ADVERTISEMENT

ಕಾರ್ಮಿಕ ಒಕ್ಕೂಟಗಳಿಂದ ಪ್ರತಿಭಟನೆಗೆ ಸಿದ್ಧತೆ

ಮುಷ್ಕರ ಕರೆ; ಜಿಲ್ಲೆಯ ಜನಸಾಮಾನ್ಯರಿಗಿಲ್ಲ ತೊಂದರೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 13:04 IST
Last Updated 7 ಜನವರಿ 2020, 13:04 IST

ರಾಮನಗರ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ಖಂಡಿಸಿ ಕೆಲವು ಸಂಘಟನೆಗಳು ಇದೇ 8ರಂದು ದೇಶ ವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಜಿಲ್ಲೆಯಲ್ಲೂ ಪ್ರತಿಭಟನಾ ಮೆರವಣಿಗೆಗಳು ನಡೆಯಲಿವೆ. ಆದರೆ ಬಂದ್‌ ಆಚರಣೆ ಇರುವುದಿಲ್ಲ.

ಜಿಲ್ಲೆಯಲ್ಲಿ ಬುಧವಾರ ಶಾಲೆ ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿರಲಿವೆ. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು, ಆಟೊಗಳ ಸೇವೆ ಎಂದಿನಂತೆ ಇರಲಿದೆ. ಸಾಮಾನ್ಯ ಜನಜೀವನಕ್ಕೆ ಯಾವುದೇ ತೊಂದರೆ ಆಗುವ ಸಾಧ್ಯತೆ ಇಲ್ಲ.

ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಖಾನೆಗಳನ್ನು ಮುಚ್ಚುವಂತೆ ಸಿಐಟಿಯು ಕೈಗಾರಿಕೆಗಳಿಗೆ ಸಂದೇಶ ರವಾನಿಸಿದೆ. ಹೀಗಾಗಿ ಕೈಗಾರಿಕಾ ಪ್ರದೇಶ ಸ್ತಬ್ಧಗೊಳ್ಳುವ ಸಾಧ್ಯತೆ ಇದೆ. ‘ಕಾರ್ಖಾನೆಗಳನ್ನು ಬಂದ್‌ ಮಾಡಿಸಲು ನಿರ್ಧರಿಸಿದ್ದೇವೆ. ಬಳಿಕ ಕಾರ್ಮಿಕ ಮುಖಂಡರು ಬಿಡದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳಲಿದ್ದೇವೆ’ ಎಂದು ಸಿಐಟಿಯು ಮುಖಂಡ ರಾಘವೇಂದ್ರ ತಿಳಿಸಿದರು.

ADVERTISEMENT

ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಕೆಲವು ಕಾರ್ಮಿಕ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿವೆ. ನಗರದ ಪೌರ ಕಾರ್ಮಿಕರು ಜಿಲ್ಲಾ ಪಂಚಾಯಿತಿ ಭವನದಿಂದ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಿದ್ದಾರೆ.

ಭಾರತೀಯ ಕಿಸಾನ್‌ ಯೂನಿಯನ್‌ ಕರೆ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘವು ಬಂದ್‌ಗೆ ಬಾಹ್ಯ ಬೆಂಬಲ ಸೂಚಿಸಿದೆ. ಆದರೆ ಸಂಘದಿಂದ ಯಾವುದೇ ಪ್ರತಿಭಟನೆಗಳು ಇರುವುದಿಲ್ಲ. ಬದಲಾಗಿ ‘ಗ್ರಾಮ ಬಂದ್’ ಅಭಿಯಾನದ ಮೂಲಕ ಬುಧವಾರ ಒಂದು ದಿನದ ಮಟ್ಟಿಗೆ ಹಳ್ಳಿಗಳಿಂದ ಏನನ್ನೂ ನಗರಕ್ಕೆ ಕೊಂಡೊಯ್ಯದಂತೆ, ಅಂತೆಯೇ ನಗರದಿಂದ ಹಳ್ಳಿಗಳಿಗೆ ಏನನ್ನೂ ಒಯ್ಯದಂತೆ ಗ್ರಾಮೀಣ ಜನರಲ್ಲಿ ಮನವಿ ಮಾಡಲಾಗುವುದು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಲಕ್ಷ್ಮಣಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.