ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಮತ್ತು ಧಾನ್ ಫೌಂಡೇಶನ್ ವತಿಯಿಂದ ತಾಲ್ಲೂಕಿನ ಕಲ್ಯಾ ಗ್ರಾಮದಲ್ಲಿ ವೈಜ್ಞಾನಿಕ ಅಣಬೆ ಬೇಸಾಯ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಗುರುವಾರ ನಡೆಯಿತು.
ಕೇಂದ್ರದ ಗೃಹ ವಿಜ್ಞಾನಿ ಡಾ.ಅನಿತ ಎಸ್.ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಣಬೆ ಅತಿ ಮುಖ್ಯ ಪೌಷ್ಟಿಕ ಆಹಾರವಾಗಿ ಪರಿಚಯವಾಗುತ್ತಿದೆ. ಗುಣಮಟ್ಟದ ಅಣಬೆ ಅಪೌಷ್ಟಿಕತೆ ನಿಯಂತ್ರಣ, ಪ್ರೋಟಿನ್, ಅವಶ್ಯಕ ಪೋಷಕಾಂಶ ಜೀವಸತ್ವ ‘ಬಿ’, ‘ಡಿ’ ಹಾಗೂ ಖನಿಜ ಮತ್ತು ನಾರು ಹೊಂದಿದೆ. ಇದು ಕ್ಯಾನ್ಸರ್, ಹೃದಯ ಕಾಯಿಲೆ, ಬೊಜ್ಜು ನಿರ್ವಹಣೆ ಮತ್ತು ರೋಗ ನಿರೋಧಕ ವೃದ್ಧಿಗೆ ಸಹಾಯಕವಾಗಿದೆ. ಇದರಲ್ಲಿರುವ ಹೆಚ್ಚಿನ ಪ್ರೋಟಿನ್ ಮತ್ತು ಕಬ್ಬಿಣಾಂಶದಿಂದ ರಕ್ತ ಹೀನತೆ ಕೂಡ ನಿರ್ವಹಣೆ ಮಾಡಬಹುದು. ಅಣಬೆ ಸಂಸ್ಕರಣ ವಿಧಾನ ಮತ್ತು ಇದರಿಂದ ತಯಾರಿಸುವ ಅನೇಕ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ, ಉದಾಹರಣೆಗೆ ಸೂಪ್, ಉಪ್ಪಿನಕಾಯಿ, ನಿರ್ಜಲಿಕರಿಸಿದ ಅಣಬೆ ಇತ್ಯಾದಿ ಕುರಿತು ಮಾಹಿತಿ ನೀಡಿದರು.
ಬೇಸಾಯಶಾಸ್ತ್ರದ ವಿಜ್ಞಾನಿಗಳಾದ ಡಾ.ಜಿ.ಪ್ರಮೋದ್ ಮಾತನಾಡಿ, ಅಣಬೆ ಉತ್ಪಾದನೆಯಲ್ಲಿ ಕೈಗೊಳ್ಳಬೇಕಾದ ವಿವಿಧ ತಾಂತ್ರಿಕತೆಗಳಾದ ಬೀಜದ ಉತ್ಪಾದನೆ, ಬೀಜದ ಆಯ್ಕೆ, ವಿವಿಧ ಮಾಧ್ಯಮಗಳ ಬಳಕೆ, ವಿವಿಧ ತಳಿ ಹಾಗೂ ಉತ್ಪಾದನೆ ಮಾಡುವ ವಿಧಾನ ಹಾಗೂ ರೋಗ, ಕೀಟ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡಿದರು.
ಕೃಷಿ ವಿಸ್ತರಣೆ ವಿಜ್ಞಾನಿಗಳಾದ ಡಾ.ಎಸ್.ಸೌಜನ್ಯ ಮಾತನಾಡಿ, ಅಣಬೆ ಬೇಸಾಯ ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಅವಕಾಶವಾಗಿದೆ. ದೊಡ್ಡ ಪ್ರಮಾಣದಲ್ಲಿ ಮಾಡುವುದಕ್ಕಿಂತ ಮುಂಚೆ ಅದರ ಕೌಶಲ ಕರಗತ ಮಾಡುಕೊಳ್ಳುವುದು ಹಾಗೂ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ ನಂತರ ಅಭಿವೃದ್ಧಿಪಡಿಸುವುದು ಸೂಕ್ತ ಎಂದು ತಿಳಿಸಿದರು.
ಅಣಬೆ ಪ್ಯಾಕಿಂಗ್, ಬ್ಯಾಂಡಿಂಗ್, ಮಾರುಕಟ್ಟೆ ಕುರಿತು ಸಮಗ್ರ ಮಾಹಿತಿ ನೀಡಿ ಅಣಬೆ ಬೇಸಾಯ ಕುರಿತು ಪ್ರಾತ್ಯಕ್ಷಿತೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಆತ್ಮ ಸಿಬ್ಬಂದಿ ಸಂಧ್ಯಾರಾಣಿ ಹಾಗೂ ದಾನ್ ಫೌಂಡೇಷನ್ ಸರಸ್ವತಿ ಸೇರಿದಂತೆ ರೈತ ಮಹಿಳೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.