ರಾಮನಗರ: ‘ರಾಜ್ಯ ಸರ್ಕಾರದ ಮಹತ್ವಕಾಂಕ್ಷಿಯ ಪಂಚ ಗ್ಯಾರಂಟಿ ಯೋಜನೆಗಳ ಕಾರ್ಯಗಾರವನ್ನು ಜಿಲ್ಲೆಯಲ್ಲಿ ಸೆ. 27ರಂದು ಹಮ್ಮಿಕೊಳ್ಳಲಾಗುತ್ತಿದೆ. ಪರಿಣಾಮಕಾರಿಯಾಗಿ ಆಯೋಜಿಸಲು ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಸಹಕಾರ ನೀಡಬೇಕು’ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ.ಎನ್. ಹೆಗಡೆ ಮನವಿ ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವನಿಧಿ ಶೇ 97 ಜನರನ್ನು ತಲುಪಿವೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
‘ಈಗಾಗಲೇ ಬೆಂಗಳೂರು, ಚಿಕ್ಕಬಳ್ಳಾಪುರ, ಹಾವೇರಿ, ಚಾಮರಾಜನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಾರ್ಯಗಾರ ಮುಗಿದಿದೆ. 6ನೇ ಕಾರ್ಯಾಗಾರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿ.ಪಂ. ಸಭಾಂಗಣದಲ್ಲಿ ಹಮ್ಮಿಕೊಳ್ಳಲು ಚಿಂತಿಸಲಾಗಿದೆ. ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಹಾಗೂ ಗಣ್ಯರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.
‘ಕಾರ್ಯಾಗಾರವನ್ನು ಹಬ್ಬದಂತೆ ಆಯೋಜಿಸಬೇಕು. ಅದಕ್ಕಾಗಿ, ರೂಪುರೇಷ ಉತ್ತಮವಾಗಿರಬೇಕು. ಪ್ರಾರ್ಥನೆ, ನಾಡಗೀತೆ, ಸ್ವಾಗತ, ಪ್ರಾಸ್ತಾವಿಕ ಮಾತುಗಳು, ಗ್ಯಾರಂಟಿ ಯೋಜನೆಗಳ ಬಗ್ಗೆ ತಜ್ಞರ ಮಾಹಿತಿ, ಗ್ಯಾರಂಟಿ ಗೀತೆ-ನೃತ್ಯ, ಮುಖ್ಯ ಅತಿಥಿಗಳ ಭಾಷಣಗಳು, ಫಲಾನುಭವಿಗಳ ಯಶೋಗಾಥೆಗಳ ವಿಡಿಯೋ ಪ್ರಸಾರಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು ಮಾತನಾಡಿ, ‘ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಶೇ 99.5 ಜನರಿಗೆ ತಲುಪಬೇಕು ಎಂಬ ಉದ್ದೇಶ ನಮ್ಮದು. ಉಪ ಮುಖ್ಯಮಂತ್ರಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರ ತವರು ಜಿಲ್ಲೆ ಇದಾಗಿರುವುದರಿಂದ ಹಲವು ವಿಶೇಷತೆಗಳಿಂದ ಕಾರ್ಯಾಗಾರ ನಡೆಯಬೇಕು’ ಎಂದರು.
‘ಯೋಜನೆಗಳು ಎಲ್ಲಾ ಜಾತಿ ಮತ್ತು ವರ್ಗಗಳನ್ನು ತಲುಪುತ್ತಿವೆ. ಅಂದು ಬಲೂನ್ ಹಾರಿ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಜಿಲ್ಲೆಯ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಲೆಗಳ ಪ್ರದರ್ಶನ, ಸ್ತ್ರೀ ಶಕ್ತಿ ಸಂಘಗಳು ಉತ್ಪಾದಿಸುವ ಉತ್ಪನ್ನಗಳ ಮಳಿಗೆ ಪ್ರದರ್ಶನ ಸೇರಿದಂತೆ ವಿವಿಧ ಪ್ರದರ್ಶನ ಮಳಿಗೆಗಳನ್ನು ಹಾಕಲಾಗುವುದು’ ಎಂದು ತಿಳಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್, ‘ಕಾರ್ಯಾಗಾರ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಿನಿಂದಲೇ ರೂಪುರೇಷೆ ಸಿದ್ದಪಡಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ಹಂಚಲಾಗುವುದು’ ಎಂದರು.
ಜಿಲ್ಲಾ ಹಾಗೂ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.
‘ವಿಶ್ವಸಂಸ್ಥೆಯಿಂದ ಮೆಚ್ಚುಗೆ’ ‘
ಯಾವುದೇ ಮಧ್ಯವರ್ತಿಗಳಿಲ್ಲದೆ ಯಾರ ಹಸ್ತಕ್ಷೇಪವು ಇಲ್ಲದೆ ನೇರವಾಗಿ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳನ್ನು ತಲುಪಿವೆ. ಇದು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಒಳಗಾಗಿ ಹೆಸರು ಗಳಿಸಿದೆ. ವಿಶ್ವಸಂಸ್ಥೆ ಸಹ ಪಂಚ ಗ್ಯಾರಂಟಿಗಳ ಪರಿಣಾಮಕಾರಿ ಅನುಷ್ಠಾನವನ್ನು ಶ್ಲಾಘಿಸಿದೆ. ನೆರೆಹೊರೆ ರಾಜ್ಯಗಳಲ್ಲೂ ಕರ್ನಾಟಕದ ಈ ಮಾದರಿಯನ್ನು ಅನುಸರಿಸಲಾಗುತ್ತಿದೆ’ ಎಂದು ಸೂರಜ್ ಹೆಮ್ಮೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.