ADVERTISEMENT

ರಾಮನಗರ | ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ: 23 ಮಂದಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 2:00 IST
Last Updated 1 ಸೆಪ್ಟೆಂಬರ್ 2025, 2:00 IST
ರಾಮನಗರದಲ್ಲಿರುವ ಜಿಲ್ಲಾ ಕಾರಾಗೃಹ (ಸಂಗ್ರಹ ಚಿತ್ರ)
ರಾಮನಗರದಲ್ಲಿರುವ ಜಿಲ್ಲಾ ಕಾರಾಗೃಹ (ಸಂಗ್ರಹ ಚಿತ್ರ)   

ರಾಮನಗರ: ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಜಗಳ ಬಿಡಿಸಲು ಮುಂದಾದ ಕಾರಾಗೃಹದ ಅಧೀಕ್ಷಕ, ಅಧಿಕಾರಿಗಳು, ಸಿಬ್ಬಂದಿ ಸೇರಿ 9 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆ. 28ರಂದು ನಡೆದಿರುವ ಘಟನೆಗೆ ಸಂಬಂಧಿಸಿದಂತೆ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ 23 ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಕೈದಿಗಳಾದ ದೇವರಾಜು, ಚರಣ, ಪುನೀತ್ ಕುಮಾರ್ ಅಲಿಯಾಸ್ ಔಟು, ಪ್ರಮೋದ ಅಲಿಯಾಸ್ ಚುಂಚ, ಅಭಿಷೇಕ್ ಅಲಿಯಾಸ್ ಅಭಿ, ಅರುಣ, ಭರತ ಅಲಿಯಾಸ್ ಗುಡ್ಡೆ, ಚಂದನ್, ಭರತ್, ಹರ್ಷ ಅಲಿಯಾಸ್ ಕೈಮ, ಪ್ರಮೋದ್ ಅಲಿಯಾಸ್ ಕರಿಯ, ಸಿದ್ದರಾಜು ಅಲಿಯಸ್ ಸೀಜಿಂಗ್ ಸಿದ್ದ, ಶಾಂತಮೂರ್ತಿ ಎಲ್., ಮಹೇಶ್ ಗೌಡ ಅಲಿಯಾಸ್ ಇಂಗ್ಲಿಷ್, ಪ್ರಶಾಂತ್ ನಾಯ್ಕ, ಶ್ರೀನಿವಾಸ ಪ್ರಭು ಅಲಿಯಾಸ್ ಬಬ್ಲಿ, ವರುಣ, ರಜಿತ್, ಹರೀಶ್, ದರ್ಶನ್, ಯಶವಂತ ಹಾಗೂ ಸುಮಂತ್ ಅಲಿಯಾಸ್ ಅಪ್ಪುಕ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾರಾಮಾರಿ ತಡೆಯಲು ಮುಂದಾದ ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬಳೆ, ಮುಖ್ಯ ವೀಕ್ಷಕ ಪ್ರಶಾಂತ ಎಂ.ಪಿ., ವೀಕ್ಷಕರಾದ ಮಂಜುನಾಥ ಪೂಜಾರ, ಸಂಜೀವಕುಮಾರ ಪಾಂಡ್ರೆ, ನಾಗರಾಜು, ಶಿವಾನಂದ ಮಾಳಗಿ, ಜೈಲರ್ ಈರಪ್ಪ ಸದಲಾಪುರ, ಸಹಾಯಕ ಜೈಲರ್ ಬಾಬು ಪಿ.ಎಸ್ ಹಾಗೂ ಪ್ರವೀಣ್ ಕುಮಾರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ADVERTISEMENT

ಘಟನೆ ಹಿನ್ನೆಲೆ:

ಆರೋಪಿಯ ಹರ್ಷ ಅಲಿಯಾಸ್ ಕೈಮ ಮತ್ತು ದೇವರಾಜು ಇಬ್ಬರು, ತಮಗೆ ಸಂದರ್ಶನ ಇದೆಯೇ ಎಂದು ಕೇಳಿಕೊಂಡು ವೀಕ್ಷಕ ಮಂಜುನಾಥ ಪೂಜಾರ ಅವರ ಬಳಿ ಕೇಳಿಕೊಂಡು ಬಂದಿದ್ದರು. ಸಿಬ್ಬಂದಿ ಇಲ್ಲ ಎಂದು ಹೇಳಿದ್ದರು. ಆಗ ಇಬ್ಬರೂ, ಬೈದಾಡಿಕೊಂಡು ಕೂಗಾಡಿದ್ದಾರೆ. ಸಿಬ್ಬಂದಿ ಗಲಾಟೆ ಮಾಡದಂತೆ ತಾಕೀತು ಮಾಡಿದ್ದಾರೆ.

ಅಷ್ಟೊತ್ತಿಗಾಗಲೇ ಹರ್ಷ ಮತ್ತು ದೇವರಾಜ ಕಡೆಯವರು ತಮ್ಮ ಕೊಠಡಿಯಿಂದ ಹೊರಬಂದು ಗುಂಪುಗೂಡಿ ಪರಸ್ಪರ ಬೈದಾಡಿಕೊಂಡು ಎಳೆದಾಡಿ ಹಲ್ಲೆಗೆ ಯತ್ನಿಸಲು ಮುಂದಾಗಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಗುಂಪನ್ನು ಚದುರಿಸಿ ಗಲಾಟೆ ತಣ್ಣಗಾಗಿಸಿದರು. ಈ ವೇಳೆ ಸಿಬ್ಬಂದಿ ಹಾಗೂ ಕೆಲ ಕೈದಿಗಳಿಗೂ ಸಣ್ಣಪುಟ್ಟ ಗಾಯಗಳಾದವು ಎಂದು ಮೂಲಗಳು ತಿಳಿಸಿವೆ.

ಕಾರಾಗೃಹದ ನಿಯಮಗಳನ್ನು ಉಲ್ಲಂಘಿಸಿ, ಗುಂಪುಗೂಡಿ ಗಲಾಟೆ ಮಾಡಿದ್ದ ಕೈದಿಗಳ ವಿರುದ್ಧ ಅಧೀಕ್ಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಕ್ಷುಲ್ಲಕ ಕಾರಣಕ್ಕೆ ಕೈದಿಗಳು ಜಗಳವಾಡಲು ಮುಂದಾದಾಗ ನಾವು ತಕ್ಷಣ ಕಾರ್ಯಪ್ರವೃತ್ತರಾಗಿ ಗಲಾಟೆ ನಿಲ್ಲಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದೆವು. ಕಾರಾಗೃಹ ನಿಯಮ ಉಲ್ಲಂಘನೆ ಹಾಗೂ ಗಲಾಟೆ ಕಾರಣಕ್ಕೆ ಕೈದಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ
– ರಾಕೇಶ ಕಾಂಬಳೆ ಅಧೀಕ್ಷಕ ಬೆಂಗಳೂರು ದಕ್ಷಿಣ ಜಿಲ್ಲಾ ಕಾರಾಗೃಹ
ಕಾರಾಗೃಹಕ್ಕೆ ಡಿಐಜಿ ಭೇಟಿ
ಘಟನೆ ಬೆನ್ನಲ್ಲೇ ಕಾರಾಗೃಹ ಇಲಾಖೆಯ ಬೆಂಗಳೂರು ದಕ್ಷಿಣ ವಲಯದ ಉಪ ಮಹಾ ನಿರೀಕ್ಷಕಿ (ಡಿಐಜಿ) ದಿವ್ಯಶ್ರೀ ಅವರು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ್ದಾರೆ. ಘಟನೆ ಕುರಿತು ಅಧೀಕ್ಷಕರು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಜೊತೆಗೆ ಕಾರಾಗೃಹ ಇಲಾಖೆ ವತಿಯಿಂದಲೂ ಆಂತರಿಕ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಗುಂಡೇಟು ತಿಂದಿದ್ದ ಕೈದಿ
ಘಟನೆಗೆ ಕಾರಣನಾದ ಹರ್ಷ ಅಲಿಯಾಸ್ ಕೈಮ 2024ರ ಜುಲೈನಲ್ಲಿ ಕನಕಪುರದ ಮಳಗಾಳು ಗ್ರಾಮಕ್ಕೆ ರಾತ್ರಿ ನುಗ್ಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈರಮುಡಿ ಅವರ ಪುತ್ರ ಅನೀಶ್ ಕೈ ಕತ್ತರಿಸಿದ್ದ. ಕೃತ್ಯವು ರಾಜ್ಯದ ಗಮನ ಸೆಳೆದಿತ್ತು. ಬಳಿಕ ಪೊಲೀಸರು ಹರ್ಷನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಅಂದಿನಿಂದ ಆತ ಕಾರಾಗೃಹದಲ್ಲಿ ಬಂಧಿಯಾಗಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.