ADVERTISEMENT

ಕಸ ವಿಲೇವಾರಿ ಘಟಕ; ಮೂಲ ಸೌಕರ್ಯಕ್ಕೆ ಒತ್ತು

ರಾಮನಗರ ನಗರಸಭೆ: ಉಳಿತಾಯ ಬಜೆಟ್ ಮಂಡನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 12:53 IST
Last Updated 7 ಫೆಬ್ರುವರಿ 2019, 12:53 IST
ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಬಜೆಟ್‌ ಮಂಡನಾ ಸಭೆಯಲ್ಲಿ ಆಯುಕ್ತೆ ಶುಭಾ, ಅಧ್ಯಕ್ಷೆ ರತ್ನಮ್ಮ ಹಾಗೂ ಉಪಾಧ್ಯಕ್ಷೆ ಮಂಗಳಾ ಪಾಲ್ಗೊಂಡರು
ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಬಜೆಟ್‌ ಮಂಡನಾ ಸಭೆಯಲ್ಲಿ ಆಯುಕ್ತೆ ಶುಭಾ, ಅಧ್ಯಕ್ಷೆ ರತ್ನಮ್ಮ ಹಾಗೂ ಉಪಾಧ್ಯಕ್ಷೆ ಮಂಗಳಾ ಪಾಲ್ಗೊಂಡರು   

ರಾಮನಗರ: ಘನತ್ಯಾಜ್ಯ ವಿಲೇವಾರಿಗೆ ಹೆಚ್ಚುವರಿ ಘಟಕ ಸ್ಥಾಪನೆ, ನಿರಾಶ್ರಿತರಿಗೆ ಮನೆಗಳ ನಿರ್ಮಾಣ, ಉದ್ಯಾನ ಸ್ಮಶಾನಗಳ ಅಭಿವೃದ್ಧಿ...

ಇದು ಈ ಬಾರಿಯ ರಾಮನಗರ ನಗರಸಭೆ ಬಜೆಟ್‌ನ ಪ್ರಮುಖ ಅಂಶಗಳು. ಇಲ್ಲಿನ ನಗರಸಭೆಯ ಪ್ರಶಸ್ತಿ ಭವನದಲ್ಲಿ ಅಧ್ಯಕ್ಷೆ ರತ್ನಮ್ಮ ಪಾಪಣ್ಣ ನೇತೃತ್ವದಲ್ಲಿ ಉಪಾಧ್ಯಕ್ಷೆ ಮಂಗಳಾ ಶಂಭುಲಿಂಗಯ್ಯ 2019–20ನೇ ಸಾಲಿಗೆ ₨59.52ಲಕ್ಷ ಉಳಿತಾಯ ಬಜೆಟ್‌ ಅನ್ನು ಗುರುವಾರ ಮಂಡಿಸಿದರು.

ನಗರಸಭೆಯ ವ್ಯಾಪ್ತಿಯಲ್ಲಿ ಈಗಾಗಲೇ ಒಂದು ಒಣ ತ್ಯಾಜ್ಯ ವಿಂಗಡಣಾ ಘಟಕ, ಮೂರು ಹಸಿತ್ಯಾಜ್ಯ ಸಂಸ್ಕರಣ ಘಟಕ ಹಾಗೂ ಕಸದಿಂದ ವಿದ್ಯುತ್‌ ತಯಾರಿಸುವ ಬಯೋಮಿಥೇನ್‌ ಘಟಕ ಕಾರ್ಯ ನಿರ್ವಹಿಸುತ್ತಿದೆ . ಈ ಬಜೆಟ್‌ನಲ್ಲಿ ಇನ್ನೊಂದು ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ.

ADVERTISEMENT

ನಗರದಲ್ಲಿ ಈಗಾಗಲೇ ಇ–ಶೌಚಾಲಯಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಮುಂದೆ ಅವಶ್ಯವಿರುವ ಕಡೆ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರು ನಿರ್ವಹಣೆಗೆ ಸರ್ಕಾರ ₨1 ಕೋಟಿ ಅನುದಾನ ನೀಡುವ ನಿರೀಕ್ಷೆ ಇದನ್ನು ನೀರು ಸರಬರಾಜು ಕಾಮಗಾರಿಗಳಿಗೆ ಬಳಸಲು ಯೋಜಿಸಲಾಗಿದೆ.

ಉದ್ಯಾನ ಅಭಿವೃದ್ಧಿ: ನಗರಸಭೆಯಲ್ಲಿನ ಉದ್ಯಾನಗಳ ಅಭಿವೃದ್ಧಿ ಹಾಗೂ ರಸ್ತೆ ಬದಿಯಲ್ಲಿ ಗಿಡ ನೆಡಲು ಯೋಜಿಸಲಾಗಿದ್ದು, ಇದಕ್ಕಾಗಿ ₨75 ಲಕ್ಷ ತೆಗೆದಿಡಲಾಗಿದೆ. ಎಸ್‌ಎಫ್‌ಸಿ ಅನುದಾನದಲ್ಲಿ ರಸ್ತೆ, ಚರಂಡಿ ಕಾಮಗಾರಿಗಾಗಿ ₨10 ಕೋಟಿ ಹಾಗೂ ಶುದ್ಧ ನೀರು ಘಟಕಗಳ ನಿರ್ಮಾಣಕ್ಕೆ ₨2.5 ಕೋಟಿ ಸಿಗಲಿದೆ. 14ನೇ ಹಣಕಾಸು ಯೋಜನೆಯ ಅಡಿ ಮೂಲ ಸೌಕರ್ಯ ಅಭಿವೃದ್ಧಿಗೆ ₨9 ಕೋಟಿ ಸಿಗಲಿದೆ. ಕುಡಿಯುವ ನೀರು ವ್ಯವಸ್ಥೆಯ ನಿರ್ವಹಣೆಗೆ ₨5.6 ಕೋಟಿ ಹಂಚಲಾಗಿದೆ.

ನಗರದ ಸ್ವಚ್ಛತೆ ಮತ್ತು ನೈರ್ಮಲಕ್ಕೆಂದು ₨2.75 ಕೋಟಿ ಅನುದಾನ ಸಿಗಲಿದೆ. ಬೀದಿದೀಪಗಳ ನಿರ್ವಹಣೆಗೆ ₨60 ವೆಚ್ಚ ಆಗಲಿದ್ದು, ಹಳೆಯ ದೀಪಗಳಿಗೆ ಬದಲಾಗಿ ಎಲ್‌ಇಡಿ ದೀಪಗಳು ಬರಲಿವೆ. ಸ್ಮಶಾನಗಳ ಅಭಿವೃದ್ಧಿಗೆ ₨50 ಲಕ್ಷ ಇಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗೆ ₨1.74 ಕೋಟಿ ಮೀಸಲಾಗಿದೆ. ವಿದ್ಯುತ್‌ ಬಿಲ್‌ಗಳನ್ನು ಕಟ್ಟಲು ₨1.75 ಕೋಟಿ ವಿನಿಯೋಗವಾಗಲಿದೆ. ₨5 ಲಕ್ಷ ವೆಚ್ಚದಲ್ಲಿ ಡಸ್ಟ್‌ ಬಿನ್ ಖರೀದಿಸಿ ಮನೆಮನೆಗೆ ಹಂಚುವ ಗುರಿ ಹೊಂದಲಾಗಿದೆ.

ಆದಾಯದ ಮೂಲ: ನಗರಸಭೆಯ ಬಜೆಟ್‌ ನಲ್ಲಿ ಪ್ರಮುಖವಾಗಿ ವಿವಿಧ ಯೋಜನೆಗಳಡಿ ಬಿಡುಗಡೆಯಾಗಿ ವೆಚ್ಚವಾಗದ ಬ್ಯಾಂಕ್ ಶಿಲ್ಕು ₨5.81 ಕೋಟಿ ಹಾಗೂ ಪ್ರಸಕ್ತ ಸಾಲಿನ ನಿರೀಕ್ಷಿತ ಆದಾಯ ₨42.76 ಕೋಟಿ ಇದೆ. ನಗರಸಭೆಗೆ ಆಸ್ತಿ ತೆರಿಗೆಯು ಪ್ರಮುಖ ಆದಾಯವಾಗಿದ್ದು, ಈ ವರ್ಷ ತೆರಿಗೆಯ ರೂಪದಲ್ಲಿ ₨4 ಕೋಟಿ ಹಾಗೂ ದಂಡದ ರೂಪದಲ್ಲಿ ₨75 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ಇದಲ್ಲದೆ ವಾಣಿಜ್ಯ ಸಂಕೀರ್ಣಗಳಿಂದ ಬಾಡಿಗೆ ₨25 ಲಕ್ಷ, ಕಟ್ಟಡಗಳಿಂದ ಬಾಡಿಗೆ ₨2.5 ಲಕ್ಷ, ಅಂಬೇಡ್ಕರ್ ಭವನ ಮತ್ತು ಪುರಭವನಗಳ ಬಾಡಿಗೆ ₨5 ಲಕ್ಷ, ಕಟ್ಟಡ ಪರವಾನಗಿ ಶುಲ್ಕದಿಂದ ₨25 ಲಕ್ಷ, ಉದ್ದಿಮೆ ಪರವಾನಗಿ ಶುಲ್ಕದಿಂದ ₨40 ಲಕ್ಷ ಆದಾಯವನ್ನು ನಗರಸಭೆಯು ನಿರೀಕ್ಷಿಸಿದೆ.

ರಸ್ತೆ ಅಗೆತ ಮತ್ತು ಪುನಃಸ್ಥಾಪನೆ ಶುಲ್ಕದಿಂದ ₨15 ಲಕ್ಷ, ಜಾಹೀರಾತು ತೆರಿಗೆಯಿಂದ ₨10 ಲಕ್ಷ, ಟೆಂಡರ್ ಫಾರಂ ಮಾರಾಟದಿಂದ ₨1 ಲಕ್ಷ, ಜನನ - ಮರಣ ಪ್ರಮಾಣ ಪತ್ರಗಳ ಶುಲ್ಕದಿಂದ ₨1.25ಲಕ್ಷ ಬರಲಿದೆ. ಕರ ಸಂಗ್ರಹಣ ಶುಲ್ಕ ₨5 ಲಕ್ಷ ಹಾಗೂ ಅಕ್ರಮ ಸಕ್ರಮದಿಂದ ₨25 ಲಕ್ಷ ಆದಾಯ ನಿರೀಕ್ಷಸಲಾಗಿದೆ. ನಗರಸಭೆ ಅýಧಿಕಾರಿ ಮತ್ತು ನೌಕರರ ವೇತನಕ್ಕಾಗಿ ₨4.25ಕೋಟಿ, ಬ್ಯಾಂಕ್ ಖಾತೆಗಳಿಂದ ಬಡ್ಡಿ ₨20ಲಕ್ಷ, ಪ್ರೋತ್ಸಾಹ ಧನದಿಂದ ₨5 ಲಕ್ಷ ಆದಾಯ ಬರುವ ಲೆಕ್ಕಚಾರವಿದೆ ಎಂದು ಮಂಗಳಾ ಮಾಹಿತಿ ನೀಡಿದರು.

ಪೌರಾಯುಕ್ತೆ ಬಿ. ಶುಭಾ, ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.