ಚನ್ನಪಟ್ಟಣ: ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ವಿಮರ್ಶಕ, ಸಂಶೋಧಕ ಹಾಗೂ ಜಾನಪದ ವಿದ್ವಾಂಸ ಡಾ.ಮೊಗಳ್ಳಿ ಗಣೇಶ್ ನಿಧನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಸಾಹಿತಿ ಡಾ.ವಿಜಯ್ ರಾಂಪುರ ವಿಷಾದಿಸಿದರು.
ನಗರದ ಮಂಜುನಾಥನಗರದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸೋಮವಾರ ಏರ್ಪಡಿಸಿದ್ದ ಹಿರಿಯ ಸಾಹಿತಿ ಡಾ.ಮೊಗಳ್ಳಿ ಗಣೇಶ್ ಅವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಸಿ ಸೊಗಡು ತಮ್ಮ ಸಾಹಿತ್ಯದಲ್ಲಿ ಅಪ್ಯಾಯಮಾನವಾಗಿ ಬಳಸಿಕೊಂಡು ಜೀವನ್ಮುಖಿ ಬರಹಗಳಿಂದ ಸಹೃದಯರನ್ನು ಚಿಂತನೆಗೆ ಹಚ್ಚಿದರು. ಬಹುತೇಕ ಗ್ರಾಮೀಣ ಬದುಕಿನ ಅನುಭವಗಳಿಂದ ಪ್ರೇರಣೆ ಪಡೆದಿದ್ದ ಅವರು, ಬಹಳ ಮುಖ್ಯವಾಗಿ ಗ್ರಾಮೀಣ ಜೀವನ, ಮಣ್ಣು, ಅಕ್ಷರ ಶಬ್ದ, ದಲಿತ ಅನುಭವ ಮತ್ತು ಸಾಮಾಜಿಕ ಅಸಮಾನತೆ ತಮ್ಮ ಬರಹಗಳಲ್ಲಿ ಅನಾವರಣ ಮಾಡಿದ್ದರು. ಭಾರತದ ಬಹು ಭಾಷೆ ಹಾಗೂ ವಿದೇಶಿ ಭಾಷೆಗಳಿಗೂ ಮೊಗಳ್ಳಿಯವರ ವಿದ್ವತ್ಪೂರ್ಣ ಸಾಹಿತ್ಯ ಅನುವಾದಗೊಂಡಿರುವುದು ಈ ನೆಲದ ಹಿರಿಮೆ ಎಂದರು.
ದಲಿತ ಮುಖಂಡ ಮತ್ತೀಕೆರೆ ಹನುಮಂತಯ್ಯ ಮಾತನಾಡಿ, ಸಂಸ್ಕೃತಿ ಚಿಂತಕರಾದ ಡಾ.ಮೊಗಳ್ಳಿ ಗಣೇಶ್ ದಲಿತ ಚಿಂತನೆ ಮತ್ತು ಸಾಮಾಜಿಕ ನ್ಯಾಯ ಚಿಂತನೆ ಮನೋಭಾವದ ಲೇಖಕರಾಗಿದ್ದರು. ಸಾಹಿತ್ಯದಲ್ಲಿ ಶ್ರೀಯುತರ ಚಿಂತನೆ ಯುವ ಬರಹಗಾರರನ್ನು ಪ್ರೇರೇಪಿಸಿದೆ. ಕುವೆಂಪು ಅವರ ಚಿಂತನೆಗಳಿಗೆ ಚೈತನ್ಯ ತುಂಬುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದರು. ಇಂತಹ ಸಾಹಿತ್ಯ ದಿಗ್ಗಜರನ್ನು ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯ ಬಳಸಿಕೊಳ್ಳದಿರುವುದು ನೋವಿನ ಸಂಗತಿ ಎಂದರು.
ನಿವೃತ್ತ ಶಿಕ್ಷಕ ಟಿ.ನಾಮದೇವ್, ಹಿರಿಯ ಜಾನಪದ ಗಾಯಕ ಚೌ.ಪು.ಸ್ವಾಮಿ, ಕವಿ ಅಬ್ಬೂರು ಶ್ರೀನಿವಾಸ್, ರೋಟರಿ ಕ್ಲಬ್ ಕಾರ್ಯದರ್ಶಿ ವಿನಯ್ ಕುಮಾರ್, ಆರ್.ವಿ.ಅಚಲ, ಅನಿತಾ ವಿಜಯ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.