ಚನ್ನಪಟ್ಟಣ: ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡುವ ನಿಟ್ಟಿನಲ್ಲಿ ಪ್ರತಿ ಮನೆಗೆ ಎರಡು ಬಟ್ಟೆ ಬ್ಯಾಗ್ ವಿತರಣೆ ಮಾಡಲಾಗುವುದು ಎಂದು ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್ ತಿಳಿಸಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ನಗರಸಭಾ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಕಸದ ರಾಶಿ ಹೆಚ್ಚಾಗುತ್ತಿದೆ. ಇದಕ್ಕೆ ಪ್ಲಾಸ್ಟಿಕ್ ಬಳಕೆ ಹೆಚ್ಚು ಕಾರಣವಾಗಿದೆ. ಪ್ಲಾಸ್ಟಿಕ್ ಕವರ್ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡುವ ನಿಟ್ಟಿನಲ್ಲಿ ಚಿಂತನೆ ಮಾಡಲಾಗಿದೆ ಎಂದರು.
ನಗರಸಭೆ ವ್ಯಾಪ್ತಿಯ ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಅಂಗಡಿಗಳಲ್ಲಿ ಪರಿಶೀಲನೆ ಮಾಡಿ ಅವರಿಗೆ ಅರಿವು ಮೂಡಿಸುತ್ತೇವೆ. ಜೊತೆಗೆ ಎರಡು ಬಾರಿ ದಂಡ ಹಾಕಿ ಎಚ್ಚರಿಕೆ ನೀಡುತ್ತೇವೆ. ಅದು ಮುಂದುವರೆದರೆ ಮೂರನೇ ಬಾರಿಗೆ ಅಂಗಡಿ ಮಳಿಗೆಯ ಅನುಮತಿ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಾಮಗಾರಿ ಅನುಮೋದನೆಗೆ ಪ್ರಸ್ತಾವನೆ: ನಗರಸಭೆಯ 2022-23ನೇ ಸಾಲಿನ ಎಸ್ಎಫ್‌ಸಿ (1 ನೇ ಕಂತು) ₹10 ಕೋಟಿ ಅನುದಾನ, 2ನೇ ಕಂತು ₹10 ಕೋಟಿ ಅನುದಾನ, 2024-25ನೇ ಸಾಲಿನ ಎಸ್ಎಫ್‌ಸಿ ₹31 ಕೋಟಿ ಅನುದಾನದ ಕಾಮಗಾರಿಗಳ ಅನುಮೋದನೆಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸದಸ್ಯರು ಒಮ್ಮತ ಸೂಚಿಸಿದರು.
ಈಗಾಗಲೇ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಜಿಲ್ಲಾಧಿಕಾರಿಗಳಿಂದ ತಾಂತ್ರಿಕ ಬಿಡ್ ಅನುಮತಿ ಪಡೆದು, ಆನಂತರ ಕಾಮಗಾರಿ ಆರಂಭಿಸಲು ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ನಗರಸಭೆ ಪೌರಾಯುಕ್ತ ಮಹೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆ ಚಂದ್ರಶೇಖರ್, ಸೇರಿದಂತೆ ನಗರಸಭಾ ಸದಸ್ಯರು, ಅಧಿಕಾರಿಗಳು ಇದ್ದರು.
ಶೆಟ್ಟಿಹಳ್ಳಿ ಕೆರೆ ಹಂತ ಹಂತವಾಗಿ ಕ್ರಮ
ನಗರದ ಶೆಟ್ಟಿಹಳ್ಳಿ ಕೆರೆ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷ ವಾಸಿಲ್ ಆಲಿಖಾನ್ ತಿಳಿಸಿದರು. ರಾಜ್ಯ ಉಪ ಲೋಕಾಯುಕ್ತ ಫಣೀಂಧ್ರ ಅವರು ಕೆರೆ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಎರಡು ತಿಂಗಳು ಗಡುವು ನೀಡಿದ್ದಾರೆ. ಕೆರೆ ಸ್ವಚ್ಛತೆಗೆ ಕೋಟ್ಯಂತರ ಅನುದಾನ ಬೇಕಿದೆ. ನಗರಸಭೆಯಲ್ಲಿ ಅನುದಾನದ ಕೊರತೆ ಇದೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು. ಕೆರೆ ಅಭಿವೃದ್ಧಿ ಬಗ್ಗೆ ಬಿಎಂಆರ್‌ಡಿಎಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಅವರಿಗೆ ಸಹ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಸಿಗುವ ಅನುದಾನ ಬಳಕೆ ಮಾಡಿಕೊಂಡು ಕೆರೆ ಅಭಿವೃದ್ಧಿ ಮಾಡಲಾಗುವುದು. ಜೊತೆಗೆ ಕೆರೆಯ ಬಳಿ ಕಟ್ಟಡ ಕಾಮಗಾರಿಗಳ ಅವಶೇಷ ಹಾಕುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭಾ ಆಯುಕ್ತ ಮಹೇಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.