ADVERTISEMENT

ಕನಕಪುರ ಈಗ ಕೋವಿಡ್‌ನಿಂದ ದೂರ!

ತಾಲ್ಲೂಕಿನ ಎಲ್ಲ ಸೋಂಕಿತರೂ ಗುಣಮುಖ: ಹೊಸ ಪ್ರಕರಣಗಳ ಪತ್ತೆಯಿಲ್ಲ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 17:03 IST
Last Updated 16 ಜುಲೈ 2020, 17:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ಕೊರೊನಾ ಸೋಂಕು ಹಬ್ಬಿದ ಆರಂಭದ ದಿನಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಆತಂಕ ಮೂಡಿಸಿದ್ದ ಕನಕಪುರ ತಾಲ್ಲೂಕಿನಲ್ಲಿ ಈಗ ಎಲ್ಲ ಸೋಂಕಿತರೂ ಗುಣಮುಖರಾಗಿದ್ದಾರೆ. ಮಾತ್ರವಲ್ಲ ಈಚಿನ ದಿನಗಳಲ್ಲಿ ಹೊಸ ಪ್ರಕರಣಗಳೂ ಪತ್ತೆಯಾಗಿಲ್ಲದಿರುವುದು ಖುಷಿಯ ಸಂಗತಿಯಾಗಿದೆ.

ಕನಕಪುರದಲ್ಲಿ ಒಟ್ಟು 85 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿತ್ತು. ಈ ಎಲ್ಲರಿಗೂ ಜಿಲ್ಲೆಯ ವಿವಿಧ ಕೋವಿಡ್‌ ಆಸ್ಪತ್ರೆಗಳು ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಗುರುವಾರ ತಾಲ್ಲೂಕಿನ ಮೂವರು ಕೊರೊನಾ ಸೋಂಕಿನಿಂದ ಸುಧಾರಿಸಿಕೊಂಡು ಹೊರಬಂದಿದ್ದಾರೆ. ಈ ಮೂಲಕ ತಾಲ್ಲೂಕಿನ ಎಲ್ಲರೂ ಗುಣಮುಖರಾಗಿ ಆಸ್ಪತ್ರೆಗಳಿಂದ ಹೊರ ಬಂದಂತೆ ಆಗಿದೆ.

ಕನಕಪುರದಲ್ಲಿ ಮೊದಲು ವೃದ್ಧರೊಬ್ಬರಿಗೆ ಸೋಂಕು ತಗುಲಿತ್ತು. ಆ ಮೂಲಕ ಅಲ್ಲಿನ ಖಾಸಗಿ ಆಸ್ಪತ್ರೆಯ ವೈದ್ಯ ದಂಪತಿಗೂ ಸೋಂಕು ಹರಡಿತ್ತು. ಅವರಿಂದ ಚಿಕಿತ್ಸೆ ಪಡೆದವರು, ಆಸ್ಪತ್ರೆಯ ಸಿಬ್ಬಂದಿಯಲ್ಲೂ ನಂತರದಲ್ಲಿ ವೈರಸ್‌ ಹರಡಿರುವುದು ಖಾತ್ರಿಯಾಗಿತ್ತು. ಕ್ರಮೇಣ ಪೊಲೀಸ್‌ ಸಿಬ್ಬಂದಿಗೂ ಸೋಂಕು ವ್ಯಾಪಿಸಿತ್ತು. ಇದರಿಂದಾಗಿ ಇಡೀ ತಾಲ್ಲೂಕಿನಲ್ಲಿ ಆತಂಕ ಮನೆ ಮಾಡಿತ್ತು. ಆದರೆ ನಂತರದಲ್ಲಿ ತಾಲ್ಲೂಕು ಆಡಳಿತ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆ, ಪೊಲೀಸರ ಶ್ರಮದಿಂದಾಗಿ ಹೆಚ್ಚಿನ ಮಂದಿಗೆ ವೈರಸ್‌ ಹರಡುವುದು ತಪ್ಪಿದೆ.

ADVERTISEMENT

ಫಲ ನೀಡಿದ ಲಾಕ್‌ಡೌನ್‌: ವೈರಸ್‌ ಸಮುದಾಯಕ್ಕೆ ಹರಡುವುದನ್ನು ತಪ್ಪಿಸುವ ಸಲುವಾಗಿ ಸ್ಥಳೀಯ ಶಾಸಕ ಡಿ.ಕೆ. ಶಿವಕುಮಾರ್‌ ಹಾಗೂ ಸಂಸದ ಡಿ.ಕೆ. ನೇತೃತ್ವದಲ್ಲಿ ಸ್ಥಳೀಯ ವರ್ತಕರು ಹಾಗೂ ಸಾರ್ವಜನಿಕರ ಸಭೆಗಳನ್ನು ಆಯೋಜಿಸಲಾಗಿತ್ತು. ಒಂದಿಷ್ಟು ದಿನ ವರ್ತಕರು ಸ್ವಯಂಪ್ರೇರಿತರಾಗಿ ಲಾಕ್‌ಡೌನ್‌ ಹೇರಿಕೊಂಡಿದ್ದರು. ಜನರು ಸಹ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದರು. ಈ ಎಲ್ಲ ಪ್ರಯತ್ನಗಳ ಫಲವಾಗಿ ಇಂದು ಸೋಂಕಿನ ಪ್ರಮಾಣ ತಗ್ಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ. ಸುರೇಶ್‌, ಕನಕಪುರ ತಾಲ್ಲೂಕು ಕೋವಿಡ್ ಮುಕ್ತಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. "ಎಲ್ಲ ಸೋಂಕಿತರು ಗುಣಮುಖವಾಗಿ ಮನೆಗೆ ಮರಳಿರುವುದು ಖುಷಿ ತಂದಿದೆ. ಹಾಗೆಂದು ನಾವು ಮೈ ಮರೆಯದೇ ಇನ್ನಷ್ಟು ಎಚ್ಚರ ವಹಿಸಬೇಕು. ಹೊರಗಿನಿಂದ ಬಂದವರ ಜೊತೆಗೆ ನಾವುಗಳೂ ಎಚ್ಚರಿಕೆಯಿಂದ ಇರಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟು ಕಷ್ಟದ ಪರಿಸ್ಥಿತಿ ಬರಬಹುದು. ಎಲ್ಲದಕ್ಕೂ ನಾವು ಸಿದ್ಧರಿರಬೇಕು. ಇಡೀ ಜಿಲ್ಲೆ ಹಾಗೂ ದೇಶವೇ ಕೋವಿಡ್‌ ಮುಕ್ತವಾಗಬೇಕು’ ಎಂದು ಆಶಿಸಿದರು.

4 ಪ್ರಕರಣ ಪತ್ತೆ

ಗುರುವಾರ ಚನ್ನಪಟ್ಟಣ ತಾಲ್ಲೂಕಿನ ನಾಲ್ಕು ಮಂದಿಯಲ್ಲಿ ಕೋವಿಡ್‌ ಸೋಂಕು ಇರುವುದು ದೃಢವಾಗಿದೆ. ಉಳಿದ ತಾಲ್ಲೂಕುಗಳಲ್ಲಿ ಯಾವುದೇ ಪ್ರಕರಣಗಳು ವರದಿ ಆಗಿಲ್ಲ.

ಈ ದಿನ ಒಟ್ಟು 14 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಅವರಲ್ಲಿ ಚನ್ನಪಟ್ಟಣದ 1, ಕನಕಪುರದ 3, ಮಾಗಡಿಯ 8 ಹಾಗೂ ರಾಮನಗರದ 2 ಮಂದಿ ಸೇರಿದ್ದಾರೆ. ಹೊಸದಾಗಿ 171 ಮಾದರಿಗಳನ್ನು ಸಂಗ್ರಹಿಸಿ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇದನ್ನೂ ಒಳಗೊಂಡು ಒಟ್ಟು 1941 ಪ್ರಕರಣಗಳ ವರದಿಯು ಬಾಕಿ ಇದೆ.

ಕಂಟ್ರೋಲ್ ರೂಂ ಸ್ಥಾಪನೆ

ರಾಮನಗರ ಟೌನ್ ವ್ಯಾಪ್ತಿಯಲ್ಲಿ ಕೋವಿಡ್-19 ಕಂಟ್ರೋಲ್ ರೂಂ ಅನ್ನು ನಗರಸಭೆ ಕಚೇರಿ ಆವರಣದಲ್ಲಿನ ಮೊದಲ ಮಹಡಿಯಲ್ಲಿ ತೆರೆಯಲಾಗಿದೆ.

ಕೋವಿಡ್-19 ಸಂಬಂಧ ಯಾವುದೇ ದೂರುಗಳನ್ನು ಕಂಟ್ರೋಲ್ ರೂಂ ಸಂಖ್ಯೆ: 9606414794, ವಾಟ್ಸಪ್‌ ಸಂಖ್ಯೆ: 9606414794 ಅಥವಾ ಇ-ಮೇಲ್ covid19rnagar@gmail.com ಮುಖಾಂತರ ತಿಳಿಸಬಹುದಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.

ತಾಲ್ಲೂಕು; ಸೋಂಕಿತರು; ಬಿಡುಗಡೆ; ಸಕ್ರಿಯ ಪ್ರಕರಣಗಳು; ಸಾವು

ಚನ್ನಪಟ್ಟಣ; 78; 40; 38; 0

ಕನಕಪುರ; 85; 85; 0; 0

ಮಾಗಡಿ; 137; 77; 52; 8

ರಾಮನಗರ; 97; 62; 34; 2

ಒಟ್ಟು; 397; 264; 124; 10

***

ಕನಕಪುರ ತಾಲ್ಲೂಕಿನ ಎಲ್ಲ ಸೋಂಕಿತರು ಗುಣಮುಖವಾಗಿರುವುದು ಸಂತಸ ತಂದಿದೆ. ಜನರು ಇನ್ನಷ್ಟು ಎಚ್ಚರಿಕೆಯ ನಿಯಮಗಳನ್ನು ಪಾಲಿಸಬೇಕು

-ಡಿ.ಕೆ. ಸುರೇಶ್,ಸಂಸದ, ಬೆಂಗಳೂರು ಗ್ರಾಮಾಂತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.