ADVERTISEMENT

ಚನ್ನಪಟ್ಟಣ | ಪಬ್ಲಿಕ್ ಶಾಲೆ ವಿಲೀನ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:26 IST
Last Updated 21 ನವೆಂಬರ್ 2025, 6:26 IST
<div class="paragraphs"><p>ಚನ್ನಪಟ್ಟಣ ತಾಲ್ಲೂಕಿನ ಸಂತೆ ಮೊಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚುವುದನ್ನು ವಿರೋಧಿಸಿ ಗ್ರಾಮಸ್ಥರು ಹಾಗೂ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಪದಾಧಿಕಾರಿಗಳು ಶಾಲೆ ಎದುರು ಪ್ರತಿಭಟನೆ ನಡೆಸಿದರು</p></div>

ಚನ್ನಪಟ್ಟಣ ತಾಲ್ಲೂಕಿನ ಸಂತೆ ಮೊಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚುವುದನ್ನು ವಿರೋಧಿಸಿ ಗ್ರಾಮಸ್ಥರು ಹಾಗೂ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಪದಾಧಿಕಾರಿಗಳು ಶಾಲೆ ಎದುರು ಪ್ರತಿಭಟನೆ ನಡೆಸಿದರು

   

ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಕರ್ನಾಟಕ ಪಬ್ಲಿಕ್ ಶಾಲೆಗೆ ವಿಲೀನ ಮಾಡುವ ಹೆಸರಿನಲ್ಲಿ ತಾಲ್ಲೂಕಿನ ಸಂತೆ ಮೊಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಚ್ಚುವುದನ್ನು ವಿರೋಧಿಸಿ ಗ್ರಾಮಸ್ಥರು ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘದ (ಎಐಡಿಎಸ್‌ಒ) ವಿದ್ಯಾರ್ಥಿ ಸಂಘಟನೆ ಪದಾಧಿಕಾರಿಗಳು ಗ್ರಾಮದ ಸರ್ಕಾರಿ ಶಾಲೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಹೊಂಗನೂರಿನ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಹೊಂಗನೂರಿನ ಆರು ಕಿ.ಮೀ. ವ್ಯಾಪ್ತಿಯ 7 ಪ್ರಾಥಮಿಕ ಶಾಲೆಗಳನ್ನು ವಿದ್ಯಾರ್ಥಿ, ಶಿಕ್ಷಕರು ಮತ್ತು ಪರಿಕರ ಸಮೇತ ವಿಲೀನಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ. ಇದು ನಿಜಕ್ಕೂ ಖಂಡನೀಯ. ವಿಲೀನದ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚಲು ನಾವು ಬಿಡುವುದಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಎಐಡಿಎಸ್‌ಒ ಸಂಘಟನೆ ರಾಜ್ಯ ಖಜಾಂಚಿ ಶುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಸರ್ಕಾರದ ಆದೇಶದ ಪ್ರಕಾರ ರಾಜ್ಯದಲ್ಲಿ 800 ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳು ಎಂದು ಗುರುತಿಸಲಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆ ಸುತ್ತಮುತ್ತಲಿನ 1ರಿಂದ 5 ಕಿ.ಮೀ.ವ್ಯಾಪ್ತಿಯ 50ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳನ್ನು ಕೆಪಿಎಸ್ ಶಾಲೆಗಳಲ್ಲಿ ವಿಲೀನಗೊಳಿಸಲಾಗುತ್ತದೆ. ವಿಲೀನದ ಹೆಸರಿನಲ್ಲಿ ಆ ಶಾಲೆಗಳನ್ನು ಮುಚ್ಚಲಾಗುತ್ತದೆ. ಇದರಿಂದ ಸಾವಿರಾರು ಸರ್ಕಾರಿ ಶಾಲೆಗಳು ಮುಚ್ಚಿ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೆಪಿಎಸ್ ಶಾಲೆಗಳನ್ನು ತೆರೆಯುವುದಕ್ಕೆ ವಿರೋಧವಿಲ್ಲ. ಆದರೆ, ಗ್ರಾಮ ಪಂಚಾಯಿತಿಗೆ ಮಾತ್ರ ಒಂದು ಶಾಲೆಗಳನ್ನು ತೆರೆಯುವುದನ್ನು ನಾವು ವಿರೋಧಿಸುತ್ತೇವೆ. ರಾಜ್ಯದಲ್ಲಿ ಒಟ್ಟು 49,600 ಸರ್ಕಾರಿ ಶಾಲೆಗಳಿವೆ. ಆದರೆ, ಗ್ರಾಮ ಪಂಚಾಯಿತಿಗಳು ಇರುವುದು 5,900 ಮಾತ್ರ. ಹೀಗಾದಲ್ಲಿ 5,900 ಶಾಲೆಗಳು ಮಾತ್ರ ಉಳಿಯುತ್ತವೆ. ಉಳಿದ ಶಾಲೆಗಳನ್ನು ಮುಚ್ಚಲು ಸರ್ಕಾರ ಹುನ್ನಾರ ನಡೆಸುತ್ತಿದೆ. ಇಂತಹ ಹುನ್ನಾರಕ್ಕೆ ಸಂಘಟನೆ ಅವಕಾಶ ನೀಡುವುದಿಲ್ಲ. ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂಘಟನೆ ಜಿಲ್ಲಾ ಸಂಚಾಲಕ ರೋಹಿತ್, ಗ್ರಾಮದ ಮುಖಂಡರಾದ ಮಂಜಪ್ಪ, ಜೆ.ರಾಜು, ಹೇಮಂತ್, ಸಂಜಯ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.