ADVERTISEMENT

ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಡಾಂಬರೀಕರಣಗೊಂಡ ಆರೇ ತಿಂಗಳಲ್ಲಿ ಗುಂಡಿ ಬಿದ್ದ ಹೆದ್ದಾರಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 10:13 IST
Last Updated 17 ಆಗಸ್ಟ್ 2019, 10:13 IST
ಪ್ರತಿಭಟನಾನಿರತರು ನಗರಸಭೆ ಆಯುಕ್ತೆ ಶುಭಾ ಅವರೊಂದಿಗೆ ವಾಗ್ವಾದ ನಡೆಸಿದರು
ಪ್ರತಿಭಟನಾನಿರತರು ನಗರಸಭೆ ಆಯುಕ್ತೆ ಶುಭಾ ಅವರೊಂದಿಗೆ ವಾಗ್ವಾದ ನಡೆಸಿದರು   

ರಾಮನಗರ: ಈಚೆಗಷ್ಟೇ ಡಾಂಬರೀಕರಣಗೊಂಡಿದ್ದ ಮಾಗಡಿ ರಸ್ತೆಯಲ್ಲಿ ಮತ್ತೆ ಗುಂಡಿಗಳು ಬಿದ್ದಿದ್ದು, ಪುನಃ ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಶರತ್‌ ಶಾಲೆಯ ಮುಂಭಾಗ ಮಾಗಡಿ ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದ ವಿದ್ಯಾರ್ಥಿಗಳು, ಸಾರ್ವಜನಿಕರು ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿ ವಿರುದ್ಧ ಧಿಕ್ಕಾರ ಕೂಗಿದರು. ಕಳೆದ ಆರು ತಿಂಗಳ ಹಿಂದೆ ಮಾಗಡಿ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿತ್ತು. ಆದರೆ ವರ್ಷ ಕಳೆಯುವ ವೇಳೆಗೆ ಡಾಂಬರು ಸಂಪೂರ್ಣವಾಗಿ ಕಿತ್ತು ಬಂದಿದೆ. ಮಳೆಯಿಂದಾಗಿ ರಸ್ತೆಯಲ್ಲಿ ಪಾದಚಾರಿಗಳು ನಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ರಸ್ತೆಗೆ ಹೊಂದಿಕೊಂಡಂತೆ ಹಲವು ಶಾಲೆ, ಕಾಲೇಜುಗಳಿವೆ. ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗಕ್ಕೆ ಬರುತ್ತಾರೆ. ಆದರೆ ರಸ್ತೆಯಲ್ಲಿಯೇ ನೀರು ನಿಲ್ಲುವ ಕಾರಣ ಎಲ್ಲರಿಗೂ ನಿತ್ಯ ಕೆಸರಿನ ಸ್ನಾನವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯ ಪಕ್ಕ ಒಳಚರಂಡಿ ಇಲ್ಲದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತದೆ. ಈ ಬಗ್ಗೆ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ADVERTISEMENT

ಘಟನೆಯಿಂದಾಗಿ ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಪ್ರತಿಭಟನೆ ತಡೆದು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಆಯುಕ್ತೆ ಜೊತೆ ವಾಗ್ವಾದ: ಸ್ಥಳಕ್ಕೆ ಧಾವಿಸಿದ ನಗರಸಭೆ ಆಯುಕ್ತೆ ಶುಭಾ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಂತೆ ಆಗ್ರಹಿಸಿದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶುಭಾ ‘ಬಸ್ ನಿಲ್ದಾಣ ಪಕ್ಕದ ಸೇತುವೆಯಿಂದ ಶಾಂತಿಲಾಲ್ ಲೇಔಟ್ ತನಕ ಲೋಕೋಪಯೋಗಿ ಇಲಾಖೆಯು ಈ ರಸ್ತೆಯನ್ನು ನಿರ್ಮಾಣ ಮಾಡಿದೆ. ಇದಕ್ಕೂ ನಗರಸಭೆಗೂ ಸಂಬಂಧ ಇಲ್ಲ. ಆದಾಗ್ಯೂ ಮಳೆ ಬಂದರೇ, ರಸ್ತೆಯಲ್ಲಿ ನೀರು ನಿಲ್ಲದಂತೆ ತಾತ್ಕಾಲಿಕ ಕ್ರಮ ಕೈಗೊಂಡಿದ್ದೇವೆ’ ಎಂದರು.

ಪ್ರತಿಭಟನೆಯಿಂದಾಗಿ ಮಾಗಡಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರವು ಅಸ್ತವ್ಯಸ್ತಗೊಂಡಿತು. ಬಸ್‌ಗಳು, ಕಾರುಗಳು ಸಾಲಾಗಿ ನಿಂತಿದ್ದವು. ಕೆಲವು ವಾಹನ ಸವಾರರು ಮಾರ್ಗ ಬದಲಿಸಿ ಸಂಚರಿಸಿದರು.

**
ಹೊಸ ರಸ್ತೆಗೆ ಅಧೋಗತಿ
ಡಾಂಬರೀಕರಣಗೊಂಡ ತಿಂಗಳುಗಳ ಒಳಗೇ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸುಮಾರು ಎರಡು ಕಿ.ಮೀ. ಉದ್ದಕ್ಕೆ ಹೊಸತಾಗಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಆದರೆ ಶರತ್‌ ಶಾಲೆ ಸಮೀಪ ಸೇರಿದಂತೆ ಅಲ್ಲಲ್ಲಿ ಗುಂಡಿಗಳು ಬಿದ್ದಿರುವುದು ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸುವಂತೆ ಇದೆ. ಇದೇ ರಸ್ತೆಯಲ್ಲಿ ಬಸ್‌ ನಿಲ್ದಾಣ ಸಮೀಪ ಸೇತುವೆ ಡೆಕ್‌ ನಿರ್ಮಾಣ ಕಾಮಗಾರಿಯ ಬಳಿಕ ವಾರಗಳ ಹಿಂದಷ್ಟೇ ಡಾಂಬರ್‌ ಹಾಕಲಾಗಿತ್ತು. ಅಲ್ಲಿಯೂ ಈಗಾಗಲೇ ಗುಂಡಿ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.