ADVERTISEMENT

ಕನಕಪುರ: ಕೊಳದಲ್ಲಿ ಮುಳುಗಿ ತಾಯಿ– ಮಗಳು ಸಾವು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 4:04 IST
Last Updated 22 ಡಿಸೆಂಬರ್ 2025, 4:04 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಕನಕಪುರ: ತಾಯಿ ಮತ್ತು ಮಗಳು ಕೊಳದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹೊಸದುರ್ಗ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ಮೃತರನ್ನು ಬೆಂಗಳೂರು ಮೂಲದ ಭಾಗ್ಯಲಕ್ಷ್ಮಿ (35) ಮತ್ತು ಅವರ ಪುತ್ರಿ ಚಾರ್ವಿ (7) ಎಂದು ಗುರುತಿಸಲಾಗಿದೆ.

ಭಾಗ್ಯಲಕ್ಷ್ಮಿ ಅವರು ಬೆಂಗಳೂರಿನ ನಾರಾಯಣಸ್ವಾಮಿ (37) ಎಂಬುವರ ಜೊತೆಯಲ್ಲಿ ಸಹ ಜೀವನದಲ್ಲಿದ್ದರು. ಭಾನುವಾರ ನಾರಾಯಣಸ್ವಾಮಿ ಅವರೊಂದಿಗೆ ಹೊಗೇನಕಲ್ ಜಲಪಾತಕ್ಕೆ ಹೋಗಲು ಹೊಸ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದರು.

ADVERTISEMENT

ಈ ವೇಳೆ ನಾರಾಯಣಸ್ವಾಮಿ ಅವರು ತಮಗೆ ಪರಿಚಿತರಾದ ದಾಸಪ್ಪ ಅವರನ್ನು ಮಾತನಾಡಿಸುವ ಸಲುವಾಗಿ ಹೊಸದುರ್ಗದ ದೇವಸ್ಥಾನದ ಬಳಿ ಕಾರು ನಿಲ್ಲಿಸಿ ದೇವಸ್ಥಾನಕ್ಕೆ ಹೋಗಿದ್ದರು. ಆಗ ಪಕ್ಕದಲ್ಲಿದ್ದ ಕೊಳದ ಬಳಿ ಭಾಗ್ಯಲಕ್ಷ್ಮಿ ಮತ್ತು ಚಾರ್ವಿ ಕುಳಿತಿದ್ದರು.

ಈ ವೇಳೆ ನೀರಿನಲ್ಲಿ ಆಟವಾಡುತ್ತಿದ್ದ ಚಾರ್ವಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು..

ನಮಗೆ ರಾತ್ರಿ 8 ಗಂಟೆಗೆ ಘಟನೆಯ ಮಾಹಿತಿ ತಿಳಿಯಿತು. ಕೂಡಲೇ ಸ್ಥಳಕ್ಕೆ ನಾವು ಪರಿಶೀಲಿಸಿ, ಶವಗಳನ್ನು ಕೊಳದಿಂದ ಮೇಲಕ್ಕೆತ್ತಿ ದಯಾನಂದ ಸಾಗರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ವರದಿಯಲ್ಲಿ ಸಾವಿಗೆ ಕಾರಣ ಗೊತ್ತಾಗಲಿದೆ. ಸದ್ಯ ನಾರಾಯಣಸ್ವಾಮಿ ಅವರು ನಮ್ಮ ವಶದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಸಾವಿನ ಬಗ್ಗೆ ಅನುಮಾನ: ಕೊಳದಲ್ಲಿ ಮೃತಪಟ್ಟಿರುವ ತಾಯಿ ಮತ್ತು ಮಗಳ ಸಾವಿನ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತರ ಜೊತೆ ಬಂದಿರುವ ವ್ಯಕ್ತಿ ನಾರಾಯಣಸ್ವಾಮಿ, ಆಗಾಗ ಗ್ರಾಮಕ್ಕೆ ಬಂದು ಶ್ರೀನಿವಾಸ್ ಎಂಬುವರನ್ನು ಪರಿಚಯ ಮಾಡಿಕೊಂಡಿದ್ದರು.

ಇಂದು ಹೊಸ ಸ್ವಿಫ್ಟ್ ಕಾರಿನಲ್ಲಿ ಭಾಗ್ಯಲಕ್ಷ್ಮಿ ಮತ್ತು ಚಾರ್ವಿ ಅವರ ಜೊತೆ ಸಂಜೆ 5 ಗಂಟೆಗೆ ಗ್ರಾಮಕ್ಕೆ ಬಂದವರು, ದೇವಸ್ಥಾನದ ಕೊಳದ ಕಡೆ ಹೋಗಿದ್ದಾರೆ. ಅದಾದ ಸ್ವಲ್ಪ ಹೊತ್ತಿನಲ್ಲೇ ತಾಯಿ ಮತ್ತು ಮಗಳು ಕಾಲು ಜಾರಿ ಕೊಳದಲ್ಲಿ ಬಿದ್ದಿದ್ದಾರೆ ಎಂದು ನಾರಾಯಣಸ್ವಾಮಿ ಗ್ರಾಮಕ್ಕೆ ಬಂದು ಸ್ಥಳೀಯರಿಗೆ ಹೇಳಿದರು.

ನಾವು ಕೂಡಲೇ ಹೋಗಿ ನೋಡುವಷ್ಟರಲ್ಲಿ ತಾಯಿ ಮತ್ತು ಮಗಳು ನೀರಿನಲ್ಲಿ ಮುಳುಗಿದ್ದರು. ನಾರಾಯಣಸ್ವಾಮಿ ಮಾತಿನಲ್ಲಿ ಹೆಚ್ಚಿನ ಅನುಮಾನವಿದೆ. ಇದು ಆಕಸ್ಮಿಕ ಘಟನೆಯೊ ಅಥವಾ ವ್ಯವಸ್ಥಿತ ಕೊಲೆಯೊ ಎಂಬುದು ಪೊಲೀಸ್ ತನಿಖೆಯಿಂದಲೇ ಗೊತ್ತಾಗಬೇಕಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.