ADVERTISEMENT

ರಾಮನಗರ | 'ಸಾಹಿತ್ಯ ಲೋಕದಲ್ಲಿ ಮೊಗಳ್ಳಿ ಛಾಪು'

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕಥೆಗಾರ ಮೊಗಳ್ಳಿ ಗಣೇಶ್‌ ಶ್ರದ್ಧಾಂಜಲಿ ಸಭೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 1:58 IST
Last Updated 10 ಅಕ್ಟೋಬರ್ 2025, 1:58 IST
ರಾಮನಗರದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ  ಕಥೆಗಾರ ಮೊಗಳ್ಳಿ ಗಣೇಶ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ತಾಲ್ಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ, ಸಾಹಿತಿಗಳು ಹಾಗೂ ಪರಿಷತ್ತಿನ ಪದಾಧಿಕಾರಿಗಳು ಇದ್ದಾರೆ
ರಾಮನಗರದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ  ಕಥೆಗಾರ ಮೊಗಳ್ಳಿ ಗಣೇಶ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ತಾಲ್ಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ, ಸಾಹಿತಿಗಳು ಹಾಗೂ ಪರಿಷತ್ತಿನ ಪದಾಧಿಕಾರಿಗಳು ಇದ್ದಾರೆ   

ರಾಮನಗರ: ‘ವಿಭಿನ್ನ ಕಥಾ ವಸ್ತು ಹಾಗೂ ವಿಶಿಷ್ಟವಾದ ನಿರೂಪಣೆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕಥೆಗಾರ ಹಾಗೂ ವಿಮರ್ಶಕ ಮೊಗಳ್ಳಿ ಗಣೇಶ್ ಅವರು ದೇಶ ಕಂಡ ಅಪ್ರತಿಮ ಸಾಹಿತ್ಯ ಪ್ರತಿಭೆಯಾಗಿದ್ದರು. ಅವರ ಕಥೆಗಳು ನಾಡಿನ ಗಡಿ ಮೀರಿ ಓದುಗರನ್ನು ಸೆಳೆದಿವೆ’ ಎಂದು ಉಪನ್ಯಾಸಕ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿತ್ತು ನಗರದಲ್ಲಿರುವ ತನ್ನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಥೆಗಾರ ಮೊಗಳ್ಳಿ ಗಣೇಶ್ ಅವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ‘ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿಯವರಾದ ಗಣೇಶ್ ಅವರು, ಸ್ಥಳೀಯವಾಗಿ ಹೆಚ್ಚಿನ ಓಡನಾಟ ಹೊಂದಿರಲಿಲ್ಲ. ಹಾಗಾಗಿ, ಸ್ಥಳೀಯ ಯುವ ಸಾಹಿತಿಗಳಿಗೆ ಅವರ ಪರಿಚಯ ಇಲ್ಲವಾಯಿತು. ಆದರೆ, ಅವರ ಸಾಹಿತ್ಯದ ಪ್ರಭಾವ ಗಾಢವಾದುದು’ ಎಂದರು.

‘ಗಣೇಶ್ ಅವರ ಬುಗರಿ ಕಥೆಯ ದಲಿತ ಲೋಕದ ಬೇರೆಯದೇ ಚಿತ್ರಣವನ್ನು ಕಟ್ಟಿ ಕೊಟ್ಟಿದೆ. ಅವರ ಪ್ರತಿ ಕಥೆಯಲ್ಲೂ ಹೊಸತನ ಮತ್ತು ಆಯಾಮಗಳು ಎದ್ದು ಕಾಣುತ್ತವೆ. ಪ್ರಶಸ್ತಿ–ಪುರಸ್ಕಾರಗಳ ಹಿಂದೆ ಬೀಳದ ಮೊಗಳ್ಳಿ ಗಣೇಶರ್ ಅವರು, ಎಲೆ ಮರೆಯ ಕಾಯಿಯಂತೆ ಸಾಹಿತ್ಯ ಕಾಯಕ ಮಾಡಿದರು. ಅವರ ಸಮಗ್ರ ಸಾಹಿತ್ಯವನ್ನು ಎಲ್ಲರೂ ಓದಬೇಕು’ ಎಂದು ಹೇಳಿದರು.

ಸಾಹಿತಿ ಜಿ.ಎಚ್. ರಾಮಯ್ಯ ಮಾತನಾಡಿ, ‘ದಲಿತ ಸಾಹಿತ್ಯದ ಮೊದಲ ಸಾಲಿನಲ್ಲಿ ಬರುವ ದೇವನೂರ ಮಹದೇವ, ಸಿದ್ದಲಿಂಗಯ್ಯ ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆನಂತದ ಸಾಲಿನಲ್ಲಿ ಬರುವ ಮೊಗಳ್ಳಿ ಅವರು ಸಹ ತಮ್ಮದೇ ಆದ ಛಾಪು ಮೂಡಿಸಿದರು. ಯುವ ಸಾಹಿತಿಗಳ ಮೇಲೆ ಅವರ ಸಾಹಿತ್ಯ ಹೆಚ್ಚಿನ ಪ್ರಭಾವ ಬೀರಿದೆ’ ಎಂದರು.

ADVERTISEMENT

ಪಟೇಲ್ ಸಿ. ರಾಜು, ‘ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿದ ಮೊಗಳ್ಳಿ ಅವರು ಭೌತಿಕವಾಗಿ ನಮ್ಮಿಂದ ದೂರವಾಗಿರಬಹುದು. ಆದರೆ, ಅವರ ಸಾಹಿತ್ಯಗಳ ಮೂಲಕ ನಮ್ಮೊಂದಿಗೆ ಸದಾ ಜೀವಂತವಾಗಿರುತ್ತಾರೆ. ಪರಿಷತ್ತು ಅವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸುವ ಮೂಲಕ, ಸಾಹಿತ್ಯ ಚಟುವಟಿಕೆಗಳನ್ನು ನಡೆಸಬೇಕು. ಅದಕ್ಕೆ ₹5 ಸಾವಿರ ನೀಡುವೆ’ ಎಂದು ಭರವಸೆ ನೀಡಿದರು.

ಪತ್ರಕರ್ತ ಗೋ.ರಾ. ಶ್ರೀನಿವಾಸ್ ಮಾತನಾಡಿ, ‘ಮೊಗಳ್ಳಿ ತಮ್ಮ ಬ್ಯಾಲದ ಕಹಿ ಘಟನೆಗಳು ಹಾಗೂ ಅನುಭವಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ಆದರೆ, ಅವರು ಹುಟ್ಟಿ ಬೆಳೆದ ಊರಿಗೆ ಬರಲು ಸಾಧ್ಯವಾಗದಿವುದು ನೋವಿನ ಸಂಗತಿ’ ಎಂದರು.

ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ, ಪ್ರಸನ್ನ ನಂಜಾಪುರ, ಶಿವದೇವೇಗೌಡ ಮಾತನಾಡಿದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ರಾಜೇಶ್ ಕವಾಣಪುರ, ತಾಲ್ಲೂಕು ಕೋಶಾಧ್ಯಕ್ಷ ನಂಜುಂಡಿ, ಬಿ.ಟಿ. ರಾಜೇಂದ್ರ, ಸಮದ್, ಕಾಳೇಗೌಡ, ಶ್ರೀನಿವಾಸ್, ಲಿಂಗೇಶ್, ಸಂತೋಷ, ಅನೀಶ್, ಪರಮೇಶ್, ಸುರೇಶ್, ಜಬಿವುಲ್ಲಾ, ಸುನೀಲ್, ಸಾಯಿ ರಮೇಶ್ ಇದ್ದರು.

‘ಸಮ್ಮೇಳನಾಧ್ಯಕ್ಷತೆ ತಿರಸ್ಕರಿಸಿದ್ದ ಮೊಗಳ್ಳಿ’

‘ಮೊಗಳ್ಳಿ ಅವರು ಕಥೆಗಾರರಷ್ಟೇ ಅಲ್ಲದೆ ಕಾದಂಬರಿಕಾರ ಮತ್ತು ವಿಮರ್ಶಕರಾಗಿಯೂ ಸಾಹಿತ್ಯ ಕ್ಷೇತ್ರಕ್ಕೆ ಪರಿಚಿತರು. ಅವ ನಿಧನವು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕಸಾಪ 2014ರಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವಂತೆ ಗಣೇಶ್ ಅವರಿಗೆ ಮನವಿ ಮಾಡಲಾಗಿತ್ತು. ಆದರೆ ಅವರು ನಯವಾಗಿಯೇ ನಮ್ಮ ಮನವಿ ತಿರಸ್ಕರಿಸಿದರು. ದಲಿತ ಚಳವಳಿಗೂ ಅವರು ಅನನ್ಯ ಕೊಡುಗೆ ನೀಡಿದ್ದರು. ತಳ ಸಮುದಾಯಗಳ ನೋವು– ನಲಿವುಗಳನ್ನು ತಮ್ಮ ವಿಶಿಷ್ಟ ಶೈಲಿಯ ಕಥೆಗಳ ಮೂಲಕ ಓದುಗರಿಗೆ ಪರಿಚಯಿಸಿದರು’ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.