
ರಾಮನಗರ: ‘ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರೈತರಿಂದ ರಾಗಿ ಮತ್ತು ಭತ್ತ ಖರೀದಿಸಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಂಎಸ್‌ಪಿ ಯೋಜನೆಯಡಿ ರಾಗಿ ಮತ್ತು ಭತ್ತ ಖರೀದಿಸಲು ನಿಗದಿಯಾಗಿರುವ ಕಾರ್ಯಪಡೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
12,265 ನೋಂದಣಿ: ಸದ್ಯ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದುವರೆಗೆ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಹಾರೋಹಳ್ಳಿ, ಮಾಗಡಿ, ಕನಕಪುರ ಸೇರಿದಂತೆ ಐದೂ ತಾಲ್ಲೂಕುಗಳ ಒಟ್ಟು 12,265 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇವರಿಂದ 2,88,284 ಕ್ವಿಂಟಲ್ ರಾಗಿ ಖರೀದಿಸಲಾಗುವುದು ಎಂದು ಆಹಾರ ಇಲಾಖೆ ಉಪ ನಿರ್ದೇಶಕಿ ಶಿಲ್ಪಾ ಸಭೆಗೆ ಮಾಹಿತಿ ನೀಡಿದರು.
ಅದಕ್ಕೆ ಜಿಲ್ಲಾಧಿಕಾರಿ, ‘ರೈತರಿಂದ ಖರೀದಿಸುವ ರಾಗಿಯನ್ನು ಸುರಕ್ಷಿತವಾಗಿ ಸಂಗ್ರಹಣೆ ಮಾಡಲು ಹಾಗೂ ದಾಸ್ತಾನಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಯವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು. ಖರೀದಿ ಕೇಂದ್ರಗಳಲ್ಲಿ ರೈತರು ಮಾತ್ರ ಹಾಜರಿರುವಂತೆ ನೋಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.
‘ಸರ್ಕಾರ ಪ್ರತಿ ಕ್ವಿಂಟಲ್ ರಾಗಿಗೆ ₹4,886, ಸಾಮಾನ್ಯ ಭತ್ತಕ್ಕೆ ₹2,369 ಹಾಗೂ ಗ್ರೇಡ್–ಎ ಭತ್ತಕ್ಕೆ ₹2,389 ಬೆಂಬಲ ಬೆಲೆ ನಿಗದಿಪಡಿಸಿದೆ. ಖರೀದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ರೈತರೇ ನೇರವಾಗಿ ರಾಗಿ ಖರೀದಿಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಪ್ರತಿ ತಾಲ್ಲೂಕಿಗೆ ಒಂದರಂತೆ 5 ಖರೀದಿ ಕೇಂದ್ರ ಮತ್ತು ಸಂಗ್ರಹಣ ಕೇಂದ್ರಗಳನ್ನು ತಿಂಗಳಾಂತ್ಯದೊಳಗೆ ತೆರೆಯಲಾಗುವುದು ಎಂದರು.
ಕ್ಯಾಮೆರಾ ಅಳವಡಿಕೆಗೆ ಸೂಚನೆ: ‘ಕನಕಪುರ ತಾಲ್ಲೂಕಿನ ಖರೀದಿ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಕಳೆದ ವರ್ಷ ತಮಿಳುನಾಡಿನ ರಾಗಿಯನ್ನು ಕನಕಪುರ ತಾಲ್ಲೂಕಿನ ಖರೀದಿ ಕೇಂದ್ರಕ್ಕೆ ತರುತ್ತಿರುವ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಹೊರ ರಾಜ್ಯದ ರೈತರು ಬಾರದಂತೆ ನಿಗಾ ಇಡಬೇಕು’ ಎಂದು ಸಲಹೆ ನೀಡಿದರು.
‘ಮಾಗಡಿ ತಾಲ್ಲೂಕಿನಲ್ಲಿ ಹೆಚ್ಚು ರಾಗಿ ಖರೀದಿ ನಡೆಯುವುದರಿಂದ ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಖರೀದಿ ಕೇಂದ್ರ ತೆರೆಯಲು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಉಪ ಏಜೆನ್ಸಿಗಳ ಮೂಲಕ ಖರಿದಿ ಪ್ರಕ್ರಿಯೆ ನಡೆಸದೆ ಕೆಎಪ್‌ಸಿಎಸ್‌ಸಿ ಮುಖಾಂತರವೇ ಖರೀದಿ ಪ್ರಕ್ರಿಯೆ ನಡೆಸಬೇಕು. ಒಟ್ಟಾರೆ ಎಂಎಸ್‌ಪಿ ಯೋಜನೆ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು’ ಎಂದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಅಂಬಿಕಾ, ಕೆಎಪ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕರು, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು, ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು, ಖರೀದಿ ಅಧಿಕಾರಿಗಳು ಹಾಗೂ ಇತರರು ಇದ್ದರು.
ಗುಣಮಟ್ಟ ಪರಿವೀಕ್ಷಕರು ಗುಣಮಟ್ಟದ ರಾಗಿ ಖರೀದಿಸಬೇಕು. ಗುಣಮಟ್ಟದಲ್ಲಿ ಏನಾದರೂ ವ್ಯತ್ಯಾಸವಾದದರೆ ಕಳಪೆ ರಾಗಿ ಖರೀದಿಸಿದರೆ ಪರಿವೀಕ್ಷಕರು ಹಾಗೂ ಖರೀದಿ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದುಯಶವಂತ್ ವಿ. ಗುರುಕರ್ ಜಿಲ್ಲಾಧಿಕಾರಿ
‘ನಿಗದಿತ ಅವಧಿಯಲ್ಲಿ ಹಣ ಪಾವತಿಸಿ’
‘ರಾಗಿ ಹಾಗೂ ಭತ್ತ ನೀಡಿದ ರೈತರಿಗೆ ನಿಗದಿತ ದಿನಾಂಕದೊಳಗೆ ಹಣ ಪಾವತಿಸಬೇಕು. ಖರೀದಿ ಕೇಂದ್ರಗಳ ಮುಂಭಾಗ ಬ್ಯಾನರ್ ಅಳವಡಿಸಿ ನೋಡಲ್ ಅಧಿಕಾರಿಗಳ ಹೆಸರು ಹಾಗೂ ಅವರ ದೂರವಾಣಿ ಸಂಖ್ಯೆ ಪ್ರದರ್ಶಿಸಬೇಕು. ಖರೀದಿ ಕೇಂದ್ರಗಳಲ್ಲಿ ರೈತರಿಗೆ ನೆರಳು ಕುಡಿಯುವ ನೀರು ಸೇರಿದಂತೆ ಇತರ ಮೂಲಸೌಕರ್ಯ ಒದಗಿಸಬೇಕು’ ಎಂದು ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.