ADVERTISEMENT

ರಾಮನಗರ: ನಾಪತ್ತೆಯಾಗಿದ್ದವನ ಶವ ನದಿಯಲ್ಲಿ ಪತ್ತೆ

ಸ್ನೇಹಿತರೊಂದಿಗೆ ಈಜಲು ಹೋಗಿದ್ದಾಗ ಮುಳುಗಿ ಮೃತಪಟ್ಟಿದ್ದ ಬಾಲಕ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 7:04 IST
Last Updated 15 ಆಗಸ್ಟ್ 2023, 7:04 IST
ರಾಮನಗರ ಹೊರ ವಲಯದ ದ್ಯಾವರಸೇಗೌಡನ ದೊಡ್ಡಿ ಬಳಿ ಅರ್ಕಾವತಿ ನದಿಯಲ್ಲಿ ಪೊಲೀಸರು ಬಾಲಕನ ಶವಕ್ಕಾಗಿ ಶೋಧ ನಡೆಸಿದರು
ರಾಮನಗರ ಹೊರ ವಲಯದ ದ್ಯಾವರಸೇಗೌಡನ ದೊಡ್ಡಿ ಬಳಿ ಅರ್ಕಾವತಿ ನದಿಯಲ್ಲಿ ಪೊಲೀಸರು ಬಾಲಕನ ಶವಕ್ಕಾಗಿ ಶೋಧ ನಡೆಸಿದರು   

ರಾಮನಗರ: ಎರಡು ದಿನದ ಹಿಂದೆ ಕಾಣೆಯಾಗಿದ್ದ ಇಲ್ಲಿನ ವಿನಾಯಕ ನಗರದ ಬಾಲಕ ಕಿಶೋರ್‌ (14) ಶವ, ನಗರ ಹೊರವಲಯದ ದ್ಯಾವರಸೇಗೌಡನ ದೊಡ್ಡಿ ಬಳಿ ಅರ್ಕಾವತಿ ನದಿಯಲ್ಲಿ ಸೋಮವಾರ ಪತ್ತೆಯಾಗಿದೆ.

ಎಂಟನೇ ತರಗತಿಯಲ್ಲಿ ಓದುತ್ತಿದ್ದ ಕಿಶೋರ್ ಭಾನುವಾರ ರಜೆ ಇದ್ದಿದ್ದರಿಂದಾಗಿ ಸ್ನೇಹಿತರೊಂದಿಗೆ ಹೊರಗಡೆ ಆಟವಾಡಲು ಹೋಗಿದ್ದ. ಮಗ ಸಂಜೆಯಾದರೂ ಮನೆಗೆ ಬಾರದಿದ್ದರಿಂದ ಗಾಬರಿಗೊಂಡಿದ್ದ ಕುಟುಂಬದವರು, ಸ್ನೇಹಿತರು ಮತ್ತು ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದರು. ಆದರೆ, ಎಲ್ಲೂ ಆತನ ಸುಳಿವು ಸಿಕ್ಕಿರಲಿಲ್ಲ.

ಆಟವಾಡಲು ತೆರಳಿದ್ದ ಕಿಶೋರ್ ಎಲ್ಲೂ ಸಿಗದಿದ್ದರಿಂದ ಆತಂಕಗೊಂಡಿದ್ದ ಪೋಷಕರು, ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದರು. ಆತನ ಸ್ನೇಹಿತರನ್ನು ವಿಚಾರಿಸಿದಾಗ ಅರ್ಕಾವತಿ ನದಿಯಲ್ಲಿ ಭಾನುವಾರ ಮಧ್ಯಾಹ್ನ ಈಜಲು ತೆರಳಿದ್ದಾಗ ಮುಳುಗಿ ಮೃತಪಟ್ಟಿರುವುದಾಗಿ ಬಾಯ್ಬಿಟ್ಟರು ಎಂದು ರಾಮನಗರ ಪುರ ಠಾಣೆ ಪೊಲೀಸರು ತಿಳಿಸಿದರು.

ADVERTISEMENT

ಸ್ನೇಹಿತರೆಲ್ಲರೂ ಒಟ್ಟಿಗೆ ನೀರಿನಲ್ಲಿ ಈಜುತ್ತಿದ್ದಾಗ, ಕಿಶೋರ್ ನೀರಿನ ಸೆಳೆತಕ್ಕೆ ಸಿಲುಕು ಮುಳುಗತೊಡಗಿದ. ಅದನ್ನು ಕಂಡು ಗಾಬರಿಗೊಂಡ ಸ್ನೇಹಿತರು ಸ್ಥಳದಿಂದ ಕಾಲ್ಕಿತ್ತಿದ್ದರು. ಆತನ ಸಾವಿನ ವಿಷಯ ಗೊತ್ತಾದ ಬಳಿಕ, ನದಿಯಲ್ಲಿ ಹುಡುಕಾಟ ನಡೆಸಿ ಕಿಶೋರ್ ಶವವನ್ನು ಹೊರ ತೆಗೆಯಲಾಯಿತು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.