ADVERTISEMENT

ಲಾಠಿ ಬೀಸುವ ಅಧಿಕಾರ ಪೊಲೀಸರಿಗಿಲ್ಲ!

ಲಾಕ್‌ಡೌನ್‌ ಅವಧಿಯ ‘ದೌರ್ಜನ್ಯ’; ವಕೀಲ ಸಮುದಾಯದ ವಿರೋಧ

​ಪ್ರಜಾವಾಣಿ ವಾರ್ತೆ
Published 12 ಮೇ 2021, 4:22 IST
Last Updated 12 ಮೇ 2021, 4:22 IST
ಆರ್‌.ವಿ. ದೇವರಾಜು
ಆರ್‌.ವಿ. ದೇವರಾಜು   

ರಾಮನಗರ: ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದವರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. ನಿಯಮಪಾಲನೆ ಹೆಸರಿನಲ್ಲಿ ಪೊಲೀಸರು ಕಾನೂನು ಕೈಗೆ ತೆಗೆದುಕೊಂಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕರದ್ದು.

ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರ ಮೇಲೆ ಲಾಠಿ ಬೀಸಲು ಪೊಲೀಸರಿಗೆ ಅಧಿಕಾರ ಇದೆಯೇ? ಕಾನೂನು ಅದಕ್ಕೆ ಅವಕಾಶ ನೀಡುತ್ತದೆಯೇ ಎಂಬ ಪ್ರಶ್ನೆ ಹಲವರದ್ದು. ‘ಖಂಡಿತ ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲವೇ ಇಲ್ಲ. ಹಾಗೊಂದು ವೇಳೆ ಲಾಠಿ ಪ್ರಹಾರ ಮಾಡಬೇಕಾದರೆ ಅದಕ್ಕೆ ಪೂರ್ವಾನುಮತಿ ಬೇಕೇ ಬೇಕು’ ಎನ್ನುತ್ತಾರೆ ಜಿಲ್ಲೆಯ ವಕೀಲರು ಮತ್ತು ಕಾನೂನು ತಜ್ಞರು.

ಸೋಮವಾರ ರಾಜ್ಯದಾದ್ಯಂತ ‘ಪೊಲೀಸ್ ದೌರ್ಜನ್ಯ’ ಹೆಚ್ಚಿದ್ದ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ಕುರಿತು ‘ಪ್ರಜಾವಾಣಿ’ ಜಿಲ್ಲೆಯ ಹಲವು ಹಿರಿಯ ವಕೀಲರನ್ನು ಮಾತನಾಡಿಸಿತು. ಅವರೆಲ್ಲರದ್ದೂ ಒಂದೇ ಅಭಿಪ್ರಾಯ. ‘ಪೊಲೀಸರದ್ದು ನಿಜಕ್ಕೂ ಮಿತಿ ಮೀರಿದ ವರ್ತನೆ. ಕಾನೂನಾತ್ಮಕವಾಗಿ ಅದನ್ನು ಸಮರ್ಥಿಸಿಕೊಳ್ಳಲು ಖಂಡಿತ ಆಗದು’.

ADVERTISEMENT

‘ಕೆಲವು ಕ್ಲಿಷ್ಟಕರ ಸಂದರ್ಭಗಳಲ್ಲಿ ಮಾತ್ರ ಪೊಲೀಸರು ಬಲ ಪ್ರಯೋಗ ಮಾಡಲು ಕಾನೂನು ಅವಕಾಶ ನೀಡಿದೆ. ಐಪಿಸಿ ನಿಯಮಗಳ ಅಡಿ ಜಿಲ್ಲಾ ದಂಡಾಧಿಕಾರಿ (ಜಿಲ್ಲಾಧಿಕಾರಿ) ಅಥವಾ ತಾಲ್ಲೂಕು ದಂಡಾಧಿಕಾರಿ (ತಹಶೀಲ್ದಾರ್‌) ಮಾತ್ರವೇ ಇದಕ್ಕೆ ಅನುಮತಿ ನೀಡಲು ಸಾಧ್ಯ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಹ ಅಂತಹ ಆದೇಶ ನೀಡಲು ಅವಕಾಶ ಇಲ್ಲ’ ಎನ್ನುತ್ತಾರೆ ರಾಮನಗರ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಆರ್‌.ವಿ. ದೇವರಾಜು.

ಗುಂಪುಗಾರಿಕೆ, ಸಮಾಜದ ಶಾಂತಿಗೆ ಭಂಗ, ನಿಷೇಧಾಜ್ಞೆ ಉಲ್ಲಂಘನೆ ಮೊದಲಾದ ಸಂದರ್ಭದಲ್ಲಿ ಬಲ ಪ್ರಯೋಗಕ್ಕೆ ಅವಕಾಶ ಇದೆ. ಅದನ್ನು ಹೊರತುಪಡಿಸಿ ಎಲ್ಲ ಸಂದರ್ಭಗಳಲ್ಲೂ ಪೊಲೀಸರು ಲಾಠಿ ಹಿಡಿಯಬಾರದು. ಇದರಿಂದ ಸಮಾಜದಲ್ಲಿ ಪೊಲೀಸರ ಬಗೆಗಿನ ಗೌರವ ಕಡಿಮೆ ಆಗಿ, ಅಸಹನೆ ಜಾಸ್ತಿಯಾಗುವ ಸಾಧ್ಯತೆ ಹೆಚ್ಚು ಎಂಬುದು ವಕೀಲರ ಸಲಹೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.