ADVERTISEMENT

ಗ್ರಾಮೀಣ ಜನರಿಗೆ ಇದ್ದಲ್ಲಿಯೇ ಉದ್ಯೋಗ: ದುಡಿಯೋಣ ಬಾ ಅಭಿಯಾನ

ನಗರ ಪ್ರದೇಶಗಳಿಗೆ ವಲಸೆ ತಡೆಯಲು ‘ದುಡಿಯೋಣ ಬಾ’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 19:30 IST
Last Updated 18 ಮಾರ್ಚ್ 2021, 19:30 IST
ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಪಾಲ್ಗೊಂಡ ನರೇಗಾ ಕಾರ್ಮಿಕರು (ಸಂಗ್ರಹ ಚಿತ್ರ)
ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಪಾಲ್ಗೊಂಡ ನರೇಗಾ ಕಾರ್ಮಿಕರು (ಸಂಗ್ರಹ ಚಿತ್ರ)   

ರಾಮನಗರ: ಗ್ರಾಮೀಣ ಜನರು ಬೇಸಿಗೆಯಲ್ಲಿ ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಸರ್ಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಯೋಜನೆಯಡಿ ‘ದುಡಿಯೋಣ ಬಾ’ ಅಭಿಯಾನ ಆರಂಭಿಸಿದೆ. ಜಿಲ್ಲೆಯಲ್ಲಿ ಇದೇ 15 ರಿಂದ ಜೂನ್ 15 ರವರೆಗೆ ಈ ಅಭಿಯಾನ ನಡೆಯುತ್ತಿದ್ದು, ಜನರಿಗೆ ತಾವಿರುವಲ್ಲಿಯೇ 60 ದಿನಗಳ ಉದ್ಯೋಗ ದೊರೆಯಲಿದೆ.

ಜನರು ಬೇಸಿಗೆ ಅವಧಿಯಲ್ಲಿ 60 ದಿನಗಳ ಕೆಲಸ ಮಾಡಿದರೆ ಅವರಿಗೆ ₨17,340 ಕೂಲಿ ಸಿಗಲಿದೆ. ಇದನ್ನು ಅವರು ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಾದ ಬೀಜ, ರಸಗೊಬ್ಬರ, ಮಕ್ಕಳನ್ನು ಶಾಲೆ/ಕಾಲೇಜಿಗೆ ದಾಖಲಿಸಲು ಶುಲ್ಕ ಪಾವತಿಸಬಹುದು. ಇದಲ್ಲದೇ ಇನ್ನಿತರೆ ಜೀವನದ ವೆಚ್ಚಗಳಿಗೆ ಬಳಸಿಕೊಳ್ಳಬಹುದು. ಬೇರೆ ಸ್ಥಳಗಳಿಗೆ ಹೋಗಿ ಕೆಲಸ ಹುಡುಕುವ ಬದಲು ಸ್ಥಳೀಯವಾಗಿ ವಾಸಿಸುವ ಸ್ಥಳದಲ್ಲೇ ಕೆಲಸ ಪಡೆದು ಉತ್ತಮವಾಗಿ ಜೀವನ ನಡೆಸಬಹುದು ಎನ್ನುತ್ತಾರೆ ನರೇಗಾ ಯೋಜನೆ ಅಧಿಕಾರಿಗಳು.

ಕಾರ್ಯವಿಧಾನ: ಇದೇ 22 ರವರೆಗೆ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಜನ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಈ ವೇಳೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು, ಯುವ ಸಂಘಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಉದ್ಯೋಗ ಚೀಟಿ ಇಲ್ಲದೆ ಇರುವ ಕುಟುಂಬಗಳಿಂದ ಉದ್ಯೋಗ ಚೀಟಿಗಾಗಿ ಅರ್ಜಿ ಸ್ವೀಕರಿಸಲಿದ್ದಾರೆ. ಉದ್ಯೋಗ ಚೀಟಿ ಇರುವ ನೋಂದಾಯಿತ ಕೂಲಿಕಾರರಿಂದ 3 ತಿಂಗಳ ಕೆಲಸದ ಬೇಡಿಕೆಯನ್ನು ಸ್ವೀಕರಿಸಲಿದ್ದಾರೆ.

ADVERTISEMENT

23 ರಿಂದ 31 ರವರೆಗೆ ಉದ್ಯೋಗ ಚೀಟಿಗೆ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸಲಾಗುವುದು. ಕೆಲಸದ ಬೇಡಿಕೆ ಸಲ್ಲಿಸುವ ಕೂಲಿಕಾರರಿಗೆ ಕೆಲಸ ಒದಗಿಸಲು ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಕೆ, ತಾಂತ್ರಿಕ ಹಾಗೂ ಆಡಳಿತಾತ್ಮಕ ಮಂಜೂರಾತಿ ಮತ್ತು ಕಾಮಗಾರಿ ಪ್ರಾರಂಭಕ್ಕೆ ಬೇಕಿರುವ ಪೂರ್ವಸಿದ್ಧತೆ ಮಡಿಕೊಳ್ಳಲಾಗುವುದು.

ಏಪ್ರಿಲ್ 1 ರಿಂದ ಜೂನ್ 15 ರವರೆಗೆ ಕೆಲಸದ ಬೇಡಿಕೆ ಪಟ್ಟಿ ತೆರೆದು ಕೆಲಸಕ್ಕೆ ಬೇಡಿಕೆ ಸಲ್ಲಿಸಿದ ಕೂಲಿಕಾರರ ವಿವರಗಳನ್ನು ದಾಖಲಿಸಿ 2 ದಿನದೊಳಗಾಗಿ ಕೆಲಸ ಒದಗಿಸಲಾಗುವುದು. ಬದು ನಿರ್ಮಾಣ, ಸೋಕ್ ಪಿಟ್, ಸಮಗ್ರ ಕೆರೆ ಅಭಿವೃದ್ಧಿ, ರಸ್ತೆ ಬದಿ ನೆಡತೋಪು, ಬ್ಲಾಕ್ ಪ್ಲಾಂಟೇಶನ್, ಕೃಷಿ ಅರಣ್ಯೀಕರಣ, ರೈತರ ಜಮೀನುಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಮುಂಗಡ ಗುಂಡಿ ತೆಗೆಯುವ ಕಾಮಗಾರಿ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಹಮ್ಮಿಕೊಳ್ಳಬಹುದು.

ಸಮಿತಿ ರಚನೆ: ಅಭಿಯಾನದ ಉಸ್ತುವಾರಿಗಾಗಿ ಜಿಲ್ಲೆಯಲ್ಲಿ 3 ಹಂತದಲ್ಲಿ ಸಮಿತಿ ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳ ತಂಡ, ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳ ತಂಡ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಲಿದೆ.

“ಮನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸಲು ಜಿಲ್ಲಾ ಪಂಚಾಯಿತಿ ಬದ್ಧವಾಗಿದೆ. ಜನರು ಉದ್ಯೋಗ ಕಾರ್ಡ್ ಪಡೆದು ಬೇಡಿಕೆ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬೇಕು. ಪ್ರತಿ ದಿನ ಕೆಲಸ ಮಾಡಿದರೆ 289 ಕೂಲಿ ಸಿಗಲಿದೆ. ಬೇಸಿಗೆ ಸಮಯದಲ್ಲಿ ಗ್ರಾಮೀಣ ಜನರು ಬೇರೆ ಸ್ಥಳಗಳಿಗೆ ವಲಸೆ ಹೋಗಿ ಉದ್ಯೋಗ ಹುಡುಕುವ ಬದಲು ದುಡಿಯೋಣ ಬಾ ಅಭಿಯಾನದಲ್ಲಿ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಿ ಬೇಸಿಗೆ ಕಾಲದಲ್ಲಿ 60 ದಿನಗಳ ಕೆಲಸವನ್ನು ಸ್ಥಳೀಯವಾಗಿ ಪಡೆದುಕೊಳ್ಳಬಹುದು’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ.

ಬೇಸಿಗೆಯಲ್ಲಿ ಜನರಿಗೆ 60 ದಿನ ಕಾಲ ತಾವಿದ್ದಲ್ಲೇ ಉದ್ಯೋಗದ ಖಾತ್ರಿ ನೀಡಲಾಗುವುದು. ಜನರು ಇದನ್ನು ಬಳಸಿಕೊಂಡು ಹಳ್ಳಿಗಳಲ್ಲಿಯೇ ಉತ್ತಮ ಬದುಕು ಕಟ್ಟಿಕೊಳ್ಳಬಹುದು.
ಇಕ್ರಂ, ಜಿ.ಪಂ. ಸಿಇಒ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.