ADVERTISEMENT

ಮಾಗಡಿ|ರಾಗಿ ಬೆಳೆಗೆ ಬೇಕು ಹದ ಮಳೆ:ಕೆಂಪು ರಾಗಿಗೆ ಹೊರ ರಾಜ್ಯಗಳಲ್ಲೂ ಭಾರಿ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 2:25 IST
Last Updated 12 ನವೆಂಬರ್ 2025, 2:25 IST
ಮಾಗಡಿ ತಾಲ್ಲೂಕಿನ ಚಕ್ರಬಾವಿ ಗ್ರಾಮದಲ್ಲಿ ಬೆಳೆದಿರುವ ರಾಗಿ ಬೆಳೆ
ಮಾಗಡಿ ತಾಲ್ಲೂಕಿನ ಚಕ್ರಬಾವಿ ಗ್ರಾಮದಲ್ಲಿ ಬೆಳೆದಿರುವ ರಾಗಿ ಬೆಳೆ   

ಮಾಗಡಿ: ತಾಲ್ಲೂಕಿನಲ್ಲಿ ಸುಮಾರು 30,000 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ರಾಗಿ ಬೆಳೆಯು ಇನ್ನೂ ಎರಡು ಹಂತದ ಹದವಾದ ಮಳೆ ಮೇಲೆ ನಿಂತಿದೆ. ಆದರೂ, ರೈತರು ಭರ್ಜರಿ ಬೆಳೆ ನಿರೀಕ್ಷೆಯಲ್ಲಿದ್ದಾರೆ. ಮಳೆ ಕೈಕೊಟ್ಟರೆ ಬೆಳೆ ಉತ್ಪಾದನೆಯಲ್ಲಿ ಶೇ40-50 ಇಳಿಕೆ ಆಗುವ ಆತಂಕದಲ್ಲಿ ಇದ್ದಾರೆ ರೈತರು.

ಜುಲೈಯಲ್ಲಿ ಬಿತ್ತನೆ ಮಾಡಿದ ರಾಗಿ ಬೆಳೆ ಕೊಯ್ಲುಗೆ ಸಿದ್ಧವಾಗಿದೆ. ಇನ್ನೂ ಸ್ವಲ್ಪ ಮಳೆ ಬಂದರೆ ಉತ್ತಮ ಇಳುವರಿ ನಿರೀಕ್ಷಿಸಬಹುದು. ಆದರೆ, ಆಗಸ್ಟ್‌ ತಿಂಗಳಲ್ಲಿ ಬಿತ್ತನೆ ಮಾಡಿದ ಬೆಳೆಗೆ ಮಳೆ ಅತ್ಯವಶ್ಯ. ಈ ಎರಡೂ ಹಂತದ ಬೆಳೆಗಳಿಗೂ ಸರಿಯಾದ ಮಳೆ ಬಂದರೆ ಶೇ90 ಭರ್ಜರಿ ಬೆಳೆ ನಿರೀಕ್ಷೆ ಇದೆ. ರೈತರು ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ. ‌‌

ಮಾಗಡಿ ರಾಗಿ ಪ್ರಸಿದ್ಧಿ: ತಾಲ್ಲೂಕು ಅರೆ-ಮಲೆನಾಡು ಪ್ರದೇಶ. ರಾಗಿ ಬೆಳೆಗೆ ಹೆಸರುವಾಸಿ. ಎಂಆರ್-1, ಜಿಪಿ-28 ಮತ್ತು ಎಂಎಲ್-365 ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗಿದೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲೂ ಮಾಗಡಿ ಕೆಂಪು ರಾಗಿಗೆ ಉತ್ತಮ ಬೇಡಿಕೆ ಮತ್ತು ಬೆಲೆ ಇದೆ. ಸರ್ಕಾರವೂ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡುತ್ತದೆ.

ADVERTISEMENT

ಹಸಿರಿನಿಂದ ಕಂಗೊಳಿಸುವ ಹೊಲಗಳು: ತಾಲ್ಲೂಕಿನ ಕುದೂರು, ತಿಪ್ಪಸಂದ್ರ, ಸೋಲೂರು, ಮಾಡಬಾಳ್, ಕಸಬಾ ಹೋಬಳಿಗಳಲ್ಲಿ ರಾಗಿ, ಭತ್ತ, ಅವರೆ ಬೆಳೆಯಲಾಗಿದೆ. ರಾಗಿ ಕಾಳು ಕಟ್ಟಲು ಆರಂಭಿಸಿದೆ. ಅವರೆ, ಅಲಸಂದೆ, ಜೋಳ, ಸಾಸಿವೆ, ತೊಗರಿ ಮಿಶ್ರ ಬೆಳೆಯಾಗಿ ಬೆಳೆಯುವುದು ಇಲ್ಲಿ ಸಾಮಾನ್ಯ. ಹೊಲಗಳು ಹಸಿರಿನಿಂದ ಕಂಗೊಳಿಸುತ್ತಿವೆ.

ಕೀಟನಾಶಕ ಸಿಂಪಡಣೆ ಮತ್ತು ಕೊಯ್ಲು: ಹಸಿರು ಹುಲ್ಲಿನ ಜತೆಗೆ ಮಿಶ್ರ ಬೆಳೆ ಬಂದಿರುವುದರಿಂದ ಕೀಟಬಾಧೆ ಆತಂಕವೂ ರೈತರನ್ನು ಬಾಧಿಸುತ್ತಿದೆ. ಇದರಿಂದಾಗಿ ಕೃಷಿ ಇಲಾಖೆ ಸೂಚನೆ ಮೇರೆಗೆ ಕೀಟನಾಶಕ ಸಿಂಪಡಣೆ ಕಾರ್ಯವನ್ನು ರೈತರು ಆರಂಭಿಸಿದ್ದಾರೆ.

ಈಗಾಗಲೇ ಮೂರು ಹಂತದಲ್ಲಿ ರಾಗಿ ಕೊಯ್ಲು ಆರಂಭವಾಗಿದೆ. ಮುಂಚಿತವಾಗಿ ಬಿತ್ತನೆಯಾದ ರಾಗಿ ಕೊಯ್ಲಿಗೆ ಬಂದಿದ್ದರೆ, ತಡವಾಗಿ ಬಿತ್ತನೆಯಾದ ಬೆಳೆ 15-20 ದಿನಗಳಲ್ಲಿ ಕೊಯ್ಲಿಗೆ ಬರುವ ನಿರೀಕ್ಷೆ ಇದೆ. ಬಹುತೇಕ ರೈತರು ಈಗ ಕೊಯ್ಲು ಯಂತ್ರ ಬಳಸುತ್ತಿದ್ದಾರೆ. ಆದರೆ, ಯಂತ್ರದ ಕೊಯ್ಲಿನಿಂದ ಸುಮಾರು ಶೇ10 ರಾಗಿ ಜಮೀನಿನಲ್ಲೇ ಉಳಿದು ಹಾಳಾಗುತ್ತಿದೆ ಎಂಬ ಆತಂಕವನ್ನೂ ರೈತರು ವ್ಯಕ್ತಪಡಿಸಿದ್ದಾರೆ.

ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ರಾಗಿ ಬೆಳೆಗೆ‌ ನಷ್ಟ ಉಂಟಾಗಲಿದೆ. ಶೇ 50ರಷ್ಟು ಮಾತ್ರ‌ ಬೆಳೆ ನಿರೀಕ್ಷೆ ಮಾಡಬಹುದು
ಮಹೇಶ್ ಪ್ರಗತಿರ ರೈತ ಚಕ್ರಬಾವಿ
ತಾಲೂಕಿನಲ್ಲಿ ಬೆಳೆಯುವ ರಾಗಿಗೆ ಸಾಕಷ್ಟು ಬೇಡಿಕೆ ಇದೆ. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಮಳೆ ನಿರೀಕ್ಷೆಯಲ್ಲಿ ರೈತರು ಇದ್ದಾರೆ
ವಿಜಯ ಶವಣೂರು ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.