ADVERTISEMENT

ಅರಣ್ಯದಲ್ಲಿ ಅಹೋರಾತ್ರಿ ಪ್ರತಿಭಟನೆ

93ಮಂದಿಯಿಂದ ಅರ್ಜಿಯನ್ನು ಪಡೆದಿದ್ದು ಇಲ್ಲಿವರೆಗೂ ಭೂಮಿ ಕೊಟ್ಟಿಲ್ಲ: ಆರೋ‍ಪ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 14:57 IST
Last Updated 19 ಡಿಸೆಂಬರ್ 2019, 14:57 IST
ಬುಡಗಯ್ಯನದೊಡ್ಡಿ ಆದಿವಾಸಿ ಇರುಳಿಗ ಜನಾಂಗದವರು ಅರಣ್ಯದಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿರುವುದು
ಬುಡಗಯ್ಯನದೊಡ್ಡಿ ಆದಿವಾಸಿ ಇರುಳಿಗ ಜನಾಂಗದವರು ಅರಣ್ಯದಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿರುವುದು   

ಮರಳವಾಡಿ (ಕನಕಪುರ): ಅರಣ್ಯದಲ್ಲಿ ಅರಣ್ಯವಾಸಿಗಳು ವಾಸವಿದ್ದ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರ‍ಕ್ಕೆ ವರದಿ ನೀಡಲು ಪರಿಶೀಲನೆ ಮಾಡುತ್ತಿದ್ದ ಅಧಿಕಾರಿಗಳನ್ನು ಆದಿವಾಸಿ ಇರುಳಿಗ ಸಮುದಾಯದವರು ತಡೆದು, ಜಿಲ್ಲಾ ಉಪ ವಿಭಾಗಾಧಿಕಾರಿಯೇ ಬರಬೇಕೆಂದು ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಿದರು.

ಮರಳವಾಡಿ ಹೋಬಳಿ ಬುಡಗಯ್ಯನದೊಡ್ಡಿ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಗುರುವಾರ ರಾತ್ರಿ ಪ್ರತಿಭಟನೆ ನಡೆದಿದೆ.

ಇಲ್ಲಿನ ಮರಳವಾಡಿ ಹೋಬಳಿ ಬುಡಗಯ್ಯನದೊಡ್ಡಿ ಗ್ರಾಮ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಅರಣ್ಯ ಭೂಮಿಯಲ್ಲಿ ನಾವು ಈ ಹಿಂದೆ ಇಲ್ಲಿಯೇ ಅರಣ್ಯವಾಸಿಗಳಾಗಿ ವಾಸವಿದ್ದೆವು. ನಮ್ಮನ್ನು ಬಲವಂತವಾಗಿ ಇಲ್ಲಿಂದ ಒಕ್ಕಲೆಬ್ಬಿಸಲಾಯಿತು. ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆಯಡಿ ನಮಗೆ ಭೂಮಿ ಕೊಡುವುದಾಗಿ 93ಮಂದಿಯಿಂದ ಅರ್ಜಿಯನ್ನು ಪಡೆದಿದ್ದು ಇಲ್ಲಿವರೆಗೂ ಭೂಮಿ ಕೊಟ್ಟಿಲ್ಲ ಎಂದು ಆದಿವಾಸಿ ಕೃಷ್ಣಮೂರ್ತಿ ಆರೋಪಿಸಿದರು.

ADVERTISEMENT

2017ರಲ್ಲಿ ಇಲ್ಲಿನ ಕುರುಹುಗಳನ್ನು ಆಧರಿಸಿ ಸಮೀಕ್ಷೆ ಮಾಡಲಾಯಿತು. ಆದರೆ ಮತ್ತೆ ಪರಿಶೀಲನೆ ಮಾಡುವುದಾಗಿ ಹೇಳುತ್ತಲೇ ಜಿಲ್ಲಾಡಳಿತ ವಂಚಿಸುತ್ತಲೇ ಬಂದಿದೆ. ಈಗಲೂ ಸುಪ್ರೀಂ ಕೋರ್ಟ್‌ ಆದೇಶ ಮತ್ತು ಅರಣ್ಯ ಹಕ್ಕುಕಾಯ್ದೆಯಡಿ ಭೂಮಿಯನ್ನು ನೀಡುವುದಾಗಿ ಮತ್ತೆ ಸರ್ವೇ ಕಾರ್ಯ ಮಾಡುವುದಾಗಿ ಅಧಿಕಾರಿಗಳು ಹೇಳಿ ಇಂದು ಬಂದಿದ್ದರು. ಆದರೆ ಈ ಹಿಂದೆ ಮಾಡಿದ್ದ ಸರ್ವೇ ದಾಖಲಾತಿಗಳನ್ನು ತರದೆ ಪರಿಶೀಲನೆ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.

‘ನಮಗೆ ಜಾಗ ಕೊಡುವುದಾಗಿ ಹೇಳುವ ಸರ್ಕಾರ ನಮ್ಮನ್ನು ಸತಾಯಿಸದೆ ಭೂಮಿ ಕೊಡಬೇಕು. ಇಲ್ಲವಾದಲ್ಲಿ ಭೂಮಿ ಕೊಡುವುದಿಲ್ಲವೆಂದು ಹೇಳಬೇಕು. ಸುಮ್ಮನೆ ಪ್ರತಿ ಬಾರಿಯೂ ಹೊಸದಾಗಿ ಪರಿಶೀಲನೆ ಮಾಡುವುದಾಗಿ ಹೇಳಿ ನಮ್ಮನ್ನು ವಂಚಿಸುತ್ತಿದ್ದಾರೆ. ನಮಗೆ ಯಾವುದೇ ಪರಿಶೀಲನೆ ಬೇಕಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆಯಡಿ ನಮ್ಮ 93 ಅರ್ಜಿದಾರರಿಗೂ ಭೂಮಿ ಕೊಡಬೇಕು’ ಎಂದು ಆಗ್ರಹಿಸಿದರು.

2017ರಲ್ಲಿ ಇದೇ ರೀತಿ ನಮ್ಮ ಹಕ್ಕುಗಳಿಗಾಗಿ, ನಮ್ಮ ನಮಗೆ ಕೊಡುವಂತೆ ಒತ್ತಾಯಿಸಿ ಆಹೋರಾತ್ರಿ ಪ್ರತಿಭಟನೆಯನ್ನು ನಡೆಸಲಾಗಿತ್ತು. ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ನಮ್ಮ ಹೋರಾಟಕ್ಕೆ ಸ್ಪಂಧಿಸಿ ನಾವು ವಾಸವಿದ್ದ ಭೂಮಿಯಲ್ಲಿನ ಕುರುಹುಗಳನ್ನು ಆದರಿಸಿ ಸರ್ವೇ ಮಾಡಿಸಿ ಶೀಘ್ರವೇ ಭೂಮಿ ನೀಡಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.