ADVERTISEMENT

ರಾಮನಗರ: ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2023, 14:21 IST
Last Updated 5 ಸೆಪ್ಟೆಂಬರ್ 2023, 14:21 IST
ರಾಮನಗರದಲ್ಲಿ ಮಂಗಳವಾರ ಸುರಿದ ಮಳೆಯಿಂದಾಗಿ ಛತ್ರಿ ಹಿಡಿದು ಸಾಗಿದ ವಿದ್ಯಾರ್ಥಿಗಳು
ರಾಮನಗರದಲ್ಲಿ ಮಂಗಳವಾರ ಸುರಿದ ಮಳೆಯಿಂದಾಗಿ ಛತ್ರಿ ಹಿಡಿದು ಸಾಗಿದ ವಿದ್ಯಾರ್ಥಿಗಳು   

ರಾಮನಗರ: ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕುದೂರು ಸೇರಿದಂತೆ ವಿವಿಧೆಡೆ ಮಂಗಳವಾರ ಸಂಜೆ ಸಾಧಾರಣ ಮಳೆ ಸುರಿಯಿತು. ಕೆಲವೆಡೆ ತುಂತುರು ಮಳೆಯಾಗಿದ್ದರೆ, ಉಳಿದೆಡೆ ಸಾಧಾರಣವಾಗಿ ಸುರಿದಿದೆ.

ರಾಮನಗರದಲ್ಲಿ ಸತತ ಐದು ದಿನಗಳಿಂದ ನಗರದ ಮೇಲೆ ವರುಣ ಕೃಪೆ ತೋರಿದ್ದು, ರೈತರ ಮೊಗದಲ್ಲಿ ಸಂತಸ ಕಂಡುಬಂತು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣದ ಜೊತೆಗೆ ಸೆಕೆ ಇತ್ತು. ಸಂಜೆ 5.30ರ ಸುಮಾರಿಗೆ ನಿಧಾನವಾಗಿ ಆಗಸದಲ್ಲಿ ಸಣ್ಣದಾಗಿ ಶುರುವಾದ ಮಳೆ, ರಾತ್ರಿವರೆಗೆ ಕೆಲ ಹೊತ್ತು ಸಾಧಾರಣವಾಗಿ ಸುರಿಯಿತು.

ಮಳೆಯಿಂದಾಗಿ ಜನರು ಛತ್ರಿ ಹಿಡಿದು ಓಡಾಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ನಿರಂತರ ಕುಡಿಯುವ ನೀರು ಯೋಜನೆ ಕಾಮಗಾರಿ ನಡೆಯುತ್ತಿರುವ ನಗರದ ಮಾರ್ಕೆಟ್ ರಸ್ತೆ, ಎಂ.ಜಿ. ರಸ್ತೆ, ವಿವೇಕಾನಂದ ಸೇರಿದಂತೆ ಹಲವು ರಸ್ತೆಗಳು ಮಳೆಯಿಂದಾಗಿ ಕೆಸರು ಗದ್ದೆಗಳಾದವು. ವಾಹನಗಳ ಸವಾರರು ಹಾಗೂ ಪಾದಚಾರಿಗಳು ಪರದಾಡಿದರು.

ADVERTISEMENT

ಬೆಂಗಳೂರು–ಮೈಸೂರು ಹೆದ್ದಾರಿಯ ಕೆಲವೆಡೆ ಸ್ವಲ್ಪ ಹೊತ್ತು ನೀರು ನಿಂತಿದ್ದರಿಂದ ವಾಹನಗಳ ಓಡಾಟಕ್ಕೆ ಸ್ವಲ್ಪ ತೊಂದರೆಯಾಯಿತು. ಕೃಷಿ ಚಟುವಟಿಕೆಗಳಿಗಾಗಿ ಮಳೆ ನಿರೀಕ್ಷೆಯಲ್ಲಿದ್ದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಜಮೀನಿನಲ್ಲಿ ಬಿತ್ತನೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಮಳೆಯಿಂದಾಗಿ ಅನುಕೂಲವಾಯಿತು.

‘ಐದು ದಿನಗಳಿಂದ ಸ್ವಲ್ಪ ಹೊತ್ತು ಸುರಿಯುತ್ತಿರುವ ಮಳೆಯು, ವರುಣನ ಮುನಿಸಿನಿಂದ ಚಿಂತೆಗೀಡಾಗಿದ್ದ ರೈತರ ಮೊಗದಲ್ಲಿ ಖುಷಿ ತಂದಿದೆ. ಈ ತಿಂಗಳು ಹೀಗೆಯೇ ಸುರಿದರೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಕೆರೆ–ಕಟ್ಟೆಗಳು ಹಾಗೂ ನದಿಗಳಿಗೆ ಜೀವ ಬರಲಿದೆ. ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ಸಿಗಲಿದೆ’ ಎಂದು ತಾಲ್ಲೂಕಿನ ಪಾಲಭೋವಿದೊಡ್ಡಿಯ ರೈತ ಚಂದ್ರು ಹೇಳಿದರು.

ಕುದೂರು ವರದಿ: ಕುದೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಜೆ ಧಾರಾಕಾರವಾಗಿ ಮಳೆ ಸುರಿಯಿತು. ವರುಣನ ಅಬ್ಬರಕ್ಕೆ ತಗ್ಗು ರಸ್ತೆಗಳು ಜಲಾವೃತವಾದವು. ದ್ವಿಚಕ್ರ ವಾಹನಗಳ ಸವಾರರು ಮತ್ತು ಪಾದಚಾರಿಗಳು ಮಳೆಯಿಂದ ನೆನೆಯದಂತೆ ಮರಗಳು ಹಾಗೂ ರಸ್ತೆ ಬದಿಯ ಕಟ್ಟಡಗಳ ಬದಿ ಆಶ್ರಯ ಪಡೆದರು.

ಕುದೂರಿನಲ್ಲಿ ಮಂಗಳವಾರ ಧಾರಾಕಾರ ಮಳೆ  ಸುರಿಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.