ADVERTISEMENT

ಪರಿಸರ ಸ್ನೇಹಿ ಬ್ಯಾಗ್‌ ಬಳಕೆಗೆ ಪ್ರೋತ್ಸಾಹ

ನಗರಸಭೆಯಿಂದ ಜಾಗೃತಿ ಕಾರ್ಯಕ್ರಮ: ಕೈಚೀಲ ತಯಾರಿಕೆಗೆ ಮಹಿಳಾ ಸಂಘ, ವಿದ್ಯಾರ್ಥಿಗಳ ಸಾಥ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:42 IST
Last Updated 18 ಜುಲೈ 2019, 19:42 IST
ಮಹಿಳಾ ಸಂಘಗಳ ವತಿಯಿಂದ ತಯಾರಿಸಲಾದ ಬಟ್ಟೆ ಬ್ಯಾಗ್‌ ಅನ್ನು ನಗರಸಭೆ ಆಯುಕ್ತೆ ಶುಭಾ ವೀಕ್ಷಿಸಿದರು
ಮಹಿಳಾ ಸಂಘಗಳ ವತಿಯಿಂದ ತಯಾರಿಸಲಾದ ಬಟ್ಟೆ ಬ್ಯಾಗ್‌ ಅನ್ನು ನಗರಸಭೆ ಆಯುಕ್ತೆ ಶುಭಾ ವೀಕ್ಷಿಸಿದರು   

ರಾಮನಗರ: ಪ್ಲಾಸ್ಟಿಕ್‍ ಗೆ ಪರ್ಯಾಯವಾಗಿರುವ ಬಟ್ಟೆ ಮತ್ತು ಪೇಪರ್ ಕ್ಯಾರಿ ಬ್ಯಾಗ್‍ ಗಳ ಬಳಕೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಇಲ್ಲಿನ ನಗರಸಭೆ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಬೀದಿಬದಿ ವ್ಯಾಪಾರಿಗಳು ಮತ್ತು ನಗರ ವರ್ತಕರಿಗೆ ಅರಿವು ಮೂಡಿಸುತ್ತಿದೆ.

ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಗರಸಭೆ, ಶಾರದಾ ಮಹಿಳಾ ಸಂಘಗಳ ಒಕ್ಕೂಟ, ಚೈತನ್ಯ ಸಮಗ್ರ ಅಭಿವೃದ್ಧಿ ಸಂಸ್ಥೆ, ವರ್ತಕರ ಸಂಘ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಬಟ್ಟೆ ಮತ್ತು ಪೇಪರ್ ಕ್ಯಾರಿ ಬ್ಯಾಗ್‍ ಗಳ ಬಳಕೆಯ ಮಹತ್ವ ಹಾಗೂ ಪ್ಲಾಸ್ಟಿಕ್ ದುಷ್ಪರಿಣಾಮಗಳ ಕುರಿತು ವರ್ತಕರು ಹಾಗೂ ಗ್ರಾಹಕರಿಗೆ ಅರಿವು ಮೂಡಿಸಲಾಯಿತು.

ಪರಿಸರದ ಮೇಲೆ ತೀವ್ರ ದುಷ್ಪರಿಣಾಮ ಬೀರುವ ಪ್ಲಾಸ್ಟಿಕ್ ಪದಾರ್ಥಗಳ ಬಳಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಈಚೆಗೆ ನಗರಸಭೆ ಅಧಿಕಾರಿಗಳು ನಗರದ ಮಳಿಗೆಗಳ ಮೇಲೆ ದಾಳಿ ನಡೆಸಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದ್ದ ಅಪಾರ ಪ್ರಮಾಣದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಾಗೂ ಮತ್ತಿತರರ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದರು. ಇದೀಗ ಪ್ಲಾಸ್ಟಿಕ್ ಬದಲಿಗೆ ಬಳಸಬಹುದಾದ ಪರ್ಯಾಯ ವಸ್ತುಗಳ ಬಗ್ಗೆ ವರ್ತಕರಿಗೆ ಮನದಟ್ಟು ಮಾಡುತ್ತಿದ್ದಾರೆ.

ADVERTISEMENT

‘ಪರಿಸರದ ಮೇಲೆ ತೀವ್ರ ದುಷ್ಪರಿಣಾಮ ಬೀರುವ ಹಾಗೂ ಕಸ ವಿಲೇವಾರಿಗೆ ತಲೆ ನೋವಾಗಿದ್ದ ಪ್ಲಾಸ್ಟಿಕ್‍ ಅನ್ನು ಎಲ್ಲೆಡೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ಯಾಸ್ಟಿಕ್ ಕ್ಯಾರಿಬ್ಯಾಗ್ ಮತ್ತು ಇತರೆ ಹಾನಿಕಾರಕ ಪದಾರ್ಥಗಳ ಬಳಕೆ ಹಾಗೂ ಮಾರಾಟ ದಂಡಾರ್ಹ ಅಪರಾಧವಾಗಿದೆ. ಪ್ಲಾಸ್ಟಿಕ್‍ ಗೆ ಪರ್ಯಾಯವಾಗಿ ಬಟ್ಟೆ ಮತ್ತು ಪೇಪರ್ ಬ್ಯಾಗ್‍ ಗಳನ್ನು ಬಳಸಬೇಕಾಗಿರುವುದು ಅನಿವಾರ್ಯ’ ಎಂದು ಪೌರಾಯುಕ್ತೆ ಶುಭಾ ತಿಳಿಸಿದರು.

ಬಟ್ಟೆ ಮತ್ತು ಪೇಪರ್ ಬ್ಯಾಗ್‍ ಗಳ ಬಳಕೆಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ವರ್ತಕರಿಗೆ ಅರಿವು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಸಂಘ ಸಂಸ್ಥೆಗಳು, ಮಹಿಳಾ ಸಂಘಗಳು ಕೈ ಜೋಡಿಸಿರುವುದು ವಿಶೇಷ. ಶಾರದಾ ಮಹಿಳಾ ಒಕ್ಕೂಟದ ಸದಸ್ಯರು ಅಕ್ಕಿ ಚೀಲವನ್ನು ಬಳಸಿ ಗುಣಮಟ್ಟದ ಹತ್ತಾರು ಕ್ಯಾರಿ ಬ್ಯಾಗ್‍ ಗಳನ್ನು ತಯಾರಿಸಿ ಕಾರ್ಯಕ್ರಮದಲ್ಲಿ ಪ್ರಚುರ ಪಡಿಸುತ್ತಿದ್ದಾರೆ ಎಂದರು.

ಶಾಲಾ ಮಕ್ಕಳಿಗೆ ತರಬೇತಿ: ಪೇಪರ್ ಬ್ಯಾಗ್ ಬಳಕೆಯ ಮಹತ್ವದ ಕುರಿತು ಸಾರ್ವಜನಿಕರ ಕಣ್ತೆರೆಸಲು ಶಾಲಾ ಮಕ್ಕಳನ್ನು ಈ ಅಭಿಯಾನದಲ್ಲಿ ಬಳಸಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಪೇಪರ್ ಕ್ಯಾರಿ ಬ್ಯಾಗ್‍ ಗಳನ್ನು ತಯಾರಿಸುವ ಬಗ್ಗೆ ತುರುಪಲಾಯ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಮಕ್ಕಳಿಗೆ ತರಬೇತಿ ನೀಡಿ, ಶಾಲಾ ಮಕ್ಕಳ ಕೈಯಲ್ಲೇ ಬ್ಯಾಗ್‍ ಗಳನ್ನು ತಯಾರಿಸಲಾಯಿತು.

‘ಇಂದಿನಿಂದ ಪ್ರತಿ ಶಾಲೆಗೆ ತೆರಳಿ ಅಲ್ಲಿನ ಮಕ್ಕಳಿಗೆ ತರಬೇತಿ ನೀಡಲಾಗುವುದು. ಜತೆಗೆ ಮಕ್ಕಳು ತಯಾರಿಸಿದ ಬ್ಯಾಗ್‍ ಗಳನ್ನು ಸ್ಥಳೀಯ ಅಂಗಡಿ ಮಳಿಗೆಗಳಿಗೆ ವಿತರಿಸಲಾಗುವುದು’ ಎಂದು ಪರಿಸರ ಎಂಜಿನಿಯರ್ ರಾಜಶ್ರೀ ತಿಳಿಸಿದರು.

ಸಂಘ ಸಂಸ್ಥೆಗಳ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಆರೋಗ್ಯ ನಿರೀಕ್ಷಕರಾದ ವಿಜಿ ಕುಮಾರ್, ಪವಿತ್ರಾ, ನಟರಾಜು, ಗೋವಿನಾಥ್, ಸಹ ಶಿಕ್ಷಕಿ ಶ್ರೀಮತಿ, ಲಯನ್ಸ್ ಸಂಸ್ಥೆ ಹಾಗೂ ಚೈತನ್ಯ ಸಮಗ್ರ ಅಭಿವೃದ್ಧಿ ಸಂಘದ ಜ್ಯೋತಿ, ರಿಹಾನ ಬೇಗ್, ಸರಸ್ವತಿ ಇದ್ದರು.

***
ಪ್ಲಾಸ್ಟಿಕ್ ಪದಾರ್ಥ ಬಳಕೆ ನಿಷೇಧ ಕ್ರಮದಿಂದ ಪ್ರಾರಂಭದಲ್ಲಿ ಸಾರ್ವಜನಿಕರಿಗೆ ತುಸು ಸಮಸ್ಯೆಯಾದರೂ ಕೆಲವೇ ವರ್ಷಗಳಲ್ಲಿ ಇದರ ಲಾಭ ಅರಿವಾಗಲಿದೆ

-ಶುಭಾ,ನಗರಸಭೆ ಆಯುಕ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.