ADVERTISEMENT

ಕುದೂರು: ಇಲ್ಲದ ಬಸ್‌; ತಪ್ಪದ ಪ್ರಯಾಣಿಕರ ಗೋಳು

ಅಧಿಕಾರಿಗಳ ಕಾರ್ಯವೈಖರಿ ಬೇಸರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2023, 1:52 IST
Last Updated 14 ಜೂನ್ 2023, 1:52 IST
ಕುದೂರು - ತುಮಕೂರು ಬಸ್ಸಿನಲ್ಲಿ ಉಂಟಾಗಿರುವ ಪ್ರಯಾಣಿಕರ ದಟ್ಟಣೆ
ಕುದೂರು - ತುಮಕೂರು ಬಸ್ಸಿನಲ್ಲಿ ಉಂಟಾಗಿರುವ ಪ್ರಯಾಣಿಕರ ದಟ್ಟಣೆ   

– ವಿವೇಕ್‌ ಕುದೂರು

ಕುದೂರು: ರಾಮನಗರ ಜಿಲ್ಲಾ ಕೇಂದ್ರವಾಗಿ 16 ವರ್ಷವಾದರೂ ಮಾಗಡಿಯಲ್ಲಿ ಕೆಎಸ್‌ಆರ್‌ಟಿಸಿ ಡಿಪೊ ಇದ್ದರೂ ಕುದೂರು, ಸೋಲೂರು ಹಾಗೂ ತಿಪ್ಪಸಂದ್ರ ಹೋಬಳಿಗಳಿಂದ ಜಿಲ್ಲಾ ಕೇಂದ್ರಕ್ಕೆ ನೇರ ಬಸ್‌ ಸಂಪರ್ಕ ಇಲ್ಲ.

ಜಿಲ್ಲಾ ಕೇಂದ್ರ ರಾಮನಗರಕ್ಕೆ ಹೋಗಬೇಕಾದರೆ ತಾಲ್ಲೂಕು ಕೇಂದ್ರ ಮಾಗಡಿಗೆ ಹೋಗಿ ಅಲ್ಲಿಂದ ಮತ್ತೊಂದು ಬಸ್‌ ಬದಲಿಸಬೇಕು. ತಾಲ್ಲೂಕಿನ ಮೂರು ಹೋಬಳಿ ಜನರು ರಾಮನಗರ ಬಸ್‌ ಕಾಣದೆ ಅಕ್ಷರಶಃ ದ್ವೀಪ ಜೀವಿಗಳಂತೆ ಬದುಕು ಸವೆಸುವಂತಾಗಿದೆ ಎಂದು ಕುದೂರು, ತಿಪ್ಪಸಂದ್ರ ಮತ್ತು ಸೋಲೂರು ಹೋಬಳಿ ಜನರು ತಾಲ್ಲೂಕು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.

ADVERTISEMENT

ಡಿಪೊ ಆದ ನಂತರ ಸಮಸ್ಯೆ ಹೆಚ್ಚಳ: ಮಾಗಡಿಯಲ್ಲಿ ಕೆಎಸ್‌ಆರ್‌ಟಿಸಿ ಡಿಪೊ ಆಗುವ ಮುನ್ನ ಕುದೂರು ಪಟ್ಟಣದಿಂದ ಬೆಂಗಳೂರಿಗೆ ಹತ್ತು ಸರ್ಕಾರಿ ಬಸ್‌ಗಳು ಓಡಾಡುತ್ತಿದ್ದವು. ಆದರೆ, ಈಗ ಕೇವಲ ಮೂರು ಬಸ್‌ಗಳು ಮಾತ್ರ ಓಡಾಡುತ್ತಿವೆ. ಜನರು ಬೆಂಗಳೂರಿಗೆ ಪ್ರಯಾಣ ಮಾಡಬೇಕಾದರೆ ಸೋಲೂರು ಗ್ರಾಮದ ಹೆದ್ದಾರಿಗೆ ಹೋಗಿ ಅಲ್ಲಿಂದ ಬೇರೆ ಬಸ್‌ ಹಿಡಿದು ಪ್ರಯಾಣ ಮಾಡಬೇಕಾದ ಸ್ಥಿತಿ.

ಸೋಮವಾರದ ದಿನವಂತೂ ಸೋಲೂರು ಗ್ರಾಮದಲ್ಲಿ ಕುದೂರು ಭಾಗದಿಂದ ಬೆಂಗಳೂರು ನಗರಕ್ಕೆ ತೆರಳುವ ಪ್ರಯಾಣಿಕರು, ವಿದ್ಯಾರ್ಥಿಗಳ ಪಾಡಂತೂ ಹೇಳತೀರದು. ಮಾಗಡಿ ಡಿಪೊ ಆದ ನಂತರ ಈ ಮೂರು ಹೋಬಳಿಗಳ ಸಣ್ಣಪುಟ್ಟ ಗ್ರಾಮಗಳಿಗೂ ಬಸ್‌ ಸೌಲಭ್ಯ ಸಿಗುತ್ತದೆ. ಈ ಮೂಲಕ ಜನರಿಗೆ ಅನುಕೂಲವಾಗುತ್ತದೆ ಎಂದು ಭಾವಿಸಿದ್ದರು. ಆದರೆ, ಇದಕ್ಕೆ ವ್ಯತರಿಕ್ತ ಪರಿಸ್ಥಿತಿ ಇದೆ.

ಜಿಲ್ಲೆಗೆ ಹೊಂದಿಕೊಂಡಿರುವ ತುಮಕೂರು ಜಿಲ್ಲಾ ಕೇಂದ್ರಕ್ಕೆ ಮಾಗಡಿ ತಾಲ್ಲೂಕು ಕೇಂದ್ರದಿಂದ ಕೆಎಸ್‌ಆರ್‌ಟಿ ಬಸ್‌ಗಳ ಅನುಕೂಲ ಇಲ್ಲದಿರುವುದು ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಬಸ್ ಪಾಸ್ ಹೊಂದಿದ್ದರೂ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವುದು ನಮಗೆ ತಪ್ಪಲಿಲ್ಲ.
– ಲಿಖಿತ್, ಕಾಲೇಜು ವಿದ್ಯಾರ್ಥಿ ಹೊನ್ನಾಪುರ

ವಿದ್ಯಾರ್ಥಿಗಳ ಪರದಾಟ: ಸಮಯಕ್ಕೆ ಸರಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಇಲ್ಲದ ಕಾರಣ ಶಾಲಾ - ಕಾಲೇಜು ವಿದ್ಯಾರ್ಥಿಗಳ ಪರದಾಟ ತಪ್ಪಿಲ್ಲ. ಬಸ್‌ಗಳ ಬಾಗಿಲಲ್ಲಿ ಜೋತು ಬಿದ್ದು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ವಿದ್ಯಾರ್ಥಿಗಳ ಪ್ರಾಣದ ಜತೆ ಸಾರಿಗೆ ಇಲಾಖೆ ಆಟ ಆಡುತ್ತಿದೆ. ಈ ಬಗ್ಗೆ ಕಳೆದ ಕೆಲ ತಿಂಗಳ ಹಿಂದಷ್ಟೇ ಕುದೂರು ಪಟ್ಟಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈಗಿನ ಶಾಸಕ ಬಾಲಕೃಷ್ಣ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಮಾಗಡಿಗೆ ಕರೆಸಿ ಸಮಸ್ಯೆ ಬಗೆಹರಿಸಿದ್ದರು. ನಂತರ ಬಸ್‌ ಏಕಾಏಕಿ ನಿಲ್ಲಿಸಲಾಗಿತ್ತು. ಈಗ ಮೂರು ಬಸ್‌ಗಳಲ್ಲಿ ಹತ್ತಿಸಿಕೊಳ್ಳಬಹುದಾದ ವಿದ್ಯಾರ್ಥಿಗಳನ್ನು ಒಂದೇ ಒಂದು ಬಸ್‌ನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾರೆ.

ಕುದೂರು - ಬೆಂಗಳೂರು ಮಾರ್ಗದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲು ಸಾರಿಗೆ ಅಧಿಕಾರಿಗಳು ಮುಂದಾಗಬೇಕು.
– ಮಂಜುನಾಥ್, ಶಿಕ್ಷಕರು ಕುದೂರು
ತಾಲ್ಲೂಕು ಕೇಂದ್ರಕ್ಕೆ ಬಸ್ ವ್ಯವಸ್ಥೆಗೆ ಪಟ್ಟು
ಕುದೂರು ಸುತ್ತಮುತ್ತಲಿನ ಹಳ್ಳಿಗಳಿಂದ ಮಾಗಡಿಗೆ ಪ್ರತಿನಿತ್ಯ ನೂರಾರು ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಹಾಗಿದ್ದರೂ ಮಾಗಡಿ - ಗುಡೇಮಾರನಹಳ್ಳಿ - ಸೋಲೂರು, ಕುದೂರು ಮೂಲಕ ತುಮಕೂರು ನಗರಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಅನೇಕ ಬಾರಿ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆ ಈ ಭಾಗದಲ್ಲಿ ಯಶಸ್ವಿಯಾಗಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಹೆಸರೇಳಲು ಇಚ್ಛಿಸದ ಅಧಿಕಾರಿಯೊಬ್ಬರ ಅಭಿಪ್ರಾಯ.
ಕುದೂರು - ತುಮಕೂರು ಬಸ್‌ನಲ್ಲಿ ಉಂಟಾಗಿರುವ ಪ್ರಯಾಣಿಕರ ದಟ್ಟಣೆ

ಈ ಬಗ್ಗೆ ಮಾಗಡಿ ಡಿಪೊ ಮ್ಯಾನೇಜರ್ ಅವರನ್ನು ಮಾತನಾಡಿಸಲು ’ಪ್ರಜಾವಾಣಿ’ ಮುಂದಾದಾಗ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಸೋಲೂರಿನಲ್ಲಿ ಬಸ್ ಹತ್ತಲು ಪ್ರಯಾಣಿಕರ ಪರದಾಟ
ಸರ್ಕಾರಿ ಬಸ್ ಸರಿಯಾದ ಸಮಯ ಪಾಲನೆ ಮಾಡುತ್ತಿಲ್ಲ. ಹೀಗಾಗಿ ನಮಗೆ ಕಾಲೇಜಿನಲ್ಲಿ ಎರಡು ಪಾಠದ ಅವಧಿ ಮಿಸ್ ಆಗುತ್ತಿದೆ.
– ಸಹನಾ, ಕಾಲೇಜು ವಿದ್ಯಾರ್ಥಿನಿ ಹುಲಿಕಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.