ADVERTISEMENT

ನಕಲಿ ವೈದ್ಯರ ನಿಯಂತ್ರಣಕ್ಕೆ ಆಗ್ರಹ

ಖಾಸಗಿ ವೈದ್ಯಕೀಯ ಪ್ರತಿಷ್ಠಾಪನೆಗಳ ಬಳಗದ ತಾಲ್ಲೂಕು ಶಾಖೆ ಆರಂಭ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2018, 15:17 IST
Last Updated 23 ಸೆಪ್ಟೆಂಬರ್ 2018, 15:17 IST
ಡಾ.ಶ್ರೀಧರ್‌ ಅವರು ಎಪಿಎಂಇ ತಾಲ್ಲೂಕು ಶಾಖೆ ಉದ್ಘಾಟಿಸಿದರು.
ಡಾ.ಶ್ರೀಧರ್‌ ಅವರು ಎಪಿಎಂಇ ತಾಲ್ಲೂಕು ಶಾಖೆ ಉದ್ಘಾಟಿಸಿದರು.   

ಮಾಗಡಿ: ‘ವೈದ್ಯೋನಾರಾಯಣ ಹರಿ ಎಂಬ ತತ್ವದಲ್ಲಿ ನಂಬಿಕೆ ಇಟ್ಟುಕೊಂಡು ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವುದೇ ನಮ್ಮ ಬಳಗದ ಮಹತ್ವದ ಉದ್ದೇಶವಾಗಿದೆ’ ಎಂದು ಖಾಸಗಿ ವೈದ್ಯಕೀಯ ಪ್ರತಿಷ್ಠಾಪನೆಗಳ ಬಳಗದ ತಾಲ್ಲೂಕು ಶಾಖೆಯ ಅಧ್ಯಕ್ಷ ಡಾ.ನಾಗರಾಜ್‌ ಉಪಾಧ್ಯಾಯ ಅಭಿಪ್ರಾಯ ಪಟ್ಟರು.

ಖಾಸಗಿ ವೈದ್ಯಕೀಯ ಪ್ರತಿಷ್ಠಾಪನೆಗಳ ಬಳಗದ ತಾಲ್ಲೂಕು ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕ್ರಿಯೆ ಮತ್ತು ಕರ್ಮಗಳನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಬೇಕು ಎಂದು ಜಗದ್ಗುರು ಶ್ರೀಕೃಷ್ಣನ ಬೋಧನೆ ನಮಗೆಲ್ಲರಿಗೂ ಆದರ್ಶವಾಗಿದೆ. ನಮ್ಮ ರಕ್ಷಣೆಗೆ ಮಾತ್ರ ಬಳಗದ ಸ್ಥಾಪನೆಯಾಗಿಲ್ಲ’ ಎಂದರು.

ADVERTISEMENT

‘ಬಡವಿದ್ಯಾರ್ಥಿಗಳನ್ನು ದತ್ತು ಪಡೆದು ಶಿಕ್ಷಣ ನೀಡ‌ಲಾಗುತ್ತಿದೆ. ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿದ್ದೇವೆ. ಖಾಸಗಿ ವೈದ್ಯರು ಮತ್ತು ಸಮಾಜದ ನಡುವೆ ಪರಸ್ಪರ ಸ್ನೇಹ, ಸೌಹಾರ್ದ ಮತ್ತು ಉತ್ತಮ ಬಾಂಧವ್ಯ ನಿರ್ಮಾಣ ಮಾಡಲಾಗುವುದು. ನೂತನ ಆವಿಷ್ಕಾರ ಮತ್ತು ಜ್ಞಾನದ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ’ ಎಂದರು.

‘ವೈದ್ಯರ ಮೇಲಿನ ನಿರಂತರ ದೌರ್ಜನ್ಯ, ಹಲ್ಲೆ, ಕಿರುಕುಳಗಳನ್ನು ತಡೆಗಟ್ಟಲು ಹೋರಾಟ ಮಾಡಲಾಗುತ್ತಿದೆ. ನಕಲಿ ವೈದ್ಯರ ಹಾವಳಿ ತಡೆಗಟ್ಟಿ, ಅವರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸುವುದು. ವೃತ್ತಿನಿರತರಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಸುವುದು. ರೋಗಿಯೇ ನನ್ನ ಪ್ರಥಮ ಆದ್ಯತೆ ಎಂದು ತಿಳಿದು ಉತ್ತಮ ಸೇವೆ ನೀಡುವುದು. ವೃತ್ತಿನಿರತರಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಅಹರ್ನಿಶಿ ದುಡಿಯುವುದು ನಮ್ಮೆಲ್ಲರ ಪ್ರಥಮ ಸೇವೆಯಾಗಿದೆ’ ಎಂದು ಅವರು ತಿಳಿಸಿದರು.

ಬಳಗದ ಉಪಾಧ್ಯಕ್ಷ ಡಾ. ಎಲ್‌.ಎಸ್‌.ಮಾಲತೇಶ್‌ ಮಾತನಾಡಿ, ‘ನಮ್ಮನ್ನೇ ನಂಬಿ ಕ್ಲಿನಿಕ್‌ಗಳಿಗೆ ಬರುವ ರೋಗಿಗಳಿಗೆ ಉತ್ತಮ ಸೇವೆ ಒದಗಿಸಿ ಆರೋಗ್ಯ ನೀಡೋಣ. ವೈದ್ಯಕೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ. ಹಣಕ್ಕಿಂತ ಸೇವೆ ಮುಖ್ಯವೆಂದು ನಂಬಿಕೊಂಡು ವೈದ್ಯೋನಾರಾಯಣ ಹರಿ ಎಂಬ ಧ್ಯೇಯವಾಕ್ಯವನ್ನು ಪಾಲಿಸೋಣ. ಒಬ್ಬರನ್ನು ಇನ್ನೊಬ್ಬರು ದೂಷಿಸುವುದು ಬೇಡ’ ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್‌ ಮಾತನಾಡಿ, ನಕಲಿ ವೈದ್ಯರನ್ನು ನಿಯಂತ್ರಿಸಬೇಕು. ಸೋಲೂರಿನಲ್ಲಿ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದ ನಕಲಿ ವೈದ್ಯರ ಮೇಲೆ ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ರಾತ್ರಿ ವೇಳೆ ಪಟ್ಟಣದಲ್ಲಿ ಒಂದಾದರು ಕ್ಲಿನಿಕ್‌ ತೆರೆದು ವೈದ್ಯಕೀಯ ಸೇವೆ ನೀಡಬೇಕು ಎಂದರು.

ಜಿಲ್ಲಾ ಐಎಂಎ ಅಧ್ಯಕ್ಷ ಡಾ.ಶ್ರೀಧರ್‌ ಬಳಗ ಉದ್ಘಾಟಿಸಿ ಮಾತನಾಡಿ ಸರ್ಕಾರಿ ಮತ್ತು ಖಾಸಗಿ ವೈದ್ಯರ ನಡುವೆ ಸಂವಹನ ಅತ್ಯಗತ್ಯ. ವೈದ್ಯರ ಮೇಲೆ ನಡೆಯುವ ಹಲ್ಲೆ ದೌರ್ಜನ್ಯಗಳನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರೋಗವಾಸಿ ಮಾಡಲು ಚಿಕಿತ್ಸೆ ನೀಡುವುದು ವೈದ್ಯರು ನಂಬಿರುವ ದೇವರ ಸೇವೆ ಎಂಬುದನ್ನು ಮರೆತು ಸಾರ್ವಜನಿಕರು ವೈದ್ಯರನ್ನು ಹಿಡಿದು ಬಡಿಯುವುದು ನಾಗರಿಕರ ಸಮಾಜದ ಹೇಯ ಕೃತ್ಯ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಐಎಂಎ ಘಟಕ ಶೀಘ್ರವಾಗಿ ಆರಂಭವಾಗಲಿ ಎಂದರು.

ಡಾ.ಮಲವೇಗೌಡ ವೈದ್ಯರಲ್ಲೂ ತಪ್ಪುಗಳಾಗುತ್ತಿವೆ ಎಂಬುದನ್ನು ನಾವು ಮರೆಯಬಾರದು. ವೈದ್ಯಕೀಯ ಕಟ್ಟಳೆ ಮೀರಿ ಚಿಕಿತ್ಸೆ ನೀಡಬಾರದು. ಪೊಲೀಸರು, ವೈದ್ಯರು, ರಾಜಕಾರಣಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಚಿತ್ರನಟಿ ಶ್ರುತಿ ತಂದೆ ಜಿ.ವಿ. ಕೃಷ್ಣ ಮಾತನಾಡಿ, ‘ಮಾಗಡಿ ಜನರು ನಮಗೆ ಆಶ್ರಯ ನೀಡಿದ್ದಾರೆ. ಅವರ ಸೇವೆಯನ್ನು ಮರೆಯುವುದಿಲ್ಲ ಎಂದರು.

ಸಾಗರ್‌ ಆಸ್ಪತ್ರೆಯ ಡಾ.ಎಲ್‌.ಎನ್‌.ಪ್ರಸಾದ್‌, ಬಳಗದ ಉಪಾಧ್ಯಕ್ಷ ಡಾ.ಜಿ.ಟಿ,ಸತ್ಯನಾರಾಯಣರಾಜು,ಕಾರ್ಯಾಧ್ಯಕ್ಷ ಡಾ.ಬೆಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ರಾಘವನ್‌, ಖಜಾಂಚಿ ಡಾ.ಕೆ.ಎಚ್‌.ಹನುಮಂತರಾಜು, ಸಂಚಾಲಕ ಡಾ.ಸುರೇಶ್‌ ಕುಮಾರ್‌,ಜಂಟಿ ಕಾರ್ಯದರ್ಶಿ ಫೈರೋಜ್‌ ಪಾಷಾ ವೇದಿಕೆಯಲ್ಲಿದ್ದರು.

ನಿರ್ದೇಶಕ ಮಂಡಳಿಯ ಡಾ.ಎಸ್‌.ಕಲಾವತಿ, ಡಾ.ಮಾಲಿನಿ ಎನ್‌ ಉಪಾಧ್ಯಾಯ, ಡಾ.ಜ್ಯೋತಿ ರಾಜು,ಡಾ.ವಿದ್ಯಾರಾಘವನ್‌, ಡಾ.ಅನ್ನಪೂರ್ಣ, ಡಾ,ಚಂದ್ರಲೇಖ, ಡಾ.ಮುದಾಳೆ ಹಾವಗಿರಾಯರು,ಡಾ.ಮಂಜುನಾಥ ಬೆಟಗೇರಿ, ಡಾ.ಐ.ಎಂ.ಪ್ರಕಾಶ್‌,ಎಲ್‌.ಲೋಕೇಶ್‌, ಎಚ್‌.ಕುಮಾರ್‌, ಡಾ.ಕೆ.ಬಿ.ಜಯಣ್ಣ, ಡಾ.ಶ್ರೀನಿವಾಸ್‌,ಡಾ.ರಾಜಾಸಾಬ್‌ ಮುಲ್ಲಾ, ಡಾ.ಎಸ್‌.ರಾಜು, ಡಾ.ಸ್ವಾಮಿ, ಡಾ,ರಾಜಶೇಖರ್‌, ಡಾ.ಅರುಣ್‌ ಗಿರಿಸಾಗರ್‌, ಡಾ.ಅನಿಲ್‌ ಕುಮಾರ್‌, ಮೊಹಮದ್‌ ಜಾಫರ್‌. ರಾಜು.ಜಿ.ರೇಣುಕಮ್ಮ, ಎನ್‌.ರೇಖಾ ಮತ್ತು ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ಹಾಗೂ ಔಷಧಿ ಮಾರಾಟಗಾರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.