ADVERTISEMENT

ಪರೀಕ್ಷಾ ಅಕ್ರಮ ಆರೋಪ: ಪೋಷಕರಿಂದ ಪ್ರತಿಭಟನೆ

ಜವಾಹರ್‌ ನವೋದಯ ಶಾಲೆ ಪ್ರವೇಶ: ಮರು ಪರೀಕ್ಷೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 13:22 IST
Last Updated 11 ಜನವರಿ 2020, 13:22 IST
ಜವಾಹರ ನವೋದಯ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪೋಷಕರು ವಾಗ್ವಾದ ನಡೆಸಿದರು
ಜವಾಹರ ನವೋದಯ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪೋಷಕರು ವಾಗ್ವಾದ ನಡೆಸಿದರು   

ರಾಮನಗರ: ‘ಇಲ್ಲಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶನಿವಾರ ನಡೆದ ಜವಾಹರ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಪೋಷಕರು ದಿಢೀರ್ ಪ್ರತಿಭಟನೆ ನಡೆಸಿದರು.

‘ನೋಡಲ್ ಅಧಿಕಾರಿ ಮಂಜುನಾಥ್ ಎಂಬುವವರು ಪರೀಕ್ಷಾ ಕೇಂದ್ರದಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಿಕೊಟ್ಟರು ಎಂದು ಪರೀಕ್ಷೆ ಮುಗಿದ ಮೇಲೆ ನಮ್ಮ ಮಕ್ಕಳು ತಿಳಿಸಿದರು. ನಂತರ ನಾವು ಮಂಜುನಾಥ್ ಅವರನ್ನು ಪ್ರಶ್ನಿಸಿದೆವು. ಅವರು ಸಮರ್ಪಕವಾದ ಉತ್ತರ ನೀಡದೇ ಹೊರಟು ಹೋಗಿದ್ದಾರೆ’ ಎಂದು ಪೋಷಕರಾದ ರೇವಣ್ಣ, ಪುಟ್ಟೇಗೌಡ, ಜಯಕುಮಾರಿ, ಶಶಿಕಲಾ, ನಿಂಗೇಗೌಡ, ಪುಟ್ಟಸ್ವಾಮಿ ಆರೋಪಿಸಿದರು.

‘ಪರೀಕ್ಷೆಯಲ್ಲಿ ತಮಗೆ ಬೇಕಾಗಿರುವ ಮಕ್ಕಳಿಗೆ ಉತ್ತರವನ್ನು ಹೇಳಿಕೊಟ್ಟರೆ ಅರ್ಹ ಮಕ್ಕಳಿಗೆ ಅವಕಾಶಗಳು ಸಿಗುವುದಿಲ್ಲ. ಉತ್ತರವನ್ನು ಹೇಳಿಕೊಡುವುದಾದರೆ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏಕೆ ನಡೆಸಬೇಕು’ ಎಂದು ಪ್ರಶ್ನಿಸಿದರು. ‘ನಮಗೆ ನ್ಯಾಯ ಸಿಗಬೇಕು. ಮರು ಪರೀಕ್ಷೆ ಮಾಡಬೇಕು’ ಎಂದು ಒತ್ತಾಯಿಸಿ ಶಾಲೆಯ ಮುಖ್ಯಶಿಕ್ಷಕರ ಕೊಠಡಿಗೆ ಬೀಗ ಹಾಕಿ ಸ್ವಲ್ಪ ಸಮಯ ಪ್ರತಿಭಟಿಸಿದರು.

ADVERTISEMENT

‘ಪರೀಕ್ಷೆಯನ್ನು 312 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. 227 ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲಾಗಿದೆ. ಮಂಜುನಾಥ್ ಪರೀಕ್ಷೆಯ ನೋಡಲ್ ಅಧಿಕಾರಿಯಾದ್ದರಿಂದ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಅವರು ಕೆಲವು ವಿದ್ಯಾರ್ಥಿಗಳಿಗೆ ಹೇಳಿ ಕೊಟ್ಟರು ಎನ್ನುವುದು ನಮಗೆ ಗೊತ್ತಿಲ್ಲ’ ಎಂದು ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಪ್ರೇಮಾ ತಿಳಿಸಿದರು.

ಮಂಜುನಾಥ್‌ ಹೇಳುವುದೇನು?

ಘಟನೆ ಕುರಿತು ನೋಡಲ್‌ ಅಧಿಕಾರಿ ಮಂಜುನಾಥ್‌ ಪ್ರತಿಕ್ರಿಯಿಸಿ ‘ಪರೀಕ್ಷಾ ಕೇಂದ್ರದ ಕೊಠಡಿಗಳಿಗೆ ಭೇಟಿ ನೀಡಿದ ನಾನು, ವಿದ್ಯಾರ್ಥಿಗಳು ಒಎಂಆರ್ ಶೀಟ್ ನಲ್ಲಿ ತಮ್ಮ ನೋಂದಣಿ ಸಂಖ್ಯೆಯನ್ನು ಸರಿಯಾಗಿ ಬರೆದಿದ್ದಾರೆಯೇ ಇಲ್ಲವೆ ಎಂದು ನೋಡಿದೆ. ಕೆಲವು ವಿದ್ಯಾರ್ಥಿಗಳಿಗೆ ಸರಿಯಾಗಿ ಬರೆಯಲು ಹೇಳಿದೆ, ಇದನ್ನೇ ಮಕ್ಕಳು ತಪ್ಪಾಗಿ ಅರ್ಥೈಸಿಕೊಂಡು ಪೋಷಕರಿಗೆ ಹೇಳಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.

‘ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರೂ ಪೋಷಕರು ವಾಸ್ತವವನ್ನು ತಿಳಿದುಕೊಳ್ಳದೆ ಹಲ್ಲೆಗೆ ಮುಂದಾದರು’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.