ರಾಮನಗರ: ನಗರದ ಎಂ.ಜಿ. ರಸ್ತೆಯ ಶ್ರೀ ಕನ್ನಿಕಾ ಮಹಲ್‍ನಲ್ಲಿ ವಾಸವಿ ವಿದ್ಯಾನಿಕೇತನ ಟ್ರಸ್ಟ್ ವತಿಯಿಂದ ಮಂಗಳವಾರ ಹಳೆ ನಾಣ್ಯಗಳು ಹಾಗೂ ನೋಟುಗಳ ಪ್ರದರ್ಶನ ಜರುಗಿತು. ವಿವಿಧ ರಾಜ ಮನೆತನಗಳು, ಬ್ರಿಟಿಷರ ಕಾಲದಲ್ಲಿ ಬಳಸುತ್ತಿದ್ದ ನಾಣ್ಯಗಳು ಮತ್ತು ನೋಟಗಳು ಜೊತೆಗೆ ವಿವಿಧ ದೇಶಗಳ ಕರೆನ್ಸಿಗಳು ಚರಿತ್ರೆಯ ಅವಲೋಕನಕ್ಕೆ ಕೊಂಡೊಯ್ದವು.
ಭಾರತೀಯ ರಿಸರ್ವ್ ಬ್ಯಾಂಕಿನ ನಿವೃತ್ತ ಅಧಿಕಾರಿ ಅಶೋಕ್ ಟಿ.ಎನ್,ಕನ್ನಡ ನಾಣ್ಯ ಸಂಘದ ಉಪಾಧ್ಯಕ್ಷ ಪಿ. ಸುಬ್ರಹ್ಮಣ್ಯಂ ಶೆಟ್ಟಿ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕಿನ ನಿವೃತ್ತ ಅಧಿಕಾರಿ ಎಂ.ಎನ್. ಮುರಳಿಕೃಷ್ಣ ಅವರು ಸ್ವಾತಂತ್ರ್ಯ ಪೂರ್ವದಿಂದಿಡಿದು ಪ್ರಸ್ತುತ ಚಲಾವಣೆಯಲ್ಲಿರುವ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಟ್ಟಿದ್ದರು.
ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಇಂತಹದ್ದೊಂದು ಅಪೂರ್ವ ಪ್ರದರ್ಶನವನ್ನು ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು, ಸಂಘ–ಸಂಸ್ಥೆಗಳ ಸದಸ್ಯರು, ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರು ವೀಕ್ಷಿಸಿ ಚಕಿತಗೊಂಡರು. ಮೈಸೂರು ರಾಜ್ಯದ ಚಿಕ್ಕದೇವರಾಯ ಒಡೆಯರ್ ಕಾಲಾವಧಿಯಲ್ಲಿ ಚಲಾವಣೆಯಲ್ಲಿದ್ದ ಕನ್ನಡ ಅಂಕಿಯ ನಾಣ್ಯಗಳು ಗಮನ ಸೆಳೆದವು.
ನಾಣ್ಯ ಮತ್ತು ನೋಟುಗಳ ಜೊತೆಗೆ ವಿಮಾನ ಟಿಕೆಟ್‍ಗಳು, ರೈಲು ಟಿಕೆಟ್‍ಗಳು, ಪಂಚ್ ಮಾಡಿ ಕೊಡುತ್ತಿದ್ದ ರೈಲು ಟಿಕೆಟ್‍ಗಳು, ಮುಚ್ಚಿ ಹೋದ ಬ್ಯಾಂಕುಗಳ ಚೆಕ್ ಲೀಫ್‍ಗಳು ಸಹ ಪ್ರದರ್ಶನದಲ್ಲಿದ್ದವು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಜನ್ಮದಿನಾಂಕವಿರುವ ನೋಟುಗಳು, ಮೈಸೂರು, ಬೆಂಗಳೂರು ನಗರಗಳ ಪಿನ್ ಕೋಡ್ ಸಂಖ್ಯೆಯುಳ್ಳ ನೋಟುಗಳು ನೋಡುಗರನ್ನು ಮೋಡಿ ಮಾಡಿದವು.
ಪ್ರದರ್ಶನ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ‘ಇಲ್ಲಿರುವ ನಾಣ್ಯ ಮತ್ತು ನೋಟುಗಳು ಆಯಾ ಕಾಲಘಟ್ಟದ ಚರಿತ್ರೆಯನ್ನು ಹೇಳುತ್ತವೆ. ಇವುಗಳನ್ನು ಸಂಗ್ರಹಿಸಿದವರ ಕಾರ್ಯ ನಿಜಕ್ಕೂ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಣ್ಯ ಸಂಗ್ರಹಕಾರರನ್ನು ಸನ್ಮಾನಿಸಲಾಯಿತು. ನಗರಸಭೆ ಸದಸ್ಯರಾದ ಸೋಮಶೇಖರ್, ಮಹಾಲಕ್ಷ್ಮಿ, ಮಂಜುಳಾ, ವಾಸವಿ ವಿದ್ಯಾನಿಕೇತನ ಟ್ರಸ್ಟ್, ಆರ್ಯ ವೈಶ್ಯ ಸಭಾ, ವಾಸವಿ ಯೂತ್ಸ್ ಫೋರಂ, ವಾಸವಿ ವನಿತಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರದರ್ಶನ ಆಯೋಜನೆಗೆ ಕೈ ಜೋಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.