ಬಿಡದಿ (ರಾಮನಗರ): ಪಟ್ಟಣದ ವಿವಿಧೆಡೆ ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಬಿಡದಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಒಟ್ಟು ₹7.25 ಲಕ್ಷ ಮೌಲ್ಯದ ಮಾದಕವಸ್ತುವನ್ನು ವಶಕ್ಕೆ ಪಡೆದಿದ್ದಾರೆ.
ಮನೆಯಲ್ಲಿ ಮಾರಾಟ: ಅಬ್ಬನಕುಪ್ಪೆ ಗ್ರಾಮದ ಲೇಔಟ್‌ನಲ್ಲಿರುವ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಮಾದಕವಸ್ತು ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆತನಿಂದ ಸುಮಾರು ₹2.50 ಲಕ್ಷದ ಮೌಲ್ಯದ 2 ಕೆ.ಜಿ 725 ಗ್ರಾಂ ತೂಕದ ಮಾದಕ ವಸ್ತು ಹಾಗೂ ₹300 ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.
ನಿಲ್ದಾಣದಲ್ಲಿ ಬಲೆಗೆ: ಬಿಲ್ಲಕೆಂಪನಹಳ್ಳಿ ಗೇಟ್ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಆತನನ್ನು ವಶಕ್ಕೆ ಪಡೆದು ₹2.50 ಲಕ್ಷದ ಮೌಲ್ಯದ 2 ಕೆ.ಜಿ 650 ಗ್ರಾಂ ತೂಕದ ಮಾದಕ ವಸ್ತು ಹಾಗೂ ₹500 ಮೊತ್ತ ವಶಕ್ಕೆ ಪಡೆದಿದ್ದಾರೆ. ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.
ರೈಲ್ವೆ ಗೇಟ್ ಬಳಿ ವಶಕ್ಕೆ: ಪಟ್ಟಣದ ರೈಲ್ವೆ ಗೇಟ್ ಬಳಿ ಇರುವ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಮಾದಕವಸ್ತುವೊಂದನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು, ಆತನಿಂದ ಸುಮಾರು ₹2.25 ಲಕ್ಷ ಮೌಲ್ಯದ 2 ಕೆ.ಜಿ 465 ಗ್ರಾಂ ತೂಕದ ಮಾದಕವಸ್ತು ಹಾಗೂ ₹500 ಜಪ್ತಿ ಮಾಡಿದ್ದಾರೆ. ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಕೋರ್ಟ್ ಎದುರು ಹಾಜರುಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.