ADVERTISEMENT

ಮಾಚಿದೇವರ ಜಯಂತಿ | ಹಿಂದುಳಿದ ವರ್ಗಕ್ಕೆ ರಾಜಕೀಯ ಪ್ರಜ್ಞೆ ಅಗತ್ಯ: ಶೇಷಾದ್ರಿ ಶಶಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 5:13 IST
Last Updated 2 ಫೆಬ್ರುವರಿ 2026, 5:13 IST
<div class="paragraphs"><p>ರಾಮನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಉದ್ಘಾಟಿಸಿದರು.&nbsp;</p></div>

ರಾಮನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಉದ್ಘಾಟಿಸಿದರು. 

   

ರಾಮನಗರ: ‘ಹಿಂದುಳಿದ ವರ್ಗಗಳಿಗೆ ರಾಜಕೀಯ ಚಿತ್ರಣವನ್ನೇ ಬದಲಿಸುವ ಶಕ್ತಿ ಇದೆ. ಆ ಶಕ್ತಿಯನ್ನು ಅರಿತು ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು, ಸೂಕ್ತ ರಾಜಕೀಯ ಪ್ರಾತಿನಿಧ್ಯ ಪಡೆಯಲು ಹೋರಾಡಬೇಕು. ಸಮುದಾಯಗಳು ಸಂಘಟಿತವಾಗಿದ್ದರೆ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅಭಿಪ್ರಾಯಪಟ್ಟರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಡಿವಾಳರ ಸಂಘದ ಸಹಯೋಗದಲ್ಲಿ ಭಾನುವಾರ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ತುಳಿತಕ್ಕೊಳಗಾದ ಸಮುದಾಯಗಳಿಗೆ ಸೌಲಭ್ಯಗಳು ಸಿಗುತ್ತವೆ’ ಎಂದರು.

ADVERTISEMENT

‘ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದುಳಿದ ಸಮುದಾಯಗಳು ಒಗ್ಗಟ್ಟಾಗುವುದು ಕಷ್ಟಕರವಾಗಿದ್ದರೂ, ಜಿಲ್ಲೆಯಲ್ಲಿ ಸಂಘಟನೆಗಳು ಬಲಿಷ್ಠವಾಗುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತಿವೆ. ಸಮಾಜದ ಮುಖ್ಯವಾಹಿನಿಗೆ ಮತ್ತಷ್ಟು ಬರಬೇಕಾದರೆ ಶಿಕ್ಷಣ, ಸಂಘಟನೆ ಜೊತೆಗೆ ರಾಜಕೀಯ ಪ್ರಜ್ಞೆ ಅಗತ್ಯ’ ಎಂದು ಹೇಳಿದರು.

‘ಯಾವುದೇ ಸಮುದಾಯದ ಸಂಘಟನೆಗಳು ಪಕ್ಷಾತೀತವಾಗಿರಬೇಕು. ಒಂದು ಪಕ್ಷದ ಅಥವಾ ವ್ಯಕ್ತಿಯ ಓಲೈಕೆ ಮಾಡಿದರೆ ಆ ಸಂಘಟನೆಗಳಿಗೆ ಬೆಲೆ ಸಿಗುವುದಿಲ್ಲ. ಪಕ್ಷಾತೀತವಾಗಿದ್ದಾಗ ಮಾತ್ರ ಯಾವುದೇ ಸರ್ಕಾರವಿದ್ದರೂ ಆ ಸಮುದಾಯಕ್ಕೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸೌಲಭ್ಯಗಳು ದೊರೆಯುತ್ತವೆ’ ಎಂದು ತಿಳಿಸಿದರು.

ಉಪನ್ಯಾಸ ನೀಡಿದ ಬಿ.ಪಿ. ಸುರೇಶ್, ‘ಮಡಿವಾಳ ಮಾಚಿದೇವರು ಕೇವಲ ಶರಣರಲ್ಲ. ಶ್ರಮ ಸಂಸ್ಕೃತಿಯ ರಕ್ಷಕರಾಗಿದ್ದರು. ವಚನ ಸಂಸ್ಕೃತಿ ಕಾಪಾಡಿ ಬೆಳೆಸಿದ ಒಬ್ಬ ವೀರಯೋಧರಾಗಿದ್ದ ಅವರು, ದುಡಿಮೆಯನ್ನು ಗೌರವಿಸಿದ ಮಹಾನ್ ಚೇತನ. ಸಮಾಜದಲ್ಲಿ ದುಡಿಯುವ ವರ್ಗಗಳೇ ನಿಜವಾದ ಶಕ್ತಿಕೇಂದ್ರಗಳು ಎಂಬ ಅರಿವು ಎಲ್ಲರಲ್ಲೂ ಮೂಡಬೇಕು’ ಎಂದು ಅಭಿಪ್ರಾಯಪಟ್ಟರು.

‘ಮಾಚಿದೇವರ ವಚನಗಳು ಸಮಾನತೆಯ ಸಂದೇಶ ನೀಡುತ್ತವೆ. ಜಾತಿ, ವರ್ಗ, ಲಿಂಗಭೇದವಿಲ್ಲದೆ ಮಾನವನಾಗಿ ಬದುಕುವ ಒತ್ತಾಸೆಯನ್ನು ಅವರು ಪ್ರತಿಪಾದಿಸಿದ್ದರು. ಇಂತಹ ಚಿಂತನೆಗಳನ್ನು ಇಂದಿನ ಸಮಾಜದಲ್ಲಿ ಪುನರುಜ್ಜೀವನಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜ್ ಮಾತನಾಡಿ, ‘ಹಿಂದುಳಿದ ಸಮುದಾಯಗಳು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿ ಸಂಘಟಿತರಾಗಬೇಕಾಗಿದೆ. ಸರ್ಕಾರದ ಯೋಜನೆಗಳು ತಳಮಟ್ಟದ ಜನರಿಗೆ ತಲುಪಬೇಕಾದರೆ, ಸಮುದಾಯದೊಳಗೆ ಜಾಗೃತಿಯಾಗಬೇಕು’ ಎಂದು ತಿಳಿಸಿದರು.

ಮಡಿವಾಳ ಮಾಚಿದೇವರ ಸಂಘದ ಜಿಲ್ಲಾಧ್ಯಕ್ಷ ಮಂಟೇದಯ್ಯ ಮಾತನಾಡಿ, ‘ಮಡಿವಾಳ ಮಾಚಿದೇವರ ಜೀವನ ಮತ್ತು ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಸಮಾಜದ ಯುವಕರು ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ’ ಎಂದರು.

ಮಡಿವಾಳರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಮಡಿವಾಳ ಪೀಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜೂನಿಯರ್ ಕಾಲೇಜು ಮೈದಾನದಿಂದ ಎಂ.ಜಿ. ರಸ್ತೆ ಮಾರ್ಗವಾಗಿ ಅಂಬೇಡ್ಕರ್ ಭವನದವರೆಗೆ ಬೆಳ್ಳಿ ರಥದಲ್ಲಿ ಮಾಚಿದೇವರ ಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು. ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಮಡಿವಾಳರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ಲೋಕೇಶ್, ಕರವೇ ಜಿಲ್ಲಾಧ್ಯಕ್ಷ ಎಂ.ಎನ್.ಆರ್. ರಾಜು, ಟಿಎಪಿಸಿಎಂಸ್ ಅಧ್ಯಕ್ಷ ದೊಡ್ಡಿ ಸುರೇಶ್, ಮುಖಂಡರಾದ ಶ್ರೀನಿವಾಸ್, ಚಂದ್ರಶೇಖರ್, ಸಂತೋಷ್, ಜಗದೀಶ್, ಶಿವಾನಂದ್, ಪುಟ್ಟಸ್ವಾಮಯ್ಯ, ವೀರಭದ್ರಯ್ಯ, ರಂಗಸ್ವಾಮಯ್ಯ, ಶಿವಕುಮಾರ್, ಗಿರೀಶ್, ಹರೀಶ್, ರತ್ನಮ್ಮ, ಚಂದ್ರಣ್ಣ, ಸುಮಿತ್ರಾ, ರೂಪ, ಶೋಭಾ ಹಾಗೂ ಇತರರು ಇದ್ದರು. ಚಕ್ಕೆರೆ ಲೋಕೇಶ್ ತಂಡದವರು ಗೀತ ಗಾಯನ ನಡೆಸಿಕೊಟ್ಟರು. ಕಲಾವಿದ ಕನಕಪುರ ಶ್ರೀನಿವಾಸ್ ನಿರೂಪಣೆ ಮಾಡಿದರು.

ಮಡಿವಾಳ ಮಾಚಿದೇವರ ಜಯಂತಿ ಪ್ರಯುಕ್ತ ರಾಮನಗರದ ಜೂನಿಯರ್ ಕಾಲೇಜು ಮೈದಾನದಿಂದ ಅಂಬೇಡ್ಕರ್ ಭವನದವರೆಗೆ ಮಾಚಿದೇವರ ಚಿತ್ರವನ್ನು ಮೆರವಣಿಗೆ ಮಾಡಲಾಯಿತು
ಶಿಕ್ಷಣದ ಜೊತೆಗೆ ಸಮುದಾಯವನ್ನು ಸಂಘಟಿಸಿ ಮುನ್ನಡೆಸುವ ಅಗತ್ಯವಿದೆ. ಯುವಜನರು ಉತ್ತಮ ವಿದ್ಯಾಭ್ಯಾಸದ ಜೊತೆಗೆ ದೈಹಿಕ ಶಕ್ತಿ ಶಿಸ್ತು ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸಮರ ಕಲೆಗಳನ್ನು ಅಭ್ಯಾಸ ಮಾಡಬೇಕು
– ಹಾಸನ ರಘು ಸಮರ ಕಲೆಗಳ ತಜ್ಞ
ಶರಣರ ಚಳವಳಿ ಕೇವಲ ಧಾರ್ಮಿಕ ಚಳವಳಿಯಲ್ಲ. ಅದೊಂದು ಸಾಮಾಜಿಕ ಕ್ರಾಂತಿಯಾಗಿತ್ತು. ಮಡಿವಾಳ ಮಾಚಿದೇವರಂತಹ ಶರಣರು ಶ್ರಮಕ್ಕೆ ಗೌರವ ನೀಡುವ ಮೂಲಕ ಸಮಾಜದ ಗೊಡ್ಡು ಸಂಪ್ರದಾಯಗಳನ್ನು ಪ್ರಶ್ನಿಸಿದರು.
– ದೀಪಕ್ ಕುಮಾರ್ ಪ್ರಾಧ್ಯಾಪಕ
‘ರಾಜಕಾರಣಿಗಳ ಬಳಿ ಹಕ್ಕು ಕೇಳಿ’
‘ವಿವಿಧ ಸಮುದಾಯದ ಸಂಘಟನೆಗಳು ತಮ್ಮ ಸಮುದಾಯದ ಪುಣ್ಯ ಪುರುಷರ ಜಯಂತಿ ಕಾರ್ಯಕ್ರಮಗಳನ್ನು ಆಯೋಜಿಸಿ ರಾಜಕಾರಣಿಗಳು ಮತ್ತು ಗಣ್ಯರಿಗೆ ಸನ್ಮಾನ ಮಾಡಿ ಕಳಿಸಿದರೆ ಸಾಲದು. ತಮ್ಮ ಹಕ್ಕನ್ನು ಕೇಳಬೇಕು. ಇಲ್ಲದಿದ್ದರೆ ಏನೂ ಸಿಗುವುದಿಲ್ಲ. ರಾಮನಗರ ನಗರಸಭೆಯ ಹಿಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಮಡಿವಾಳ ಸಮುದಾಯಕ್ಕೆ ಅಗತ್ಯ ಪರಿಕರ ನೀಡಿದ್ದೇವೆ. ಮುಂದಿನ ಬಜೆಟ್‌ನಲ್ಲಿ ಸಮುದಾಯದ ಮೂಲ ಕಸುಬಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಧೋಬಿ ಘಾಟ್ ನಿರ್ಮಿಸುವ ಚಿಂತನೆ ಇದೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.