ADVERTISEMENT

ತಾಯಿಯೇ ಮೊದಲ ಗುರು: ಎಸ್‌.ಸುನಿಲ್‌ ಅಭಿಮತ

ವಿಶ್ವ ಮಾತೃ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಮೇ 2019, 12:57 IST
Last Updated 11 ಮೇ 2019, 12:57 IST
ವಿಶ್ವಮಾತೃದಿನದ ಅಂಗವಾಗಿ ಸಂಸ್ಕೃತಿ ಪರಿಚಾರಕಿ ಪ್ರಭಾವತಮ್ಮ ಸತ್ಯನಾರಾಯಣ ಶ್ರೇಷ್ಠಿ ಅವರಿಗೆ ಸಂಗೀತ ಶಿಕ್ಷಕಿ ಮೀರಾ ಸಿಹಿ ತಿನ್ನಿಸಿದರು
ವಿಶ್ವಮಾತೃದಿನದ ಅಂಗವಾಗಿ ಸಂಸ್ಕೃತಿ ಪರಿಚಾರಕಿ ಪ್ರಭಾವತಮ್ಮ ಸತ್ಯನಾರಾಯಣ ಶ್ರೇಷ್ಠಿ ಅವರಿಗೆ ಸಂಗೀತ ಶಿಕ್ಷಕಿ ಮೀರಾ ಸಿಹಿ ತಿನ್ನಿಸಿದರು   

ಮಾಗಡಿ: ‘ಮನೆಯೆ ಮೊದಲ ಪಾಠಶಾಲೆ, ತಾಯಿ ಮೊದಲ ಗುರು. ಆಕೆಯಿಂದ ಪಾಠಕಲಿತವರೇ ಧನ್ಯರು ಎಂಬ ಅನುಭಾವಿಗಳ ಮಾತಿನಂತೆ ತಾಯಿಯೇ ನಿಜವಾದ ದೇವರು’ ಎಂದು ಮಾತೃಶ್ರೀ ಬಳಗದ ಸಂಚಾಲಕ ಎಸ್‌.ಸುನಿಲ್‌ ಹೇಳಿದರು.

ಪಟ್ಟಣದ ಕನ್ನಿಕಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಶನಿವಾರ ನಡೆದ ‘ವಿಶ್ವ ಮಾತೃ ದಿನ’ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶ್ರೀರಾಮಚಂದ್ರನ ತಾಯಿ ಕೌಸಲ್ಯ, ಶ್ರೀಕೃಷ್ಣನ ತಾಯಿ ದೇವಕಿ ಸದ್ಗುಣ ಸಂಪನ್ನೆಯರಾಗಿದ್ದರು. ಮಕ್ಕಳಿಗೆ ಬಾಲ್ಯದಲ್ಲಿಯೇ ದೇವರು, ಧರ್ಮ, ಸೇವೆ, ತಾಯಿ–ತಂದೆ, ಗುರುಹಿರಿಯರನ್ನು ಗೌರವಿಸುವುದನ್ನು ಹಾಗೂ ಪರೋಪಕಾರದ ಗುಣಗಳನ್ನು ಬಿತ್ತಿ, ಬೆಳೆಸಿ ಗುಣಗ್ರಾಹಿ ವ್ಯಕ್ತಿತ್ವ ಬೆಳೆಸಲು ಸಹಕಾರ ಮಾಡಿದರು. ಲೋಕೋಪಕಾರಕ್ಕೆ ಮಕ್ಕಳನ್ನು ಅಣಿಗೊಳಿಸಿದರು’ ಎಂದು ತಿಳಿಸಿದರು.

ADVERTISEMENT

ಸಂಗೀತ ಶಿಕ್ಷಕಿ ಮೀರಾಶಿವಕುಮಾರ್‌ ಮಾತನಾಡಿ ‘ಮನೆಯ ಬೆಳೆಕು ಮಹಿಳೆಯರು. ಮಮತೆಯ ಮೂರ್ತಿ ತಾಯಿ. ತ್ಯಾಗಮಯಿಯಾದ ಆಕೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ವೃದ್ಧರನ್ನು ರಕ್ಷಣೆ ಮಾಡಿ ಅವರ ಸೇವೆ ಮಾಡುವುದೇ ನಿಜವಾದ ದೇವರ ಪೂಜೆ. ಜಪಾನ್‌ ಮತ್ತು ಚೈನಾ ದೇಶಗಳಲ್ಲಿ ಹಿರಿಯರನ್ನು ರಕ್ಷಣೆ ಮಾಡಿ ಅವರಲ್ಲಿನ ಜೀವನದ ಅನುಭವಗಳನ್ನು ಹಂಚಿಕೊಳ್ಳಲಾಗುತ್ತಿದೆ. ಶಕ್ತಿಸ್ವರೂಪಿಣಿಯಾರಾದ ಮಾತೃದೇವತೆ ಬಗ್ಗೆ ನಾವೆಲ್ಲರೂ ಮೊದಲ ಪ್ರಾರ್ಥನೆ ಮಾಡುತ್ತೇವೆ. ಮುಕ್ಕೋಟಿ ದೇವತೆಗಳಲ್ಲಿ ತಾಯಿಗೆ ಮೊದಲ ಪೂಜೆ ಸಲ್ಲಿಸಬೇಕು’ ಎಂದರು.

ಮಾತೃಶ್ರೀ ಬಳಗದ ಸಂಗೀತಾ ಪ್ರಸನ್ನ ಕುಮಾರ್‌, ಸ್ಮಿತಾ ಸುನಿಲ್‌, ಸುಚರಿತಾ, ಶೃತಿ, ಸಮನ್ವಿತ, ಆಡನಕುಪ್ಪೆ ಮಹೇಶ್‌, ವರ್ತಕ ಶಿವಕುಮಾರ್‌ ಪುರಾಣದ ತಾಯಂದಿರು ಮಕ್ಕಳನ್ನು ಸಾಕಿ–ಸಲಹಿದ ಬಗ್ಗೆ ವಿವರಿಸಿದರು.

ಸಂಸ್ಕೃತಿ ಪರಿಚಾರಕರಾದ ಪ್ರಭಾವತಮ್ಮ ಸತ್ಯನಾರಾಯಣ ಶ್ರೇಷ್ಠಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.