ADVERTISEMENT

ಮಾಗಡಿ: ನಷ್ಟದಲ್ಲಿ ಪಿಎಲ್‌ಡಿ ಬ್ಯಾಂಕ್

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 4:02 IST
Last Updated 21 ಸೆಪ್ಟೆಂಬರ್ 2025, 4:02 IST
ಮಾಗಡಿಯಲ್ಲಿ ಪಿಎಲ್‌ಡಿ ಬ್ಯಾಂಕ್ ನ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್ ಹಾಗೂ ಬ್ಯಾಂಕ್‌ ಅಧ್ಯಕ್ಷ ರವೀಶ್ ಇದ್ದರು
ಮಾಗಡಿಯಲ್ಲಿ ಪಿಎಲ್‌ಡಿ ಬ್ಯಾಂಕ್ ನ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್ ಹಾಗೂ ಬ್ಯಾಂಕ್‌ ಅಧ್ಯಕ್ಷ ರವೀಶ್ ಇದ್ದರು   

ಮಾಗಡಿ: ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ₹9.5ಕೋಟಿ ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಾರಣದಿಂದಾಗಿ ರೈತರಿಗೆ ಡಿವಿಡೆಂಡ್ ನೀಡಲು ಸಾಧ್ಯವಾಗಿಲ್ಲ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್ ತಿಳಿಸಿದರು.

ಪಿಎಲ್‌ಡಿ ಬ್ಯಾಂಕ್ 2024-25ನೇ ಸಾಲಿನ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು,  ರೈತರ ಸಕಾಲಿಕ ಸಾಲ ಮರುಪಾವತಿ ಇಲ್ಲದಿರುವುದು ನಷ್ಟಕ್ಕೆ ಮುಖ್ಯ ಕಾರಣವಾಗಿದೆ. ಸರ್ಕಾರಕ್ಕೆ ₹12ಕೋಟಿ ಸಾಲ ಬಾಕಿ ಇದ್ದು, ರೈತರಿಂದ ₹7 ಕೋಟಿ ವಸೂಲಿ ಮಾಡಬೇಕಾದ ಅಗತ್ಯವಿದೆ ಎಂದರು.

ಈ ನಷ್ಟವನ್ನು ಭರ್ತಿ ಮಾಡಲು ಸರ್ಕಾರದ ಹಸ್ತಕ್ಷೇಪ ಅಗತ್ಯವಿದೆ. ವೈದ್ಯನಾಥ್ ವರದಿ ಪ್ರಕಾರ ಸರ್ಕಾರವೇ ನಷ್ಟ ಭರ್ತಿ ಮಾಡಿದರೆ ಮಾತ್ರ ಬ್ಯಾಂಕ್ ಪುನರ್ ಜೀವನ ಪಡೆಯಲು ಸಾಧ್ಯ. ಇಲ್ಲದಿದ್ದರೆ ಬ್ಯಾಂಕ್ ಮುಂದೆಯೂ ನಷ್ಟದಲ್ಲೇ ಮುಂದುವರಿಯುವ ಸಾಧ್ಯತೆ ಇದೆ ಎಂದರು.

ADVERTISEMENT

ಬ್ಯಾಂಕ್‌ನ ಪ್ರಸ್ತುತ ಕಟ್ಟಡ ದುರ್ಬಲ ಸ್ಥಿತಿಯಲ್ಲಿದೆ. ಈ ಸಮಸ್ಯೆ‌ ಪರಿಹರಿಸಲು ಪುರಸಭೆಯೊಂದಿಗೆ ಜಾಗ ವಿನಿಮಯ ಒಪ್ಪಂದಕ್ಕೆ ಬರಲು ಯೋಜನೆ ರೂಪುಗೊಂಡಿದೆ. ಪುರಸಭೆಯು ಮಾಗಡಿ-ಬೆಂಗಳೂರು ಮುಖ್ಯ ರಸ್ತೆಯಲ್ಲಿರುವ ಕಸಾಯಿ ಕಾರ್ಖಾನೆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ₹8ಲಕ್ಷ ಪಾವತಿಸಲು ಒಪ್ಪಿದೆ ಎಂದರು.

ಬ್ಯಾಂಕ್ ಅಧ್ಯಕ್ಷ ಜೆ.ಆರ್.ರವೀಶ್, ರೈತರು ತಮ್ಮ ಸಾಲವನ್ನು ಸಕಾಲಿಕವಾಗಿ ಮರುಪಾವತಿ ಮಾಡುವಂತೆ ಮನವಿ ಮಾಡಿದರು.

ಸಭೆಯಲ್ಲಿ 2024-25 ಸಾಲಿನ ಲೆಕ್ಕಶೋಧನಾ ವರದಿ ಅನುಮೋದನೆ ಪಡೆಯಿತು. ಉಪಾಧ್ಯಕ್ಷ ಹನುಮಂತಯ್ಯ, ನಿರ್ದೇಶಕ ನಾಗರಾಜು, ಅರುಣಿ, ದೇವೇಂದ್ರ, ವೇಣುಗೋಪಾಲು ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.