ADVERTISEMENT

ಏಳು ತಾಸು ತ್ರೀಫೇಸ್ ವಿದ್ಯುತ್‌ ನೀಡಿ: ಬೆಸ್ಕಾಂ ಇಲಾಖೆಗೆ ಕನಕಪುರ ರೈತರ ಮನವಿ

ಬೆಸ್ಕಾಂ ಇಲಾಖೆಗೆ ಕನಕಪುರ ತಾಲ್ಲೂಕು ರೈತರ ಮನವಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 4:24 IST
Last Updated 24 ಫೆಬ್ರುವರಿ 2023, 4:24 IST
ಕನಕಪುರ ತಾಲ್ಲೂಕಿನಲ್ಲಿ ಹಗಲು ಹೊತ್ತಿನಲ್ಲಿ ರೈತರ ಜಮೀನುಗಳಿಗೆ ನೀರು ಹಾಯಿಸಲು ತ್ರಿಫೇಸ್ ವಿದ್ಯುತ್ ನೀಡುವಂತೆ ರೈತರು ಮನವಿ ಸಲ್ಲಿಸಿದರು 
ಕನಕಪುರ ತಾಲ್ಲೂಕಿನಲ್ಲಿ ಹಗಲು ಹೊತ್ತಿನಲ್ಲಿ ರೈತರ ಜಮೀನುಗಳಿಗೆ ನೀರು ಹಾಯಿಸಲು ತ್ರಿಫೇಸ್ ವಿದ್ಯುತ್ ನೀಡುವಂತೆ ರೈತರು ಮನವಿ ಸಲ್ಲಿಸಿದರು    

ಕನಕಪುರ: ತಾಲ್ಲೂಕಿನಾದ್ಯಂತ ರೈತರ ಜಮೀನುಗಳಿಗೆ ನೀರು ಹಾಯಿಸಲು ಹಗಲು ಹೊತ್ತಿನಲ್ಲಿ ಏಳು ತಾಸು ತ್ರೀಫೇಸ್ ವಿದ್ಯುತ್ ನೀಡಬೇಕು ಎಂದು ರೈತ
ಸಂಘ ಹಾಗೂ ರೇಷ್ಮೆ ಉತ್ಪಾದಕ ಕಂಪನಿ ನೇತೃತ್ವದಲ್ಲಿ ಇಲ್ಲಿನ ಬೆಸ್ಕಾಂ ಇಲಾಖೆಯ ಇಇ ಕಚೇರಿಯಲ್ಲಿ ಗುರುವಾರ ಮನವಿ ಸಲ್ಲಿಸಲಾಯಿತು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚೀಲೂರು ಮುನಿರಾಜು ಮಾತನಾಡಿ, ‘ರಾತ್ರಿ ವೇಳೆ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ತ್ರೀಫೇಸ್‌ ಕರೆಂಟ್‌ ಕೊಟ್ಟರೆ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳುವುದೊ ಅಥವಾ ಜಮೀನಿನಲ್ಲಿ ನೀರು ಕಟ್ಟುವುದೋ ನೀವೇ ಹೇಳಿ’ ಎಂದು ಪ್ರಶ್ನಿಸಿದರು.

ಕನಕಪುರ ತಾಲ್ಲೂಕಿನ ಗ್ರಾಮಗಳು ಕಾಡಂಚಿನಿಂದ ಕೂಡಿವೆ. ಹಗಲು ಹೊತ್ತಿನಲ್ಲೇ ಚಿರತೆ, ಕಾಡಾನೆಗಳು ಗ್ರಾಮಕ್ಕೆ ಲಗ್ಗೆ ಇಡುತ್ತಿವೆ. ಇಂಥದರಲ್ಲಿ ರಾತ್ರಿ ಹೊತ್ತು ಜಮೀನುಗಳಿಗೆ ನೀರು ಹಾಯಿಸಲು ಹೊಲಕ್ಕೆ ಹೋಗುವುದಾದರೂ ಹೇಗೆ. ಸರ್ಕಾರಕ್ಕೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿಯಿದ್ದರೆ, ಹಗಲು ಹೊತ್ತಲ್ಲಿ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ತಾಲ್ಲೂಕಿನ ಬಹುತೇಕ ರೇಷ್ಮೆ ಬೆಳೆಗಾರರು ಕೃಷಿ ಪಂಪ್‌ಸೆಟ್‌ ಅವಲಂಭಿಸಿಯೇ ರೇಷ್ಮೆ ಕೃಷಿ ಮಾಡುತ್ತಾರೆ. ಹೀಗಾಗಿ ಎಲ್ಲರೂ ರೇಷ್ಮೆ ತೋಟಕ್ಕೆ ನೀರು ಕಟ್ಟುತ್ತಾರೆ. ನೀವು ರಾತ್ರಿ ವೇಳೆ ತ್ರೀಫೇಸ್‌ ವಿದ್ಯುತ್‌ ನೀಡಿದರೆ ಹೇಗೆ ಎಂದರು.

ರೈತರ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಬೆಸ್ಕಾಂ ಇಇ ನಾಗರಾಜ್, ಹಗಲಿನಲ್ಲಿಯೇ ರೈತರಿಗೆ ಏಳು ತಾಸು ತ್ರೀಫೇಸ್ ವಿದ್ಯುತ್ ಕೊಡಲು ಪ್ರಯತ್ನಿಸಲಾಗುವುದು ಎಂದರು.

ರೈತ ಸಂಘ ಮತ್ತು ರೇಷ್ಮೆ ರೈತ ಉತ್ಪಾದಕ ಕಂಪನಿಯ ಕರಿಯಪ್ಪ, ಶಿವರಾಜು, ಚಾಮ, ಸತೀಶ್‌, ವೆಂಕಟೇಶ್‌, ಮುಕ್ತರ್‌, ಮುನೇಶ್‌, ಮುನಿಮಾದು, ಶಿವಕುಮಾರ್‌, ಬೋಜೆಗೌಡ, ಸಾಗರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.