ADVERTISEMENT

ಮಾಗಡಿ: ಶಾಲಾ ಗೋಡೆ ಮೇಲೆ ಚಿತ್ತಾರ

ದೊಡ್ಡಬಾಣಗೆರೆ ಮಾರಣ್ಣ
Published 1 ಮಾರ್ಚ್ 2024, 6:08 IST
Last Updated 1 ಮಾರ್ಚ್ 2024, 6:08 IST
<div class="paragraphs"><p><strong>ಮಾಗಡಿ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಕಟ್ಟಡದ ಮೇಲೆ ಬಾಗೂರು ಮಾರ್ಕಾಂಡೇಯ ರಚಿಸಿರುವ ಚಿತ್ರ.</strong></p></div>

ಮಾಗಡಿ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಕಟ್ಟಡದ ಮೇಲೆ ಬಾಗೂರು ಮಾರ್ಕಾಂಡೇಯ ರಚಿಸಿರುವ ಚಿತ್ರ.

   

ಮಾಗಡಿ: ಮಕ್ಕಳ ಮನೋವಿಕಾಸಕ್ಕಾಗಿ ಶಾಲಾ ಗೋಡೆಯ ಮೇಲೆ ಚಿತ್ರಗಳನ್ನು ರಚಿಸುವ ಮೂಲಕ ಚಿತ್ರಕಲಾ ಶಿಕ್ಷಕ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಲ್ಲಿ ಸೃಜನ ಶೀಲತೆ ಅರಳಿಸುತ್ತಿದ್ದಾರೆ.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ದಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಮಾರ್ಕಾಂಡೇಯ ಅವರು, ಶತಮಾನೋತ್ಸವ ಆಚರಣೆಯ ಸಿದ್ಧತೆಯಲ್ಲಿರುವ ಪ್ರೌಢಶಾಲಾ ಕಟ್ಟಡದ ಗೋಡೆಯ ಮೇಲೆ ಚಿತ್ರಗಳ ಚಿತ್ತಾರವನ್ನೇ ಸೃಷ್ಟಿಸಿದ್ದಾರೆ.

ADVERTISEMENT

ಚಿತ್ರಕಲೆಯಷ್ಟೇ ಅಲ್ಲ ಸಾಹಿತ್ಯದಲ್ಲೂ ಕೃಷಿ ಮಾಡಿರುವ ಬಾಗೂರು ಮಾರ್ಕಾಂಡೇಯ ಅವರು,  ಭಾವ ಗೀತೆಗಳು, ಶಿಶುಸಾಹಿತ್ಯ, ಮಕ್ಕಳ ಮನೋವಿಕಾಸ, ಚಿತ್ರಕಲೆ, ರೇಖೆ ಗಳಲ್ಲಿ ಭಾವಗೀತೆ ಸೇರಿದಂತೆ 51 ಕ್ಕಿಂತಲೂ ಹೆಚ್ಚು ಕೃತಿಗಳನ್ನು ಬರೆದಿ ದ್ದಾರೆ. ಹತ್ತಾರು ಬಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿರುವ ಅವರು, ನಾಡಿನ ಶ್ರೇಷ್ಠ ಚಿತ್ರಕಲಾವಿದರಾಗಿದ್ದ ಪಿ.ಆರ್. ತಿಪ್ಪೇಸ್ವಾಮಿ ಅವರ ಶಿಷ್ಯ. ಕ್ವಾನ್ವಾಸಿನ ಮೇಲೆ ರೇಖೆಗಳ ಮುಖಾಂತರ ಗೀತೆಯನ್ನು ಮೂಡಿಸಬಹುದು ಎಂದು ಅಧ್ಯಯನದ ಮೂಲಕ ಸಾಬೀತು ಪಡಿಸಿದ್ದಾರೆ. ಬೇರುಗಳು ಚಿತ್ರ ಸರಣಿ, ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಚಿತ್ರಸರಣಿ ಅವರಿಗೆ ಹೆಸರು ತಂದುಕೊಟ್ಟಿವೆ. 

ಕನ್ನಡವನ್ನು ಸುಲಭವಾಗಿ ಕಲಿಯಲು ‘ಕನ್ನಡ ಸೌರಭ’ ಎಂಬ ತಂತ್ರಾಂಶ ತಯಾರಿಸಿದ ಕೀರ್ತಿ ಮಾರ್ಕಾಂಡೇಯ ಅವರದ್ದು. ನಿತ್ಯ ನಿರಂತರ ಹೊಸ ಹುಡುಕಾಟಕ್ಕೆ ತುಡಿಯುತ್ತಾ, ಪ್ರತಿವರ್ಷವೂ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಪ್ರಸ್ತುತಪಡಿಸುತ್ತಾ ಚಿತ್ರ, ಪುಸ್ತಕ, ಸಿಡಿ, ಕಾವ್ಯಗಾಯನದಂಥ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. 

‘ಮಾತಿಗಿಂತ ಕೃತಿ ಲೇಸು’ ಎಂಬ ಮಾತಿನಲ್ಲಿ ನಂಬಿಕೆಯುಳ್ಳ ಮಾರ್ಕಾಂಡೇಯ ಅವರು, ಬಾಗೂರು ಪರಿಸರ ಅರಿವು ಮೂಡಿಸುವ ಬಗ್ಗೆ ಹೆಚ್ಚಿನ ಆಸಕ್ತಿ ಉಳಿಸಿಕೊಂಡು ಕಲಾ ಕೃತಿಯ ಮೂಲಕ ಅಂಥದೊಂದು ಸಂದೇಶವನ್ನು ಸಾರಿದ್ದಾರೆ. ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯು ಸೇರಿದಂತೆ ಹತ್ತಾರು ಸಂಘ–ಸಂಸ್ಥೆಗಳಿಂದ ಅವರು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮಾಗಡಿಯ ಸರ್ಕಾರಿ ಪ್ರೌಢಶಾಲೆಯನ್ನು ಪ್ರವೇಶಿಸಿದ ಕೂಡಲೇ ಗೋಡೆಗಳ ಮೇಲಿನ ಬಣ್ಣದ ಚಿತ್ತಾರಗಳು ನೋಡುಗರನ್ನು ಸ್ವಾಗತಿಸುತ್ತವೆ.  ವಿದ್ಯಾರ್ಥಿಗಳಲ್ಲಿ ಕಲೆಯನ್ನು ಸರಳವಾಗಿ ಕಲಿಸುವ ಕೌಶಲವನ್ನೂ ಮಾರ್ಕಾಂಡೇಯ ರೂಢಿಸಿಕೊಂಡಿದ್ದಾರೆ.

‘ಸರಳ ರೇಖೆಗಳು ಮತ್ತು ಚಿತ್ರಕಲೆಯ ಮೂಲಕ ಮಕ್ಕಳ ಮನಸ್ಸನ್ನು ಏಕಾಗ್ರತೆಗೊಳಿಸಿ, ಸರಳ ಕಲಿಕೆಗೆ ಪೂರಕವಾಗಿದೆ’ ಎಂಬ ಅಭಿಪ್ರಾಯ ಬಾಗೂರು ಮಾರ್ಕಾಂಡೇಯ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.