ADVERTISEMENT

ರಾಮನಗರ | ಧ್ಯಾನ್‌ಚಂದ್ ಕ್ರೀಡಾದರ್ಶ ಪಾಲಿಸಿ: ಜ್ಞಾನೇಶ್ವರಿ

ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 2:13 IST
Last Updated 31 ಆಗಸ್ಟ್ 2025, 2:13 IST
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಮೇಜರ್ ಧ್ಯಾನ್‌ಚಂದ್ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಜ್ಞಾನೇಶ್ವರಿ  ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಹಾಗೂ ಇತರರು ಇದ್ದರು
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಮೇಜರ್ ಧ್ಯಾನ್‌ಚಂದ್ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಜ್ಞಾನೇಶ್ವರಿ  ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಹಾಗೂ ಇತರರು ಇದ್ದರು   

ರಾಮನಗರ: ‘ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರು 1905ರಲ್ಲಿ ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಜನಿಸಿದರು. ಇಂದು ಕ್ರೀಡೆಗಳಿಗೆ ಉತ್ಸಾಹ ಹಾಗೂ ಪ್ರಾಮುಖ್ಯತೆ ನೀಡಲು ಅವರೇ ಕಾರಣಕರ್ತರಾಗಿದ್ದಾರೆ. ಅದಕ್ಕಾಗಿಯೇ ಅವರನ್ನು ಕ್ರೀಡೆಗಳ ಪಿತಾಮಹ ಎಂದು ಕರೆಯಲಾಗುತ್ತದೆ. ಕ್ರೀಡಾಪಟುಗಳು ಧ್ಯಾನ್‌ಚಂದ್ ಆದರ್ಶಗಳನ್ನು ಪಾಲಿಸಬೇಕು’ ಎಂದು ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಜ್ಞಾನೇಶ್ವರಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮೇಜರ್ ಧ್ಯಾನ್‌ಚಂದ್ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಧ್ಯಾನ್‌ಚಂದ್ ಅವರು ದೇಶದ ಜನರಿಗೆ ಕ್ರೀಡೆಯಲ್ಲಿರುವ ಲಾಭಗಳು ಹಾಗೂ ಉಪಯೋಗಗಳನ್ನು ಮನವರಿಕೆ ಮಾಡಿಕೊಟ್ಟರು. ಅವರು ಹಾಕಿ ಕ್ರೀಡೆಯಲ್ಲಿ ಸಣ್ಣ ವಯಸ್ಸಿನಲ್ಲಿಯೇ ಸತತವಾಗಿ ಮೂರು ಬಾರಿ ಚಿನ್ನದ ಪದಕ ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿ ವಿಶ್ವಖ್ಯಾತಿಯಾದರು. ನಮ್ಮ ಜೀವನದಲ್ಲಿ ಕ್ರೀಡೆ ಬಹಳ ಮುಖ್ಯ. ಯಾವುದೇ ವ್ಯಾಯಾಮವಿಲ್ಲದೆಯೇ ಮನುಷ್ಯ ಆರೋಗ್ಯವಾಗಿರಲು ಸಾಧ್ಯವಿಲ್ಲ. ಆಹಾರ ಎಷ್ಟು ಮುಖ್ಯವೋ, ಕ್ರೀಡೆಯೂ ಅಷ್ಟೇ ಮುಖ್ಯ. ಸದೃಢ ಆರೋಗ್ಯಕ್ಕೆ ಕ್ರೀಡೆ ಮುಖ್ಯ’ ಎಂದರು.

ADVERTISEMENT

‘ಕ್ರೀಡೆಯು ಎಲ್ಲಾ ದೇಶವನ್ನು ಒಟ್ಟುಗೂಡಿಸುವ ಒಂದು ಮಾಧ್ಯಮ. ದೇಶಗಳ ಮಧ್ಯೆ ಭಾವೈಕ್ಯ ಮೂಡಿಸುವ ಸಾಧನ. ವಿದ್ಯಾರ್ಥಿಗಳು ಶಿಕ್ಷಣದಿಂದ ಮಾತ್ರ ಪರಿಪೂರ್ಣರಾಗಲು ಸಾಧ್ಯವಿಲ್ಲ. ಶಿಕ್ಷಣದೊಂದಿಗೆ ಕ್ರೀಡೆಯೂ ಮುಖ್ಯ. ಇದನ್ನು ಹಿಂದಿನ ಕಾಲದಲ್ಲಿಯೇ ಮನವರಿಕೆ ಮಾಡಿಕೊಟ್ಟವರು ಧ್ಯಾನ್‌ಚಂದ್ ಎಂದು ಬಣ್ಣಿಸಿದರು’ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ಮಾತನಾಡಿ, ‘ಎಲ್ಲಾ ಮಕ್ಕಳು ಶಿಕ್ಷಣದ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕು. ಆಟ-ಪಾಠಗಳಲ್ಲಿ ಭಾಗವಹಿಸಬೇಕು. ಆಟವಾಡುವ ಸಂದರ್ಭದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆಗುವ ಬದಲಾವಣೆಗಳು ಅಪಾರ. ಯಾವುದೇ ಒಂದು ಕ್ರೀಡೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಮಕ್ಕಳಿಗೆ ಉಲ್ಲಾಸ, ಸಂತೋಷ ಸಿಗುತ್ತದೆ’ ಎಂದು ಹೇಳಿದರು.

‘ಆಟವಾಡುವ ಸಂದರ್ಭದಲ್ಲಿ ಮನಸ್ಸು ಏಕಾಗ್ರತೆ ಹಾಗೂ ಸಂತೋಷ ನೀಡುತ್ತದೆ. ಮಹತ್ತರವಾದ ಕ್ರೀಡೆಗಳ ಬಗ್ಗೆ ಶಿಕ್ಷಕರು ಎಲ್ಲಾ ಹಂತಗಳಲ್ಲಿಯೂ ಸಹ ಅತ್ಯಂತ ವ್ಯವಸ್ಥಿತವಾಗಿ ಯಾವುದೇ ಕೊರತೆಯಾಗದಂತೆ ತಾಲ್ಲೂಕು ಹಾಗೂ ಜಿಲ್ಲಾ ಹಂತಗಳಲ್ಲಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಸ್ವಾಗತಿಸಿದರು. ಅತಿಥಿಗಳು ಧ್ಯಾನ್‌ಚಂದ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಜಿಲ್ಲಾ ದೈಹಿಕ ವಿಷಯ ಶಿಕ್ಷಣಾಧಿಕಾರಿ ಸುಂದರ್‌ ಗೌಡ, ತಾಲ್ಲೂಕು ದೈಹಿಕ ವಿಷಯ ಪರಿವೀಕ್ಷಕ ನೀಲಕಂಠ ಸ್ವಾಮಿ, ಗ್ರೇಡ್-1 ಶಿಕ್ಷಕರ ಸಂಘದ ಅಧ್ಯಕ್ಷ ಶಿವಮೂರ್ತಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಂಗಸಾಮಯ್ಯ, ಗಿರೀಶ್, ಅರ್ಚಕರಯ್ಯ, ಚಂದ್ರಯ್ಯ, ತಮ್ಮಣ್ಣ, ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಕ್ರೀಡಾಪಟುಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.