
ಕನಕಪುರ: ವಿದ್ಯಾರ್ಥಿಗಳ ಜೀವನದಲ್ಲಿ ಪಿಯು ಅತ್ಯಂತ ನಿರ್ಣಾಯಕ ಘಟ್ಟವಾಗಿದ್ದು ಕಠಿಣ ತಪಸ್ಸು ಮತ್ತು ಏಕಾಗ್ರತೆಯಿಂದ ಉತ್ತಮ ಸಾಧನೆ ಮಾಡಬೇಕು ಎಂದು ಅಬಕಾರಿ ಇಲಾಖೆ ಅಧಿಕ್ಷಕ ಮೋಹನ್ ತಿಳಿಸಿದರು.
ಇಲ್ಲಿನ ರೂರಲ್ ಎಜುಕೇಶನ್ ಸೊಸೈಟಿಯ ದೂಂತೂರು ಮಾರೇಗೌಡ ಸಭಾಂಗಣದಲ್ಲಿ ಶನಿವಾರ ನಡೆದ ರೂರಲ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಕೋರ್ಸಿನ ಬಗ್ಗೆ ಕೀಳರಿಮೆ ಬೇಡ. ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಎಂಜಿನಿಯರ್, ಡಾಕ್ಟರ್ ಆದರೆ ಮಾತ್ರ ಭವಿಷ್ಯ ಚೆನ್ನಾಗಿರುತ್ತದೆ ಎಂಬುದು ಸುಳ್ಳು. ಕಠಿಣ ಪರಿಶ್ರಮ, ಅಚಲವಾದ ಶ್ರದ್ಧೆ ಮತ್ತು ನಿರ್ದಿಷ್ಟ ಗುರಿಯಿಂದ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳು ಜೀವನದ ಗುರಿಯಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಂಡಿರುವವರು ಬಹುತೇಕರು ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಆಗಿದ್ದಾರೆ.
ಶಿಕ್ಷಣದ ಜೊತೆಗೆ ಅಪ್ಪ, ಅಮ್ಮ ಹಾಗೂ ಗುರು, ಹಿರಿಯರನ್ನು ಗೌರವದಿಂದ ಕಾಣುವ ಸಂಸ್ಕಾರ ಮುಖ್ಯ ಎಂದು ಸಂಸ್ಥೆಯ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷೆ ಪ್ರೊ.ರಂಗನಾಯಕಮ್ಮ, ಕಾರ್ಯದರ್ಶಿ ಪುಟ್ಟಸ್ವಾಮಿ, ಖಜಾಂಚಿ ಎಸ್.ಸಿ.ಮಂಜುನಾಥ್, ನಿರ್ದೇಶಕ ಕೆ.ಬಿ.ನಾಗರಾಜು, ಕೃಷಿ ಕಾಲೇಜಿನ ಡೀನ್ ಡಾ.ಟಿ.ಕೆ. ಸಿದ್ದರಾಮೇಗೌಡ, ಪ್ರೊ.ಡಾ.ಟಿ.ಬಿ.ಪುಟ್ಟರಾಜು, ಶಿಕ್ಷಣ ಇಲಾಖೆಯ ತುಕಾರಾಂ,ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರುದ್ರೇಶ್, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಬಿ.ಕೆ.ಕವಿತ, ಉಷಾರಾಣಿ ಭಾಗವಹಿಸಿದ್ದರು.