ರಾಮನಗರದ ಗೌಸಿಯಾ ಪದವಿಪೂರ್ವ ಕಾಲೇಜಿನಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಬುಧವಾರ ಹಮ್ಮಿಕೊಂಡಿದ್ದ ‘ದಿನಪತ್ರಿಕೆಗಳ ಓದಿನ ಮಹತ್ವ’ ಕುರಿತ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಪ್ರದರ್ಶಿಸಿದರು.
ರಾಮನಗರ: ‘ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗದೆ ದಿನಪತ್ರಿಕೆಗಳ ಓದಿಗೆ ಗಮನ ಕೊಡಬೇಕು. ಇದರಿಂದ ಪಠ್ಯಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನವೂ ವೃದ್ಧಿಯಾಗಲಿದೆ’ ಎಂದು ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಏಜಾಜ್ ಅಹಮದ್ ಕೆ.ಆರ್ ಸಲಹೆ ನೀಡಿದರು.
ಗೌಸಿಯಾ ಪದವಿ ಪೂರ್ವ ಕಾಲೇಜಿನಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ದಿನಪತ್ರಿಕೆಗಳ ಓದಿನ ಮಹತ್ವ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ದಿನಪತ್ರಿಕೆಗಳು ಉಹಾಪೋಹಗಳಿಗಿಂತ ಸತ್ಯ ಮತ್ತು ನಿಖರ ಮಾಹಿತಿಗೆ ಆದ್ಯತೆ ನೀಡಲಾಗುತ್ತದೆ. ಅದರಲ್ಲೂ ನಮ್ಮ ನಾಡಿನ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ವಿಶ್ವಾಸಾರ್ಹ ಸುದ್ದಿಗೆ ಹೆಸರುವಾಗಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಪ್ರಸರಣ ವಿಭಾಗದ ಡಿಜಿಎಂ ಜಗನ್ನಾಥ ಜೋಯಿಸ್ ಮಾತನಾಡಿ, ‘ಈಗಿನಿಂದಲೇ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡರೆ, ಮುಂದೆ ವಿವಿಧ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು. ದಿನಪತ್ರಿಕೆಗಳ ಓದು ಜ್ಞಾನದ ಜೊತೆಗೆ ಭಾಷೆ, ಬರವಣಿಗೆ ಶೈಲಿಯನ್ನು ಸಹ ಸುಧಾರಿಸುತ್ತದೆ’ ಎಂದರು.
‘ವಿದ್ಯಾರ್ಥಿಗಳಿಗಾಗಿ ನಮ್ಮ ಪತ್ರಿಕೆಯು ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ದಿಕ್ಸೂಚಿಯನ್ನು ಪ್ರಕಟಿಸುತ್ತದೆ. ವಿವಿಧ ಉದ್ಯೋಗಗಳ ಮಾಹಿತಿಯನ್ನು ಸಹ ನೀಡುತ್ತದೆ. ಹಾಗಾಗಿ, ಪ್ರಜಾವಾಣಿಯು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರ ನೆಚ್ಚಿನ ಸಂಗಾತಿಯಾಗಿದೆ’ ಎಂದು ತಿಳಿಸಿದರು.
ಪ್ರಸರಣ ವಿಭಾಗದ ಹಿರಿಯ ಮ್ಯಾನೇಜರ್ ಶಂಕರ ಹಿರೇಮಠ, ಸಹಾಯಕ ಮ್ಯಾನೇಜರ್ ಸಂಗಮೇಶ್, ಕಾಲೇಜಿನ ಉಪನ್ಯಾಸಕರಾದ ಈಶ್ವರ್, ನುಸ್ರತ್ ಉನ್ನಿಸಾ, ನಿಶ್ಚಿತ, ಇಂದೂ, ಹಾಜಿರಾ, ನಾಯರಾ ಯಾಸ್ಮಿನ್, ಸುಮೇಯಾ, ಹುಸ್ನಾ ಖಾನಂ, ಸಯ್ಯದ್ ಶರೀಫ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.