಾರು ಏರಿಲ್ಲ. ಪ್ರತಿ ಸಂಸ್ಕೃತಿ ಚಿಂತಕರಲ್ಲಿ ಅವರು ಪ್ರಮುಖರು. ವಿಮರ್ಶೆಗೆ ದಲಿತತ್ವದ ಸ್ಪರ್ಶ ನೀಡಿ, ಹೊಸ ಪರಿಭಾಷೆಯನ್ನು ನೀಡಿದರು. ಜಾನಪದ ಮತ್ತು ಜಾಗತೀಕರಣದ ಆಯಾಮಗಳನ್ನು ವಿಶಿಷ್ಟ ಒಳನೋಟಗಳ ಮೂಲಕ ಸಾಹಿತ್ಯ ಲೋಕಕ್ಕೆ ಕಟ್ಟಿ ಕೊಟ್ಟರು...’
ನಾಡಿನ ಸಾಹಿತ್ಯ ಲೋಕ ಎಂದಿಗೂ ಮರೆಯದಂತಹ ವಿಭಿನ್ನ ಕಥೆಗಾರ ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿಯಳ್ಳಿಯ ಮೊಗಳ್ಳಿ ಗಣೇಶ್ ಅವರ ಕುರಿತು, ಅವರ ಆತ್ಮೀಯ ಸ್ನೇಹಿತರರಾದ ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಅವರು, ಸಾಹಿತ್ಯ ಲೋಕದಲ್ಲಿ ಮೊಗಳ್ಳಿ ಅವರು ಸೃಷ್ಟಿಸಿದ ಗುರುತನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದು ಹೀಗೆ.
‘ತಮ್ಮ ಬರವಣಿಗೆ ಬಹುಜನರಿಗೆ ತಲುಪಲಿಲ್ಲ ಎಂಬ ನೋವು ಮೊಗಳ್ಳಿ ಅವರಿಗಿತ್ತು. ಅವರ ಕಥೆಗಳು ಮತ್ತು ಆಲೋಚನಾ ಮಟ್ಟಕ್ಕೆ ತಕ್ಕಂತೆ, ಕೆಲ ವರ್ಗದ ಮುಷ್ಠಿಯಲ್ಲಿದ್ದ ವಿಮರ್ಶಾ ಲೋಕ ಮತ್ತು ಸಾಹಿತ್ಯ ಲೋಕ ಸ್ಪಂದಿಸಲಿಲ್ಲ. ಆ ನೋವು ಅವರನ್ನು ಕಾಡಿತ್ತು. ಆದರೆ, ಅವರ ವಿಮರ್ಶೆಯಲ್ಲಿ ವಾಸ್ತವ ಮತ್ತು ವಸ್ತುನಿಷ್ಠತೆ ಎದ್ದು ಕಾಣುತ್ತಿತ್ತು. ವೈಭವೀಕರಣಕ್ಕೆ ಅವಕಾಶವಿರಲಿಲ್ಲ. ದಲಿತ ನೋಟದ ತಮ್ಮ ವಿಮರ್ಶೆ ಮೂಲಕ ಹೊಸ ಪರಿಭಾಷೆಯನ್ನು ಅವರು ಕೊಟ್ಟಿ ಕೊಟ್ಟಿದ್ದರು’ ಎಂದು ನೆನೆದರು.
‘ಬೌದ್ಧಿಕವಾಗಿ ತಮಗೆ ಸಮಾನ ಎನಿಸುವವರ ಜೊತೆಗೆ ಒಡನಾಟ ಇಟ್ಟುಕೊಳ್ಳಲು ಬಯಸದ ಮೊಗಳ್ಳಿ, ತಮ್ಮ ಮಟ್ಟಕ್ಕೆ ನಿಲುಕದವರನ್ನು ತಿರಸ್ಕರಿಸುತ್ತಿದ್ದರು. ಈ ವಿಷಯದಲ್ಲಿ ನಮ್ಮಿಬ್ಬರಲ್ಲಿ ತಕಾರರಿತ್ತು. ಅದಕ್ಕೆ ನಾನು ಆಕ್ಷೇಪಿಸಿದಾಗಲೆಲ್ಲಾ, ನಿನಗೆ ಗೊತ್ತಾಗಲ್ಲ ಸುಮ್ಮನಿರು ಚಕ್ಕೆರೆ ಎನ್ನುತ್ತಿದ್ದರು’ ಎಂದರು.
‘ತಾವು ಬಾಲ್ಯದಿಂದಲೂ ಅನುಭವಿಸಿದ ನೋವು, ಅವಮಾನ, ಅನ್ಯಾಯಗಳಿಂದಾಗಿ ಮೊಗಳ್ಳಿ ಒಳಗೊಳಗೆ ಕುದಿಯುತ್ತಿದ್ದರು. ಕೆಲ ತಿಂಗಳ ಹಿಂದೆ ಚನ್ನಪಟ್ಟಣದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದೆವು. ಆಗ ತಮ್ಮನ್ನು ಮಾತನಾಡಿಲು ಬಂದಿದ್ದ ಹುಟ್ಟೂರಿನ ಬಾಲ್ಯ ಸ್ನೇಹಿತರನ್ನು ಕಂಡು ಬಾವುಕರಾಗಿದ್ದರು. ಕಥಾ ಜಗತ್ತು ಒಳ್ಳೆಯ ಕಥೆಗಾರನನ್ನು, ಜಾನಪದ ಜಗತ್ತು ಜಾನಪದ ವಿದ್ವಾಂಸನನ್ನು ಕಳೆದುಕೊಂಡು ತಬ್ಬಲಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಆತ್ಮೀಯರೊಂದಿಗೆ ಒಡನಾಟ: ವೃತ್ತಿ ಸಲುವಾಗಿ ದೂರದ ಹಂಪಿಯಲ್ಲಿದ್ದ ಮೊಗಳ್ಳಿ ಅವರು, ಆತ್ಮೀಯರ ಕರೆ ಮೇರೆಗೆ ಜಿಲ್ಲೆಯಲ್ಲಿ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆಗ ಸ್ನೇಹಿತರು ಮತ್ತು ಆತ್ಮೀಯರೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದರು. ಜಿಲ್ಲೆಯಲ್ಲಿ ಅವರ ಒಡನಾಟ ಸಹ ಕೆಲವರೊಂದಿಗೆ ಮಾತ್ರ ಸೀಮಿತವಾಗಿತ್ತು ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.
‘ನಾನು ಬಾಲಕನಾಗಿದ್ದಾಗ ನನ್ನ ತಾತ ಅರಮನೆ ತೋರಿಸುವುದಾಗಿ ಹೇಳಿ ಮೈಸೂರಿಗೆ ಕರೆದುಕೊಂಡು ಹೋಗಿದ್ದರು. ಆದರೆ, ಅರಮನೆ ತೋರಿಸದೆ ಮನೆಯೊಂದರ ಹೇಸಿಗೆ ಗುಂಡಿಯನ್ನು ನನ್ನಿಂದ ಸ್ವಚ್ಛಗೊಳಿಸಿದರು. ಜಾಡಮಾಲಿಯಾಗಿದ್ದ ನನ್ನನ್ನು ಆ ಮನೆಯವರು ಒಳಕ್ಕೂ ಸೇರಿಸದೆ, ಹೊರಗಡೆಯೇ ಕೂರಿಸಿ ಎಲೆಯಲ್ಲಿ ಊಟ ಕೊಟ್ಟಿದ್ದರು’ ಎಂದು ಮೊಗಳ್ಳಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
‘ತಮಗೆ ಮೈಸೂರೆಂದರೆ ಭಯವಾಗುತ್ತಿತ್ತು. ಕೆಲ ಬೀದಿಗಳಲ್ಲಿ ಓಡಾಡುವಾಗ ನಾನಲ್ಲಿ ಮಾಡಿದ ಕೆಲಸ ಕಣ್ಣ ಮುಂದೆ ಬರುತ್ತಿತ್ತು. ಆ ಘಟನೆ ಬಗ್ಗೆ ನನಗೆ ಅವಮಾನವಿಲ್ಲ. ನನ್ನ ಸ್ಥಿತಿಯನ್ನು ನಾನು ಅಸಹ್ಯಪಡಿಸಿಕೊಳ್ಳದೆ ಹೇಳಿಕೊಳ್ಳುವೆ. ಆದರೆ, ಆ ಕೆಲಸ ಮಾಡಿಸಿದವರ ಬಗ್ಗೆ ನನಗೆ ಪಶ್ಚಾತ್ತಾಪ ಭಾವನೆ ಇದೆ. ಅದೇ ಕಾರಣಕ್ಕೆ ನನ್ನ ಆತ್ಮಕಥನಕ್ಕೆ ‘ನಾನೆಂಬುದು ಕಿಂಚಿತ್ತು’ ಎಂಬ ಶೀರ್ಷಿಕೆ ಇಟ್ಟೆ’ ಎಂದು ಮೊಗಳ್ಳಿ ತಾವು ಅನುಭವಿಸಿದ್ದ ಘಟನೆಗಳ ನೆನಪುಗಳನ್ನು ಹಂಚಿಕೊಂಡಿದ್ದರು.
ರೇಗಿದ್ದರು: ಜಿಲ್ಲೆಯ ಸಾಹಿತಿಗಳ ಸಮಾವೇಶ ಮಾಡುವ ಸಲುವಾಗಿ ಹಂಪಿಯಲ್ಲಿದ್ದ ಮೊಗಳ್ಳಿ ಗಣೇಶ್ ಅವರನ್ನು ನಾನು ಭೇಟಿಯಾಗಿ ಆಹ್ವಾನಿಸಲು ಹೋಗಿದ್ದೆ. ನಾನು ರಾಮನಗರ ಜಿಲ್ಲೆಯಿಂದ ಬಂದಿರುವೆ ಸರ್ ಎಂದಾಗ, ನಾನು ರಾಮನಗರ ಜಿಲ್ಲೆಯವನಲ್ಲ ಎಂದು ರೇಗಿದ್ದರು. ಬಳಿಕ, ಮತ್ತೆ ಭೇಟಿಯಾದಾಗ ಆತ್ಮೀಯತೆಯಿಂದ ಮಾತನಾಡಿಸಿ ಸಮಾವೇಶದ ಅಧ್ಯಕ್ಷರಾಗಿ ಭಾಗವಹಿಸಲು ಒಪ್ಪಿಕೊಂಡಿದ್ದರು ಎಂದು ಸಂಗಮ ಸಾಹಿತ್ಯ ಟ್ರಸ್ಟ್ ಅಧ್ಯಕ್ಷ ಮತ್ತು ಪ್ರಕಾಶಕ ಎಸ್. ನಾಗಭೂಷಣ ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.
ಒಕ್ಕಲಿಗ ಸಮುದಾಯಕ್ಕೆ ಸೇರಿದ್ದ ನಾನು ಅವರಿಗೆ ನೀಡುತ್ತಿದ್ದ ಆತಿಥ್ಯ ಗಮನಿಸಿದ್ದ ಅವರು, ನೀವು ದಲಿತರ ಜೊತೆಗೆ ಹೊಂದಿರುವ ಒಡನಾಟವು ನನ್ನ ದೃಷ್ಟಿಕೋನವನ್ನು ಬದಲಾಗುವಂತೆ ಮಾಡಿದೆ ಎಂದು ಹೇಳಿಕೊಂಡಿದ್ದರು. ನಂತರ, ಅವರು ನನ್ನ ಮನೆಗೂ ಬಂದಿದ್ದರು. ತಮ್ಮ ಮನೆಗೆ ನಮ್ಮನ್ನು ಸಹ ಕರೆಯಿಸಿಕೊಂಡಿದ್ದರು. ಇದು ಅವರಲ್ಲಿದ್ದ ಅಸ್ಪೃಶ್ಯತೆಯ ನೋವಿನ ಜೊತೆಗೆ ಬದಲಾದ ಕಾಲಘಟ್ಟದಲ್ಲಿ ಬದಲಾದ ಮೇಲು–ಕೀಳು ಭಾವದ ಕುರಿತು ಅವರಲ್ಲಿದ್ದ ಭಾವನೆಯನ್ನು ತೋರಿಸುತ್ತಿತ್ತು ಎಂದು ಹೇಳಿದರು.
ಹುಟ್ಟೂರಿನ ಒಡನಾಟ ಅಷ್ಟಕಷ್ಟೆ
ಚನ್ನಪಟ್ಟಣ: ತಾಲ್ಲೂಕಿನ ಸಂತೆ ಮೊಗೇನಹಳ್ಳಿ ಜನಿಸಿದ ಕಥೆಗಾರ ಮೊಗಳ್ಳಿ ಗಣೇಶ್ ಅವರ ಹೆಸರಿನೊಂದಿಗೆ ಹುಟ್ಟೂರು ಸೇರಿಕೊಂಡಿದ್ದರೂ ಊರಿನೊಂದಿಗೆ ಯಾವುದೇ ಒಡನಾಟ ಇಟ್ಟುಕೊಂಡಿರಲಿಲ್ಲ.
‘ಬಾಲ್ಯದಲ್ಲೇ ದೂರಿನಿಂದ ದೂರವಾಗಿದ್ದ ಅವರು ಮೈಸೂರು ಮತ್ತು ಹಂಪಿ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಸಮಯ ಕಳೆದಿದ್ದರು. ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಬರುತ್ತಿರಲಿಲ್ಲ. ಹಲವು ಸಲ ಆಹ್ವಾನಿಸಿದರೂ ಅವರು ಬರಲು ಮನಸ್ಸು ಮಾಡಿರಲಿಲ್ಲ’ ಎಂದು ಗ್ರಾಮದ ಎಂ.ಎನ್. ಆನಂದಸ್ವಾಮಿ ತಿಳಿಸಿದರು.
‘ಅವರ ತಾಯಿಯ ನಿಧನದ ನಂತರ ಹುಟ್ಟೂರಿನ ಸಂಬಂಧವನ್ನು ಬಹುತೇಕ ಕಡಿದುಕೊಂಡಿದ್ದರು. 30 ವರ್ಷಗಳ ಹಿಂದೆ ಅವರ ತಂದೆ ನಿಧನರಾಗಿದ್ದಾಗಲೂ ಗ್ರಾಮಕ್ಕೆ ಬರಲಿಲ್ಲ’ ಎಂದು ಅವರು ನೆನಪಿಸಿಕೊಂಡರು.
ಚನ್ನಪಟ್ಟಣದಲ್ಲಿ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಸಾಕಷ್ಟು ಸಾಹಿತ್ಯ ಕಾರ್ಯಕ್ರಮಗಳು ನಡೆದಿವೆಯಾದರೂ ಅವರು ಯಾವ ಕಾರ್ಯಕ್ರಮದಲ್ಲೂ ಭಾಗವಹಿಸಿರಲಿಲ್ಲ.
2024ರ ಜ. 20ರಂದು ನಗರದ ಶತಮಾನೋತ್ಸವ ಭವನದಲ್ಲಿ ಭಾರತ ಸಂವಿಧಾನ ಬಳಗವು ಹಮ್ಮಿಕೊಂಡಿದ್ದ ಕುವೆಂಪು ವಿಚಾರ ಉತ್ಸವ ಕಾರ್ಯಕ್ರಮದ ಉದ್ಘಾಟಕರಾಗಿ ಮೊಗಳ್ಳಿ ಭಾಗವಹಿಸಿದ್ದರು ಎಂದು ಸಾಹಿತಿಗಳಾದ ವಿಜಯ್ ರಾಂಪುರ, ಯೋಗೇಶ್ ಚಕ್ಕೆರೆ ನೆನಪಿಸಿಕೊಂಡರು.
ಜಿಲ್ಲೆಯ ಹೆಮ್ಮೆಯ ಕಥೆಗಾರ ಮೊಗಳ್ಳಿ ಗಣೇಶ್ ಅವರು ನಿಧನರಾದರೂ ಅವರಿಗೆ ಜಿಲ್ಲೆಯಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವಾಗಲೀ ತಾಲ್ಲೂಕು ಘಟಕವಾಗಲೀ ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಕೆಲಸ ಮಾಡಲಿಲ್ಲ. ಎರಡನೇ ತಲೆಮಾರಿನ ಪ್ರಭಾವಿ ದಲಿತ ಕಥೆಗಾರ ಮತ್ತು ಲೇಖಕನಿಗೆ ದಲಿತ ಸಂಘಟನೆಗಳು ನೆನೆದು ಶ್ರದ್ದಾಂಜಲಿ ಸಲ್ಲಿಸಲಿಲ್ಲ. ನಮ್ಮ ಜಿಲ್ಲೆಯ ಕಸಾಪ ಮತ್ತು ದಲಿತ ಸಂಘಟನೆಗಳಿಗೆ ಗ್ರಹಣ ಬಡಿದಿದೆ. ನಮ್ಮ ಮಣ್ಣಿನಲ್ಲಿ ಜನಿಸಿದ ಮೇರು ಸಾಹಿತಿಗೆ ಅವರು ಬದುಕಿದ್ದಾಗಲೂ ಸಿಗಬೇಕಾದ ಗೌರವಗಳು ಸರಿಯಾಗಿ ಸಿಗಲಿಲ್ಲ. ಕಡೆ ಪಕ್ಷ ಅವರನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕರನ್ನಾಗೂ ಮಾಡಲಿಲ್ಲ. ಇದೀಗ ಅವರು ಅಗಲಿದಾಗಲೂ ನಮ್ಮ ಜಿಲ್ಲೆಯವರು ಎಂದು ನೆನೆದು ಶ್ರದ್ದಾಂಜಲಿ ಸಲ್ಲಿಸುವ ಕನಿಷ್ಠ ಸೌಜನ್ಯವನ್ನು ಸಹ ಯಾರೂ ತೋರದಿರುವುದು ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಯಾವ ಸ್ಥಿತಿ ತಲುಪಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಸಾಹಿತಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಕನ್ನಡದ ಎರಡನೇ ತಲೆಮಾರಿನ ದಲಿತ ಬರಹಗಾರರಲ್ಲಿ ಮೊಗಳ್ಳಿ ಗಣೇಶ್ ಅದ್ಭುತ ಕಥೆಗಾರ. ತನ್ನ ಬಾಲ್ಯದ ಅನುಭವಗಳನ್ನು ತಮ್ಮ ಕಥೆಗಳಲ್ಲಿ ಅದ್ಭುತವಾಗಿ ಕಟ್ಟಿ ಕೊಟ್ಟಿರುವ ಅವರು ಭಾರತೀಯ ಸಾಹಿತ್ಯ ಲೋಕದಲ್ಲಿ ಪ್ರಮುಖ ಕಥೆಗಾರರ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ಕಥೆಗಳು ಮತ್ತು ಚಿಂತನೆಗಳು ಹೊಸ ತಲೆಮಾರಿಗೆ ಮಾರ್ಗದರ್ಶಿಯಾಗಿವೆ. ಅವರ ಬರಹಗಳಲ್ಲಿ ರಮ್ಯಾತ್ಮಕ ವರ್ಣನೆ ಕಂಡುಬಂದರೂ ಅದರೊಳಗೆ ದಲಿತ ಬದುಕಿನ ಕ್ರೌರ್ಯ ಅನಾವರಣ ಇರುತ್ತಿತ್ತು. ಸಾಂಸಾರಿಕ ಕೋಟಲೆಗಳು ತಬ್ಬಲಿತನ ಅಳು ಅವರ ಕೃತಿಗಳಲ್ಲಿ ಸ್ಥಾಯಿಭಾವವಾಗಿ ಮೂಡಿಬಂದಿದೆ. ಅವರ ಬರಹದಲ್ಲಿ ಸಾಮುದಾಯಿಕ ಭಾವನೆಯ ರೂಪಕಗಳಾಗಿಯೂ ಕಾಣುತ್ತವೆ. ದೇವನೂರ ಮಹದೇವ ಅವರ ತಲೆಮಾರಿನ ನಂತರದ ದಲಿತ ಹಿನ್ನೆಲೆಯ ಕಥೆಗಾರರು ಹಾಗೂ ಚಿಂತಕರಲ್ಲಿ ಮೊಗಳ್ಳಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ದೇಸಿ ಚಿಂತನೆಯಲ್ಲೂ ಅವರದ್ದು ಉತ್ತಮವಾದ ಒಳನೋಟ. ಸಾಹಿತ್ಯ ಲೋಕ ಅವರನ್ನು ಸರಿಯಾಗಿ ಗುರುತಿಸಲಿಲ್ಲ. ಪ್ರತಿಭೆಗೆ ಸಲ್ಲಬೇಕಾದ ಮನ್ನಣೆ ಸಿಗಲಿಲ್ಲ. ಸಮಾನ ಮನಸ್ಕರು ಸೇರಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಸಾಹಿತ್ಯ ಪ್ರಶಸ್ತಿ ನೀಡುವ ಆಲೋಚನೆ ಇದೆ.– ಬಂಜಗೆರೆ ಜಯಪ್ರಕಾಶ್ ಲೇಖಕ
ಮೊಗಳ್ಳಿ ಗಣೇಶ್ ಅವರು ಅಪರೂಪವೆನಿಸುವ ಕಥೆಗಳನ್ನು ಸಾಹಿತ್ಯ ಲೋಕಕ್ಕೆ ಕೊಟ್ಟವರು. ಇನ್ನೂ ಬೆಳಕಿಗೆ ಬಾರದ ದಲಿತ ಲೋಕದ ನೋವು ಶೋಷಣೆ ಅನ್ಯಾಯಗಳ ಕುರಿತು ಶಿಕ್ಷಣ ಪಡೆದ ಮನಸ್ಸು ಚಿಂತಿಸಿ ಸಮುದಾಯದ ದನಿಯಾಗಿ ಆ ನೋವನ್ನು ಹೇಗೆ ಅಭಿವ್ಯಕ್ತಿಸಬಹುದು ಎಂಬುದನ್ನು ತಮ್ಮ ಬರಹಳಲ್ಲಿ ಕಟ್ಟಿ ಕೊಟ್ಟರು. ಅವರ ಹಿರಿಯ ತಲೆಮಾರಿನ ದೇವನೂರ ಮಹದೇವ ಅವರು ಮಾಡಿದ ಕೆಲಸವನ್ನು ಎರಡನೇ ತಲೆಮಾರಿನ ಮೊಗಳ್ಳಿ ಮಾಡಿದರು. ಅವರದ್ದು ವಿಮರ್ಶಾತ್ಮಕ ದೃಷ್ಟಿಕೋನದ ವ್ಯಕ್ತಿತ್ವ. ಆತ್ಮೀಯರು ಸೇರಿದಂತೆ ಎಲ್ಲರನ್ನೂ ಅದೇ ದೃಷ್ಟಿಯಿಂದ ನೋಡುತ್ತಿದ್ದರು. ತಮ್ಮ ಆಲೋಚನಾ ಲಹರಿ ಸಾತ್ವಿಕ ಸಿಟ್ಟು ವೈಚಾರಿಕ ಜಗಳದ ಕಾರಣಕ್ಕೆ ಕೆಲವರಿಂದ ದೂರಾಗಿದ್ದರು. ಇವರನ್ನು ಬಿಟ್ಟರೆ ಬೇರೆ ದೊಡ್ಡ ಸಾಹಿತಿಯೇ ಇಲ್ಲ ಎಂಬ ಶಿಷ್ಯವರ್ಗದ ಓಲೈಕೆ ಮತ್ತು ವೈಭವೀಕರಣಕ್ಕೆ ತಮ್ಮ ‘ತಕಾರರು’ ಎಂಬ ಅಂಕಣದಲ್ಲಿ ತಿವಿಯುತ್ತಿದ್ದ ಮೊಗಳ್ಳಿ ಸಾಹಿತ್ಯದ ವಾಸ್ತವತೆ ಮತ್ತು ನೈಜತೆಯ ಅನಾವರಣ ಮಾಡುತ್ತಿದ್ದರು. ನಮ್ಮ ಭೇಟಿ ಮತ್ತು ಮಾತುಕತೆ ಜಗಳವಿಲ್ಲದೆ ಮುಗಿಯುತ್ತಿರಲಿಲ್ಲ. ಆ ಪ್ರೀತಿಯ ಜಗಳ ಮತ್ತೆ ಯಾವಾಗ ಆಗುತ್ತದೆ ಎಂದು ಕಾಯುತ್ತಿದ್ದೆ. ಅಷ್ಟರಲ್ಲೇ ಅವರ ಸಾವಿನ ಆಘಾತದ ಸುದ್ದಿ ಬಂತು.– ಡಾ. ಭೈರಮಂಗಲ ರಾಮೇಗೌಡ ಸಾಹಿತಿ
ದೇಸಿ ಸೊಗಡಿನ ಬಹುದೊಡ್ಡ ಕಥೆಗಾರ ಮೊಗಳ್ಳಿ ಗಣೇಶ್. ಭಾಷೆಯನ್ನು ಅದ್ಭುತವಾಗಿ ದುಡಿಸಿಕೊಂಡವರು. ಎಲ್ಲಿ ತಿಳಿವಳಿಕೆ ಇರುತ್ತಿರಲಿಲ್ಲವೊ ಅಲ್ಲಿ ಮೊಗಳ್ಳಿ ಇರುತ್ತಿರಲಿಲ್ಲ. ಅದು ಅವರ ಚಿಂತನೆ ಹಾಗೂ ಆಲೋಚನಾ ಮಟ್ಟಕ್ಕಿದ್ದ ಸಾಮರ್ಥ್ಯ ಎಂತಹದ್ದು ಎಂದು ತೋರಿಸುತ್ತಿತ್ತು. ಆದರೆ ಇದು ಹೊರಜಗತ್ತಿಗೆ ವ್ಯಕ್ತವಾಗುತ್ತಿದ್ದ ರೀತಿ ಬೇರೆಯದೇ ರೀತಿಯಲ್ಲಿತ್ತು. ಅನ್ಯಾಯಗಳಿಂದ ಬೆಂದು ಬೆಳೆದಿದ್ದ ಅವರು ಅನ್ಯಾಯದ ವಿರುದ್ದ ಸಿಡಿಯುತ್ತಿದ್ದರು. ಇದರಿಂದ ಜನರ ಕೆಂಗಣ್ಣಿಗೂ ಗುರಿಯಾಗಿದ್ದಿದೆ. ಸಾಹಿತ್ಯದಲ್ಲಿ ಯಾರೂ ತಲುಪಲಾಗದ ತುದಿಯನ್ನು ಅವರು ತಲುಪಿದ್ದರು. ದಮನಿತರ ದನಿಯಾಗಿದ್ದ ಮೊಗಳ್ಳಿ ಅವರ ಆಂತರ್ಯವನ್ನು ಸಾಹಿತ್ಯ ಜಗತ್ತು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಇದೊಂದು ರೀತಿ ಅವರನ್ನು ಅಂತರ್ಮುಖಿಯನ್ನಾಗಿಸಿತ್ತು. ಅವರ ‘ಆದಿಮ ಜಾನಪದ’ ಎಂಬ ಪುಸ್ತಕವನ್ನು ನನ್ನ ಪ್ರಕಾಶನದಿಂದ ಪ್ರಕಟಿಸಿದಾಗ ಅವರ ಮಾತುಗಳಲ್ಲಿ ಅದು ವ್ಯಕ್ತವಾಗುತ್ತಿತ್ತು. ಸಾಹಿತ್ಯ ಕ್ಷೇತ್ರ ಹಾಗೂ ನಮ್ಮ ಜಿಲ್ಲೆಯಲ್ಲೂ ಅವರನ್ನು ಸರಿಯಾಗಿ ಗುರುತಿಸಲಿಲ್ಲ. ಅದಕ್ಕೆ ಅವರು ಜಿಲ್ಲೆಯ ಜನರಿಗೆ ಸ್ಫಂದಿಸುತ್ತಿರಲಿಲ್ಲ ಎಂಬ ಆರೋಪವನ್ನು ಲೇಪಿಸಲಾಗಿತ್ತು. ಆದರೆ ಮೊಗಳ್ಳಿ ಅವರದ್ದು ಎಲ್ಲವನ್ನೂ ಮೀರಿದ ವ್ಯಕ್ತಿತ್ವವಾಗಿತ್ತು.– ಡಾ. ಎಂ. ಭೈರೇಗೌಡ, ಸಾಹಿತಿ
ಸಚಿವರಾಗಿದ್ದ ಎಂ.ಪಿ. ಪ್ರಕಾಶ್ ಅವರು ಒಮ್ಮೆ ಮೊಗಳ್ಳಿ ಅವರ ಕಥೆಗಳನ್ನು ಓದಿ ಮೆಚ್ಚಿ ಪ್ರಭಾವಿತರಾಗಿದ್ದರು. ಒಮ್ಮೆ ಮೊಗಳ್ಳಿ ಅವರಿಗೆ ಪತ್ರ ಬರೆದು ವಿಧಾನಸೌಧಕ್ಕೆ ಬಂದು ಭೇಟಿಯಾಗುವಂತೆ ತಿಳಿಸಿದ್ದರು. ಆಗ ಮೊಗಳ್ಳಿ ಅವರು ನನಗೆ ವಿಧಾನಸೌಧಕ್ಕೆ ಬರಲು ಸಾಧ್ಯವಿಲ್ಲ. ನೀವೇ ಯಾವಾಗಲಾದರೂ ಬಿಡುವಾದಾಗ ನಾನಿರುವ ಮಾದನಾಯಕನಹಳ್ಳಿಗೆ ಬನ್ನಿ ಎಂದು ಪತ್ರ ಬರೆದಿದ್ದರು. ಪ್ರಕಾಶ್ ಅವರು ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಂಡಾಗ ಮೊಗಳ್ಳಿ ಮನೆಗೆ ಭೇಟಿ ನೀಡಿದ್ದರು. ಅವರೊಂದಿಗೆ ಇಡೀ ಜಿಲ್ಲಾಡಳಿತವೇ ಆ ಊರಿಗೆ ಬಂದಿತ್ತು. ಮೊಗಳ್ಳಿ ಅವರ ಜೊತೆ ಮಾತನಾಡಿದ್ದ ಪ್ರಕಾಶ್ ಅವರು ಕಷ್ಟದಲ್ಲಿದ್ದ ಮೊಗಳ್ಳಿ ಅವರಿಗೆ ₹50 ಸಾವಿರ ಹಣ ಕೊಟ್ಟಿದ್ದರು. ಈ ವಿಷಯವನ್ನು ಅವರ ಆತ್ಮಕಥೆಯನ್ನೂ ಬರೆದುಕೊಂಡಿದ್ದಾರೆ. ಹಳ್ಳಿಗಾಡಿನ ಸುಡು ವಾಸ್ತವಗಳನ್ನು ಸಾಹಿತ್ಯಿಕವಾಗಿ ಕಟ್ಟಿಕೊಟ್ಟ ಮೊಗಳ್ಳಿ ಆಳವಾದ ಅಧ್ಯಯನದ ಜೊತೆಗೆ ಸೂಕ್ಷ್ಮಮತಿಯಾಗಿ ಚಿಂತಿಸುತ್ತಿದ್ದರು. ತಮ್ಮ ಸಾಹಿತ್ಯದಲ್ಲಿ ಮಾನವೀಯ ವೈಚಾರಿಕ ವಿಚಾರಗಳ ಶೋಧದಲ್ಲಿ ತೊಡಗಿಸಿಕೊಂಡಿದ್ದರು.– ಡಾ. ಕಾಳೇಗೌಡ, ನಾಗಾವರ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.