ADVERTISEMENT

ಅಕಾಲಿಕ ಮಳೆ, ಶೀತಗಾಳಿ l ಮಾವು ಫಸಲಿಗೆ ಮಳೆ ಆತಂಕ

ಇಳುವರಿ ಕುಂಠಿತವಾಗುವ ಭೀತಿಯಲ್ಲಿ ಕೃಷಿಕರು

ಆರ್.ಜಿತೇಂದ್ರ
Published 24 ನವೆಂಬರ್ 2022, 18:09 IST
Last Updated 24 ನವೆಂಬರ್ 2022, 18:09 IST
ರಾಮನಗರ ತಾಲ್ಲೂಕಿನ ಬಿಳಗುಂಬ ಗ್ರಾಮದ ಬಳಿಯ ಹೊಲವೊಂದರಲ್ಲಿ ಹೂ ಬಿಡುವ ಹಂತದಲ್ಲಿರುವ ಮಾವಿನ ಮರ
ರಾಮನಗರ ತಾಲ್ಲೂಕಿನ ಬಿಳಗುಂಬ ಗ್ರಾಮದ ಬಳಿಯ ಹೊಲವೊಂದರಲ್ಲಿ ಹೂ ಬಿಡುವ ಹಂತದಲ್ಲಿರುವ ಮಾವಿನ ಮರ   

ರಾಮನಗರ: ಮಾವು ಹೂ ಬಿಡುವ ಹಂತದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಮತ್ತು ಬೀಸುತ್ತಿರುವ ಶೀತಗಾಳಿ ಮಾವು ಇಳುವರಿಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಎರಡು ದಿನದಿಂದ ನಿರಂತರ ಸುರಿಯುತ್ತಿರುವ ಮಳೆ ಮಾವು ಋತುವಿನ ಆರಂಭದಲ್ಲೇ ಬೆಳೆಗಾರರಿಗೆ ಆತಂಕ ತಂದೊಡ್ಡಿದೆ. ಮಳೆ ಮುಂದುವರಿದಷ್ಟೂ ಹೂ ಬಿಡುವ ಹಂತದಲ್ಲಿರುವ ಮಾವಿನ ಹೂ ಕಚ್ಚುವ ಪ್ರಕ್ರಿಯೆ ನಿಧಾನವಾಗಲಿದ್ದು, ಇಳುವರಿ ಕುಸಿಯುವ ಆತಂಕವಿದೆ.

ಜಿಲ್ಲೆಯ ಅನೇಕ ಬೆಳೆಗಾರರು ಈಗಾಗಲೇ ತೋಟಗಳಿಗೆ ಮೊದಲ ಸುತ್ತಿನ ಔಷಧ ಸಿಂಪಡಿಸಿದ್ದಾರೆ. ಇದೀಗ ಮಳೆಯಾಗುತ್ತಿರುವ ಕಾರಣ ಈ ಔಷಧ ಫಲ ನೀಡುವುದು ಅನುಮಾನ.

ADVERTISEMENT

ರಾಜ್ಯದಲ್ಲಿ ಮೊದಲು ಮಾವು ಉತ್ಪನ್ನ ಮಾರುಕಟ್ಟೆಗೆ ಬರುವುದು ರಾಮನಗರದಿಂದ. ಇಲ್ಲಿನ 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಜಿಲ್ಲೆಯಲ್ಲಿ ರಾಗಿ ನಂತರದ ಪ್ರಮುಖ ಬೆಳೆ ಇದಾಗಿದೆ. ಜಿಲ್ಲೆಯ ವಿವಿಧ ತೋಟಗಳಲ್ಲಿ ಈಗಾಗಲೇ ಮಾವು ಹೂವು ಬಿಡಲು ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ಮುಂಜಾನೆ ತಣ್ಣನೆಯ ಇಬ್ಬನಿ ಹಾಗೂ ಹಗಲು ಹೊತ್ತಿನಲ್ಲಿ ಬಿಸಿಲು ಇದ್ದಷ್ಟು ಹೂವು ಹೆಚ್ಚಾಗಲಿದ್ದು, ಫಸಲು ಉತ್ತಮವಾಗಿರುತ್ತದೆ. ಆದರೆ ಅಕಾಲಿಕ ಮಳೆಯಿಂದಾಗಿ ಈ ಲೆಕ್ಕಾಚಾರ ತಲೆಕೆಳಕಾಗುತ್ತಿದೆ.

‘ಶೀತ ಹೆಚ್ಚಾದಷ್ಟು ಹೂ ಬಿಡುವ ಪ್ರಕ್ರಿಯೆ ನಿಧಾನವಾಗಲಿದೆ. ಜೊತೆಗೆ ಹೊಸ ಚಿಗುರು ಸಹ ಕಾಣಿಸಿಕೊಳ್ಳಲಿದೆ. ನಾನಾ ಬಗೆಯ ಕೀಟಬಾಧೆಯೂ ಹೆಚ್ಚಾಗಲಿದೆ. ಸದ್ಯಕ್ಕೆ ಹೆಚ್ಚು ಆತಂಕವಿಲ್ಲ. ಆದರೆ ಇನ್ನೂ ನಾಲ್ಕೈದು ದಿನ ಇದೇ ಪರಿಸ್ಥಿತಿ ಮುಂದುವರಿದರೆ ಆಗ ಖಂಡಿತ ಮಾವು ಬೆಳೆಗಾರರಿಗೆ ಕಷ್ಟವಾಗಲಿದೆ’ ಎನ್ನುತ್ತಾರೆ ಮೈಸೂರಿನ ತೋಟಗಾರಿಕೆ ವಿಜ್ಞಾನಗಳ ಕಾಲೇಜಿನ ಸಹಾಯಕ ಪ‍್ರಾಧ್ಯಾಪಕ ರಾಮೇಗೌಡ.

‘ಮಾವಿಗೆ ಕೀಟಬಾಧೆ ಆರಂಭ ಆಗಿದ್ದಲ್ಲಿ ಸದ್ಯ ನೈಸರ್ಗಿಕ ವಿಧಾನಗಳಿಂದ ಅದನ್ನು ನಿಯಂತ್ರಿಸಬೇಕು. ರೋಗ ಹೆಚ್ಚಿದ್ದಲ್ಲಿ ಕೃಷಿ ವಿಜ್ಞಾನಿಗಳ ಸಲಹೆಯಂತೆ ಆರಂಭದಲ್ಲೇ ಅಗತ್ಯ ಔಷಧೋಪಚಾರ ಮಾಡಬೇಕು. ಇಲ್ಲವಾದಲ್ಲಿ ಇಳುವರಿ ಕೈ ತಪ್ಪುವ ಸಾಧ್ಯತೆ ಇದೆ’ ಎನ್ನುವುದು ಅವರ ಸಲಹೆ.

ಉತ್ತಮ ಇಳುವರಿ ನಿರೀಕ್ಷೆ:ಕಳೆದ ವರ್ಷ ಅತಿವೃಷ್ಟಿಯ ಕಾರಣಕ್ಕೆ ಮಾವಿನ ಫಸಲು ಉತ್ತಮವಾಗಿರಲಿಲ್ಲ. ಶೇ 20–25ರಷ್ಟು ಫಸಲು ಮಾತ್ರ ಸಿಕ್ಕಿದ್ದು, ಬೆಳೆಗಾರರು ನಷ್ಟ ಅನುಭವಿಸಿದ್ದರು. ಈ ಬಾರಿ ಉತ್ತಮ ಫಸಲು ಸಿಗುವ ನಿರೀಕ್ಷೆಯೊಂದಿಗೆ ರೈತರು ಮರಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.