ರಾಮನಗರ: ಎನ್‌ಸಿಸಿ (ನೌಕಾಪಡೆ)ಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ರಾಮನಗರದ ಯುವಕ ಮಹಿಜಿತ್ ಜಯಕುಮಾರ್ ಕೋಸ್ಟ್ ಗಾರ್ಡ್‍ಶಿಪ್‌ನಲ್ಲಿ ಸಾಗರೋತ್ತರ (ಒಎಸ್‍ಡಿ) ತರಬೇತಿಗೆ ನಿಯೋಜಿತರಾಗಿದ್ದಾರೆ. ದೇಶದ ಒಟ್ಟು 10 ಮಂದಿ ಪೈಕಿ, ಮಹಿಜಿತ್ ಅವರು ಕರ್ನಾಟಕ ಮತ್ತು ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.
ತರಬೇತಿಗಾಗಿ ಮಹಿಜಿತ್ ಅವರು ಕೀನ್ಯ, ದಕ್ಷಿಣ ಆಫ್ರಿಕಾ, ಮೊಜಾಂಬಿಕ್ ಹಾಗೂ ತಾಂಜೇನಿಯಾ ದೇಶಗಳಿಗೆ ನ. 2ರವರೆಗೆ 55 ದಿನಗಳ ಕಾಲ ಐಸಿಜಿಎಸ್ ಸಾಚೆತ್ ಎಂಬ ಹಡಗಿನಲ್ಲಿ ಪ್ರಯಾಣ ಆರಂಭಿಸಿದ್ದಾರೆ. ಮಹಿಜಿತ್ ಅವರು ಶಾಲಾ–ಕಾಲೇಜಿನಿಂದಲೂ ಎನ್‌ಸಿಸಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಅವರು, ನಗರದ ರಜಿನಿ ಮತ್ತು ಜಯಕುಮಾರ್ ದಂಪತಿ ಪುತ್ರ.
ನಗರದ ವಾಸವಿ ವಿದ್ಯಾನಿಕೇತನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಮಹಿಜಿತ್, ಪ್ರೌಢ ಶಿಕ್ಷಣವನ್ನು ಜೂನಿಯರ್ ಕಾಲೇಜಿನಲ್ಲಿ ಪೂರೈಸಿದರು. ಚನ್ನಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮುಗಿಸಿದ ಮೆಹಜಿತ್, ಸದ್ಯ ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ (ಮೈಕ್ರೊ ಬಯಾಲಜಿ) 5ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾರೆ.
ಮಹಿಜಿತ್ ಅವರನ್ನು ಭಾರತದ ರಕ್ಷಣಾ ಸಚಿವಾಲಯದಡಿ ಬರುವ ಎನ್‌ಸಿಸಿಯ ಡೈರೆಕ್ಟರೇಟ್ ಜನರಲ್ ಕಚೇರಿ ಆಯ್ಕೆ ಮಾಡಿ ಕೋಸ್ಟ್ ಗಾರ್ಡ್ (ಭಾರತದ ಸಾಗರ ಕಾಯುವ ಪಡೆ) ಪ್ರಾತ್ಯಕ್ಷಿಕೆ ಪಡೆಯಲು ನಿಯೋಜಿಸಲಾಗಿದೆ. ಇಂತಹ ಅವಕಾಶ ವರ್ಷಕ್ಕೆ ಕೇವಲ 10 ಮಂದಿಗೆ ಮಾತ್ರ ಲಭ್ಯವಾಗುತ್ತದೆ.
ಸಮುದ್ರಯಾನದ ವೇಳೆ ಭಾರತೀಯ ಕೋಸ್ಟ್‌ಗಾರ್ಡ್ ಪಡೆಗಳು ನಿರ್ವಹಿಸುವ ಕಾರ್ಯಗಳು, ಸಾಗರದ ಸವಾಲುಗಳು ಹೀಗೆ ವಿವಿಧ ವಿಷಯಗಳ ಕುರಿತು ಮಹಿಜಿತ್ ತರಬೇತಿ ಪಡೆಯಲಿದ್ದಾರೆ. ತಾವು ಭೇಟಿ ನೀಡುವ ಪ್ರತಿ ರಾಷ್ಟ್ರದಲ್ಲೂ ತಲಾ 3ರಿಂದ 5 ದಿನ ವಾಸ್ತವ್ಯ ಹೂಡುವ ಅವಕಾಶವಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.