ಕನಕಪುರ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬ ಬಸ್‌ನಲ್ಲಿ ಕುಳಿತಿದ್ದ ತನ್ನ ದೊಡ್ಡಪ್ಪನ ಮೇಲೆ ಸ್ನೇಹಿತನೊಂದಿಗೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ನಗರದ ಬಸ್ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ನಂತರ ಕನಕಪುರ ಟೌನ್ ಪೊಲೀಸ್ ಠಾಣೆಗೆ ಮಚ್ಚಿನ ಸಮೇತ ಬಂದು ಶರಣಾಗಿದ್ದಾರೆ.
ತಾಲ್ಲೂಕಿನ ಇರಲ್‌ಪೋಡ್ ಪಕ್ಕದ ದಿಂಬದಳ್ಳಿ ಗ್ರಾಮದ ಮಾರೇಗೌಡ (52) ಹಲ್ಲೆಗೊಳಗಾದ ವ್ಯಕ್ತಿ. ಆತನ ಸಹೋದರನ ಮಗ ಆದಿತ್ಯ (30) ಹಾಗೂ ಬೆಂಗಳೂರಿನ ಬನಶಂಕರಿಯ ಸಲ್ಮಾನ್ (19) ಕೊಲೆಗೆ ಯತ್ನಿಸಿದ ಆರೋಪಿಗಳು. ಗಂಭಿರವಾಗಿ ಗಾಯಗೊಂಡಿರುವ ಮಾರೇಗೌಡಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ತಮ್ಮನ ಮಗನ ಕೊಂದಿದ್ದ:
ಹಲ್ಲೆಗೊಳಗಾಗಿರುವ ಮಾರೇಗೌಡ ಮತ್ತು ಆತನ ಸಹೋದರ ಮಲ್ಲಯ್ಯ ನಡುವೆ ಜಮೀನು ವಿವಾದವಿತ್ತು. ಇದೇ ಕಾರಣಕ್ಕೆ ಮಾರೇಗೌಡ ತಮ್ಮನ ಮಗ ಅಜಯ್‌ನನ್ನು ಕೊಲೆ ಮಾಡಿ ಜೈಲು ಸೇರಿದ್ದ. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರದ ಕೋರ್ಟ್‌ಗೆ ವಿಚಾರಣೆಗಾಗಿ ಮಂಗಳವಾರ ಬಂದಿದ್ದ ಎಂದು ಪೊಲೀಸರು ತಿಳಿಸಿದರು.
ತನ್ನ ತಮ್ಮನನ್ನು ಕೊಲೆ ಮಾಡಿದ್ದ ದೊಡ್ಡಪ್ಪನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಕಾಯುತ್ತಿದ್ದ ಆದಿತ್ಯ, ಇಂದು ಕೋರ್ಟ್ ವಿಚಾರಣೆಗೆ ಬರುವ ದೊಡ್ಡಪ್ಪನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಅದಕ್ಕಾಗಿ, ಎರಡು ಮಚ್ಚುಗಳನ್ನು ಖರೀದಿಸಿ ತನ್ನ ಗೆಳೆಯ ಸಲ್ಮಾನ್‌ನನ್ನು ಬೆಂಗಳೂರಿನಿಂದ ಕರೆಯಿಸಿಕೊಂಡಿದ್ದ.
ಬೆಳಿಗ್ಗೆಯಿಂದ ಮಾರೇಗೌಡನ ಚಲನವಲನಗಳ ಮೇಲೆ ಆದಿತ್ಯ ನಿಗಾ ಇಟ್ಟಿದ್ದ. ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ಮಾರೇಗೌಡ, ಮಧ್ಯಾಹ್ನ ಊರಿಗೆ ಹೋಗುವುದಕ್ಕಾಗಿ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತಿ ಕುಳಿತಿದ್ದ. ಆಗ ಒಮ್ಮೆಲೆ ಬಸ್‌ನೊಳಕ್ಕೆ ನುಗ್ಗಿದ ಆರೋಪಿಗಳು, ಪ್ರಯಾಣಿಕರ ನಡುವೆ ಕುಳಿತಿದ್ದ ಮಾರೇಗೌಡನ ಮೇಲೆ ಏಕಾಏಕಿ ಹಲ್ಲೆ ನಡೆಸಿದರು. ಇದರಿಂದಾಗಿ ಬೆದರಿದ ಪ್ರಯಾಣಿಕರು ಕೆಳಕ್ಕಿಳಿದು ದಿಕ್ಕಾಪಾಲಾಗಿ ಓಡಿದರು ಎಂದು ಪೊಲೀಸರು ಹೇಳಿದರು.
ವಿಷಯ ತಿಳಿದು ಸ್ಥಳಕ್ಕೆ ತೆರಳಿ, ಆಂಬುಲೆನ್ಸ್ ಕರೆಯಿಸಿ ಮಾರೇಗೌಡನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಠಾಣೆಗೆ ಬಂದ ಆರೋಪಿಗಳನ್ನು ಬಂಧಿಸಿ, ಮಚ್ಚುಗಳನ್ನು ವಶಕ್ಕೆ ಪಡೆಯಲಾಯಿತು. ಆಸ್ತಿ ವಿಚಾರಕ್ಕಾಗಿ ದೊಡ್ಡಪ್ಪ ತನ್ನ ತಮ್ಮನನ್ನು ಕೊಲೆ ಮಾಡಿದ್ದ. ಅದಕ್ಕೆ ಪ್ರತೀಕಾರವಾಗಿ ಕೃತ್ಯ ಎಸಗಿದ್ದೇನೆ ಎಂದು ಆರೋಪಿ ಆದಿತ್ಯ ಹೇಳಿಕೆ ನೀಡಿದ್ದಾನೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಬಸ್‌ನೊಳಗೆ ಹಲ್ಲೆಗೊಳಗಾದ ಮಾರೇಗೌಡ ರಕ್ತದ ಮಡುವಿನಲ್ಲಿ ಬಿದ್ದಿರುವ ಹಾಗೂ ಆರೋಪಿಗಳು ಬಸ್ಸಿನಿಂದಿಳಿದು ಮಚ್ಚಿನೊಂದಿಗೆ ಹೋಗುವ ವಿಡಿಯೊಗಳು ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್‌ನಲ್ಲಿ ಹರಿದಾಡುತ್ತಿವೆ.
ಸತ್ತಿದ್ದಾನೆಂದು ಬಿಟ್ಟು ಹೋದರು
ತಲೆ, ಕೈ, ಕುತ್ತಿಗೆ, ಭುಜಕ್ಕೆ ಬಿದ್ದ ಮಚ್ಚಿನ ಏಟಿನಿಂದಾಗಿ ಮಾರೇಗೌಡ ರಕ್ತದ ಮಡುವಿನಲ್ಲಿ ಬಸ್‌ನೊಳಗೆ ಪ್ರಜ್ಞೆ ತಪ್ಪಿ ಬಿದ್ದರು. ಕೈ–ಕಾಲು ಆಡಿಸದ ಬಿದ್ದಿದ್ದ ಮಾರೇಗೌಡ ಸತ್ತಿದ್ದಾನೆ ಎಂದುಕೊಂಡು ಆರೋಪಿಗಳಿಬ್ಬರು, ಬಸ್ಸಿನಿಂದ ಕೆಳಕ್ಕಿಳಿದರು. ಅರೆ ಕ್ಷಣದಲ್ಲಿ ನಡೆದ ಕೃತ್ಯದಿಂದ ಬೆಚ್ಚಿಬಿದ್ದ ನಿಲ್ದಾಣದ ಏನಾಯಿತು ಎಂದು ಬಸ್‌ನತ್ತ ನೋಡಲು ಬಂದರು. ಆಗ ಆರೋಪಿಗಳು, ‘ಏನಿಲ್ಲ ಅವನನ್ನು ಮುಗಿಸಿದ್ದೇನೆ. ನೀವ್ಯಾರೂ ಬರಬೇಕಿಲ್ಲ. ನಾವೇ ಪೊಲೀಸ್ ಠಾಣೆಗೆ ಹೋಗಿ ಶರಣಾಗುತ್ತೇವೆ’ ಎಂದು ಜನರಿಗೆ ಹೇಳುತ್ತಾ, ಮಚ್ಚಿಗೆ ಅಂಟಿದ್ದ ರಕ್ತವನ್ನು ನೆಲಕ್ಕೆ ಒರೆಸಿ ಠಾಣೆಯತ್ತ ಹೋದರು. ಕೆಲ ಹೊತ್ತಿನ ನಂತರ, ಮಾರೇಗೌಡಗೆ ಪ್ರಜ್ಞೆ ಬಂದು ಕೈ–ಕಾಲು ಆಡಿಸುತ್ತಾ ನೆರವಿಗೆ ಅಂಗಲಾಚುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.