ADVERTISEMENT

ನರೇಗಾ: ಸ್ತ್ರೀಯರಿಗೆ ಹೆಚ್ಚಿನ ಉದ್ಯೋಗ

ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಯಿಂದ ‘ಮಹಿಳಾ ಕಾಯಕೋತ್ಸವ’ ಯೋಜನೆ ಜಾರಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 15:09 IST
Last Updated 20 ಜನವರಿ 2021, 15:09 IST
ಜಿಲ್ಲೆಯಲ್ಲಿ ನರೇಗಾ ಕಾಮಗಾರಿಯಲ್ಲಿ ತೊಡಗಿಸಿಕೊಂಡ ಮಹಿಳೆಯರು
ಜಿಲ್ಲೆಯಲ್ಲಿ ನರೇಗಾ ಕಾಮಗಾರಿಯಲ್ಲಿ ತೊಡಗಿಸಿಕೊಂಡ ಮಹಿಳೆಯರು   

ರಾಮನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ‘ಮಹಿಳಾ ಕಾಯಕೋತ್ಸವ’ ಯೋಜನೆ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲೂ ಇದಕ್ಕೆ ಚಾಲನೆ ದೊರೆತಿದೆ.

ಏನಿದರ ಉದ್ದೇಶ: ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸುವುದು, ಕಾಮಗಾರಿ ಸ್ಥಳಗಳನ್ನು ಮಹಿಳೆ ಮತ್ತು ಮಕ್ಕಳ ಸ್ನೇಹಿಯಾಗಿ ಮಾಡುವುದು. ಸ್ವಸಹಾಯ ಸಂಘಗಳ ಭಾಗವಹಿಸುವಿಕೆಗೆ ಉತ್ತೇಜನ ನೀಡುವುದು. ಮಹಿಳಾ ಕಾರ್ಮಿಕರು ಭಾಗವಹಿಸುವಂತೆ ಪ್ರೇರೇಪಿಸಲು ಮಹಿಳಾ ಕಾಯಕ ಬಂಧುಗಳಿಗೆ ತರಬೇತಿ ಆಯೋಜನೆ ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಶೇ 5ರಷ್ಟು ಹೆಚ್ಚಿಸುವ ಗುರಿ: ‘ರಾಮನಗರ ಜಿಲ್ಲೆಯಲ್ಲಿ ಸದ್ಯ ನರೇಗಾ ಕಾಮಗಾರಿಗಳಲ್ಲಿ ಶೇ. 49.30ರಷ್ಟು ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ. ಇದನ್ನು ಇನ್ನೂ ಕನಿಷ್ಠ ಶೇ.5 ರಷ್ಟು ಹೆಚ್ಚಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಇದೇ 15 ರಿಂದ ಫೆಬ್ರವರಿ 15 ರವರೆಗೆ ಕುಟುಂಬಗಳ ಸಮೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಎರಡು ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಲಾಗಿದೆ’ ಎನ್ನುತ್ತಾರೆ ಜಿ.ಪಂ. ಸಿಇಒ ಇಕ್ರಂ.

ADVERTISEMENT

ಅಗತ್ಯ ಪ್ರಚಾರ: ಪ್ರತಿ ಮನೆ ಮನೆಯ ಸಮೀಕ್ಷೆಗೆ ಅಗತ್ಯ ಇರುವ ಸಾಮಗ್ರಿಗಳಾದ ಸರ್ವೆ ನಮೂನೆ, ಸ್ಟಿಕ್ಕರ್ಸ್‌‌, ಐ.ಡಿ ಕಾರ್ಡ್, ಲೇಖನ ಸಾಮಗ್ರಿಗಳನ್ನು ಕೊಳ್ಳಲು ಪ್ರತಿ ಗ್ರಾಮ ಪಂಚಾಯಿತಿಗೆ ಮುಂಗಡವಾಗಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ ಮನೆ ಮನೆಗೂ ಭೇಟಿ ನೀಡಿ ಕುಟುಂಬದ ಮಹಿಳೆಯ ಸಮೀಕ್ಷೆ ನಡೆಸಿ, ಕೆಲಸ ಮಾಡಲು ಇಚ್ಛಿಸುವ ಮಹಿಳೆಯರಿಂದ ಬೇಡಿಕೆಯನ್ನು ಪಡೆದು, ಆಗಿಂದಾಗ್ಗೆ ಕೂಲಿಯನ್ನು ನೀಡಲು ಅಗತ್ಯ ಕ್ರಮ ವಹಿಸಲಾಗಿದೆ. ಮಹಿಳಾ ಕಾಯಕೋತ್ಸವ ಮೇಲ್ವಿಚಾರಣೆ ನಡೆಸಲು ಪ್ರತಿ ತಾಲ್ಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೀಯೋಜಿಸಲಾಗಿದೆ. ಕಾಯಕೋತ್ಸವದಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸುವ ಅಧಿಕಾರಿ ಇಲ್ಲವೆ ಸಿಬ್ಬಂದಿಗಳಿಗೆ ಬಹುಮಾನ ಸಹ ನೀಡಲಾಗುತ್ತದೆ ಎನ್ನುತ್ತಾರೆ ಅವರು.

ಮುಂದಿನ ಭಾಗವಾಗಿ ಫೆಬ್ರವರಿ 15 ರಿಂದ ಮಾರ್ಚ್ 15 ರವರೆಗೆ ಎರಡನೇ ಹಂತದಲ್ಲಿ ಸಮೀಕ್ಷೆ ನಡೆಯಲಿದೆ. ಆಗ ಪ್ರತಿ ತಾಲ್ಲೂಕಿನಿಂದ 6 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು ಪ್ರಚಾರ ಕೈಗೊಂಡು ಅರ್ಹ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಲಾಗುತ್ತದೆ ಎನ್ನುತ್ತಾರೆ ಇಕ್ರಂ.

ತಲಾ ನಾಲ್ಕು ಗ್ರಾ.ಪಂ. ಗುರುತು
ಮೊದಲನೇ ಹಂತದಲ್ಲಿ ಪ್ರತಿ ತಾಲ್ಲೂಕಿನಿಂದ ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಇರುವ ತಲಾ 4 ಗ್ರಾಮ ಪಂಚಾಯಿತಿಗಳನ್ನು ಗುರುತಿಸಲಾಗಿದೆ. ಚನ್ನಪಟ್ಟಣ ತಾಲ್ಲೂಕಿನಿಂದ ಎಲೆತೋಟದಹಳ್ಳಿ, ಬಿ.ವಿ.ಹಳ್ಳಿ, ಇಗ್ಗಲೂರು, ಹಾರೊಕೊಪ್ಪ, ಕನಕಪುರ ತಾಲ್ಲೂಕಿನಿಂದ ಚೀಲೂರು, ಮರಳೇಬೇಕುಪ್ಪೆ, ಯಲಚವಾಡಿ, ಹೇರೆಂದ್ಯಾಪನಹಳ್ಳಿ, ಮಾಗಡಿ ತಾಲ್ಲೂಕಿನಿಂದ ಮೊಟಗೊಂಡನಹಳ್ಳಿ, ಬಿಸ್ಕೂರು, ಮಾಡಬಾಳ್, ಲಕ್ಕೇನಹಳ್ಳಿ, ರಾಮನಗರ ತಾಲ್ಲೂಕಿನಿಂದ ಕೂಟಗಲ್, ಕೈಲಾಂಚ, ಹರೀಸಂದ್ರ, ಗೋಪಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಮಹಿಳಾ ಕಾಯಕೋತ್ಸವ ಸಮೀಕ್ಷೆ ಪ್ರಗತಿಯಲ್ಲಿದ್ದು, ಅರ್ಹ ಫಲಾನುಭವಿಗಳ ಪಟ್ಟಿ ಮಾಡಿ ಅವರಿಗೆ ಹೆಚ್ಚಿನ ಉದ್ಯೋಗಾವಕಾಶ, ತರಬೇತಿ ನೀಡಲಾಗುವುದು
ಇಕ್ರಂ
ಜಿ.ಪಂ. ಸಿಇಒ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.