
ರಾಮನಗರ: ಇಲ್ಲಿನ ರಾಮದೇವರ ಬೆಟ್ಟದಲ್ಲಿರುವ, ಅಳಿವಿನಂಚಿನ ರಣಹದ್ದು ಬಳಗಕ್ಕೆ ಹೊಸ ಅತಿಥಿ ಸೇರಿದೆ. ಉದ್ದ ಕೊಕ್ಕಿನ ರಣಹದ್ದು ಸತತ ಐದನೇ ವರ್ಷ, ಹೊಸ ಮರಿಯೊಂದಿಗೆ ಕಾಣಿಸಿಕೊಂಡಿದೆ. ಮರಿಯೊಂದಿಗೆ ಬೆಟ್ಟದ ಮೇಲೆ ರಣಹದ್ದು ಜೋಡಿ ಕುಳಿತಿರುವುದು ಪರಿಸರ ಪ್ರೇಮಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಣಹದ್ದುಗಳು ವರ್ಷಕ್ಕೊಂದೇ ಮೊಟ್ಟ ಇಡಲಿದ್ದು, ಸಾಮಾನ್ಯವಾಗಿ ನವೆಂಬರ್–ಮಾರ್ಚ್ ಅವಧಿಯಲ್ಲಿ ಮೊಟ್ಟೆ ಇಟ್ಟು, ಮರಿ ಮಾಡುತ್ತವೆ. ಮೊಟ್ಟೆಯಿಂದ ಮರಿ ಹೊರಬರಲು ಸುಮಾರು 60 ದಿನ ಬೇಕು. ಹೆಣ್ಣು ರಣಹದ್ದು ಮೊಟ್ಟೆಗೆ ಕಾವು ನೀಡುವಾಗ, ಗಂಡು ರಣಹದ್ದು ಆಹಾರ ತಂದು ಕೊಟ್ಟು ಕಾಳಜಿ ಮಾಡುತ್ತದೆ.
‘2015ರಲ್ಲಿ ಮೊದಲ ಬಾರಿಗೆ ರಣಹದ್ದು ಮೊಟ್ಟೆ ಇಟ್ಟು, ಮರಿ ಮಾಡಿದ್ದು ದಾಖಲಾಗಿತ್ತು. ನಂತರ ಪ್ರತಿ ವರ್ಷ ಮೊಟ್ಟೆ ಇಟ್ಟರೂ ಮರಿ ಹೊರಬಂದಿರಲಿಲ್ಲ. ಬಳಿಕ 2021ರಿಂದ ಸತತವಾಗಿ ಮೊಟ್ಟೆ ಇಟ್ಟು ಮರಿ ಮಾಡುತ್ತಿವೆ’ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಮೊಹಮ್ಮದ್ ಮನ್ಸೂರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ರಣಹದ್ದುಗಳ ಆವಾಸ ಸ್ಥಾನವಾದ ರಾಮದೇವರ ಬೆಟ್ಟದಲ್ಲಿ ಹದ್ದುಗಳ ಸಂತತಿ ಹೆಚ್ಚಳಕ್ಕೆ ಪೂರಕ ಕ್ರಮಗಳನ್ನು ಇಲಾಖೆ ಕೈಗೊಂಡಿದೆ. ಕಳೆದ ಐದು ವರ್ಷಗಳಿಂದ ಬೆಟ್ಟದಲ್ಲಿ ಹದ್ದುಗಳ ಬಳಗಕ್ಕೆ ಹೊಸ ಅತಿಥಿ ಸೇರುತ್ತಿದೆ. ಇದೀಗ ಜನಿಸಿರುವ ಮರಿ ದೊಡ್ಡ ರಣಹದ್ದುಗಳ ಜೊತೆ ಸುರಕ್ಷಿತವಾಗಿದೆ’ ಎಂದು ಹೇಳಿದರು.
ಆಹಾರ ಅರಸಿ ನೂರಾರು ಕಿ.ಮೀ. ಹೋಗುವ ರಣಹದ್ದು ತನ್ನ ಮೂಲ ನೆಲೆ ರಾಮದೇವರ ಬೆಟ್ಟಕ್ಕೆ ಮರಳಿ ಸಂಗಾತಿಯೊಂದಿಗೆ ಸೇರಿ ಮೊಟ್ಟೆ ಇಟ್ಟು ಮರಿಗೆ ಜನ್ಮನೀಡುತ್ತದೆ. ಕಳೆದ ಐದು ವರ್ಷಗಳಿಂದ ತಲಾ ಒಂದೊಂದು ಮರಿಗೆ ರಣಹದ್ದು ಜೋಡಿ ಜನ್ಮ ನೀಡುತ್ತಿವೆ.ರಾಮಕೃಷ್ಣಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಂಗಳೂರು ದಕ್ಷಿಣ ಜಿಲ್ಲೆ
ರಾಮದೇವರ ಬೆಟ್ಟದಲ್ಲಿ ರಣಹದ್ದು ಇತ್ತೀಚಿನ ವರ್ಷಗಳಲ್ಲಿ ಮರಿ ಮಾಡಿದರೂ ಹದ್ದುಗಳ ಸಂಖ್ಯೆ ಐದಾರು ದಾಟಿಲ್ಲ. ಈ ಕುರಿತು ಅಧ್ಯಯನ ನಡೆಸಬೇಕು. ಈ ತಾಣವನ್ನು ಮತ್ತಷ್ಟು ರಣಹದ್ದು ಸ್ನೇಹಿಯಾಗಿಸಬೇಕುಬಿ. ಶಶಿಕುಮಾರ್ ಕಾರ್ಯದರ್ಶಿ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್
ದೇಶದ ಮೊದಲ ರಣಹದ್ದು ಸಂರಕ್ಷಣಾ ಪ್ರದೇಶ
ರಾಮದೇವರ ಬೆಟ್ಟದ ಪರಿಸರದಲ್ಲಿ ಕೆಲ ದಶಕಗಳ ಹಿಂದೆ ರಣಹದ್ದುಗಳು ಹೆಚ್ಚಾಗಿದ್ದವು. ಕ್ರಮೇಣ ಅವುಗಳ ಸಂಖ್ಯೆ ಕುಸಿದು ಸಂತತಿಯೇ ಕ್ಷೀಣಿಸುವ ಮಟ್ಟಕ್ಕೆ ಬಂದಿತು. ಅಳಿವಿನಂಚಿಗೆ ತಲುಪಿದ ರಣಹದ್ದುಗಳ ಸಂರಕ್ಷಣೆಗಾಗಿ ರಾಜ್ಯ ಸರ್ಕಾರ 2012ರಲ್ಲಿ ರಾಮದೇವರ ಬೆಟ್ಟದ ವ್ಯಾಪ್ತಿಯ 346.14 ಹೆಕ್ಟೇರ್ ಪ್ರದೇಶವನ್ನು ರಣಹದ್ದು ಅಭಯಾರಣ್ಯ ಎಂದು ಘೋಷಿಸಿದೆ. ರಾಮದೇವರ ಬೆಟ್ಟವು ದೇಶದ ಮೊದಲ ರಣಹದ್ದು ಸಂರಕ್ಷಣಾ ಪ್ರದೇಶ ಎಂಬ ಕೀರ್ತಿಗೆ ಪಾತ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.