ADVERTISEMENT

ರಸ್ತೆ ಕಾಮಗಾರಿ: ಜನರಿಗೆ ದೂಳಿನ ಸ್ನಾನ

ಮಂದಗತಿ ಕೆಲಸದಿಂದಾಗಿ ಸುತ್ತಮುತ್ತಲಿನ ವರ್ತಕರಿಗೂ ತೊಂದರೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 11:01 IST
Last Updated 7 ಜುಲೈ 2019, 11:01 IST
ಮಾಗಡಿ ರಸ್ತೆಯಲ್ಲಿ ತುಂಬಿದ ಕೆಸರು ಮಣ್ಣಿನ ನಡುವೆ ಸಂಚರಿಸುತ್ತಿರುವ ವಾಹನ ಸವಾರರು
ಮಾಗಡಿ ರಸ್ತೆಯಲ್ಲಿ ತುಂಬಿದ ಕೆಸರು ಮಣ್ಣಿನ ನಡುವೆ ಸಂಚರಿಸುತ್ತಿರುವ ವಾಹನ ಸವಾರರು   

ರಾಮನಗರ: ಮಾಗಡಿ ರಸ್ತೆಯಲ್ಲಿ ಚರಂಡಿ ಸ್ಲ್ಯಾಬ್‌ ನಿರ್ಮಾಣ ಕಾಮಗಾರಿಯು ಮಂದಗತಿಯಿಂದ ಸಾಗಿದ್ದು, ದೂಳಿನ ಕಾರಣದಿಂದಾಗಿ ಸುತ್ತಲಿನ ಜನರು ಪರದಾಡುವಂತೆ ಆಗಿದೆ.

ಲೋಕಸಭೆ ಚುನಾವಣೆಗೂ ಮುನ್ನವೇ ಕಾಮಗಾರಿಯನ್ನು ಆರಂಭಿಸಲಾಗಿತ್ತು. ತಿಂಗಳುಗಳೇ ಕಳೆದರೂ ಇನ್ನೂ ಕೆಲಸ ಮುಗಿಯುತ್ತಿಲ್ಲ. ಅರ್ಧದಷ್ಟು ಭಾಗದಲ್ಲಿಈಗಾಗಲೇ ಸ್ಲ್ಯಾಬ್‌ ನಿರ್ಮಿಸಲಾಗಿದ್ದು, ಅದನ್ನು ಸಂಚಾರಕ್ಕೆ ಮುಕ್ತಗೊಳಿಸಿ ಉಳಿದ ಅರ್ಧ ಭಾಗದಲ್ಲಿ ಕಾಮಗಾರಿ ನಡೆದಿದೆ. ಆದರೆ ಕಾಮಗಾರಿಗಾಗಿ ಅಗೆದ ಮಣ್ಣನ್ನು ಅಲ್ಲಿಯೇ ಬಿಡಲಾಗಿದೆ. ಇದರಿಂದ ದೂಳು ಸುತ್ತಲಿನ ಪ್ರದೇಶವನ್ನು ವ್ಯಾಪಿಸಿದೆ.

ದೂಳಿನ ಪರಿಣಾಮವಾಗಿ ಸುತ್ತಲಿನ ವರ್ತಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಾಗಿಲು ತೆರೆಯಿತೆಂದರೆ ಸಾಕು. ದೂಳು ಇಡೀ ಅಂಗಡಿಗಳ ತುಂಬ ಮಣ್ಣು ತೂರಿ ಬರುತ್ತಿದೆ. ಇದರಿಂದ ಉಸಿರಾಡುವುದೂ ಕಷ್ಟವಾಗಿದೆ. ಇದರಿಂದಾಗಿ ವ್ಯಾಪಾರ ವಹಿವಾಟಿಗೂ ಧಕ್ಕೆ ಆಗಿದೆ ಎಂದು ವರ್ತಕರು ದೂರುತ್ತಾರೆ.

ADVERTISEMENT

ಅಪಘಾತ: ಅರ್ಧಭಾಗದಲ್ಲಿ ನಿರ್ಮಾಣವಾಗಿರುವ ಸ್ಲ್ಯಾಬ್‌ಗೆ ಇಳಿಜಾರಾಗಿ ಎರಡು ಕಡೆ ಮಣ್ಣು ಸುರಿಯಲಾಗಿದೆ. ಆದರೆ ಈ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡದ ಕಾರಣ ಗುಂಡಿಗಳು ಉಂಟಾಗಿವೆ. ಮಳೆ ಬಿದ್ದ ಸಂದರ್ಭದಲ್ಲಿ ರಸ್ತೆಯೆಲ್ಲ ಕೆಸರಾಗುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಅಪಘಾತ ಮಾಡಿಕೊಳ್ಳುತ್ತಿದ್ದಾರೆ.

ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಕಾಮಗಾರಿಯ ಗುಣಮಟ್ಟವನ್ನು ವೀಕ್ಷಿಸಬೇಕು. ಆದಷ್ಟು ಶೀಘ್ರ ಕೆಲಸ ಮುಗಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.