ADVERTISEMENT

ದಾಹ ನೀಗಿಸಲು ಟ್ಯಾಂಕರ್‌ ನೀರು ಪೂರೈಕೆ

ನಗರಸಭೆ ಅಧಿಕಾರಿಗಳಿಂದ ವಾರ್ಡುಗಳಿಗೆ ಭೇಟಿ: ಜನರ ಸಮಸ್ಯೆ ಆಲಿಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 14:41 IST
Last Updated 14 ಮಾರ್ಚ್ 2019, 14:41 IST
ರಾಮನಗರದ ನಾಲ್ಕನೇ ವಾರ್ಡಿನಲ್ಲಿ ಗುರುವಾರ ಟ್ಯಾಂಕರ್ ನೀರು ಪೂರೈಸಿದ್ದು, ನಗರಸಭೆ ಆಯುಕ್ತೆ ಶುಭಾ ಪರಿಶೀಲಿಸಿದರು
ರಾಮನಗರದ ನಾಲ್ಕನೇ ವಾರ್ಡಿನಲ್ಲಿ ಗುರುವಾರ ಟ್ಯಾಂಕರ್ ನೀರು ಪೂರೈಸಿದ್ದು, ನಗರಸಭೆ ಆಯುಕ್ತೆ ಶುಭಾ ಪರಿಶೀಲಿಸಿದರು   

ರಾಮನಗರ: ನಗರ ಪ್ರದೇಶದಲ್ಲಿ ಬೇಸಿಗೆಯ ಆರಂಭದಲ್ಲಿಯೇ ನೀರಿಗೆ ಕೊರತೆ ಉಂಟಾಗಿದೆ. ರಾಮನಗರ ನಗರಸಭೆಯು ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿದೆ.

ನಗರದ ಮೊದಲ ಹತ್ತು ವಾರ್ಡುಗಳಿಗೆ ಅರ್ಕಾವತಿ ನದಿಯ ನೀರನ್ನು ಪೂರೈಸಲಾಗುತ್ತಿದೆ. ವಾರಕ್ಕೆ ಒಮ್ಮೆ ಮಾತ್ರ ನೀರು ಸಿಗುತ್ತಿದೆ. ಆದರೆ ಈ ನೀರು ದಿನಬಳಕೆಗೆ ಯೋಗ್ಯವಲ್ಲದ ಕಾರಣ ಈ ವಾರ್ಡುಗಳ ಜನರಿಗೆ ಕುಡಿಯಲು ಟ್ಯಾಂಕರ್‌ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಅಧಿಕಾರಿಗಳ ಭೇಟಿ: ನೀರು ಪೂರೈಕೆಯಲ್ಲಿ ವ್ಯತ್ಯಯ ಸೇರಿದಂತೆ ಮೂಲ ಸೌಕರ್ಯಗಳ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತೆ ಶುಭಾ ನೇತೃತ್ವದ ಅಧಿಕಾರಿಗಳ ತಂಡವು ಗುರುವಾರ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ಈ ಸಂದರ್ಭ ಸಾರ್ವಜನಿಕರು ನೀರು ಪೂರೈಕೆಯ ವಿಷಯವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ನಗರಸಭೆ ನಾಮನಿರ್ದೇಶಿತ ಸದಸ್ಯ ಸೋಮಶೇಖರ್ ಮಾತನಾಡಿ ಜಲಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ‘ಆಯುಕ್ತರ ಭೇಟಿ ಹಿನ್ನೆಲೆಯಲ್ಲಿ ಜನರ ಕಣ್ಣೊರೆಸಲು ಇಂದು ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಉಳಿದ ದಿನಗಳಂದು ಜಲಮಂಡಳಿ ಅಧಿಕಾರಿಗಳು ಜನರ ಮನವಿಗೆ ಸ್ಪಂದಿಸುವುದಿಲ್ಲ’ ಎಂದು ದೂರಿದರು.

‘ನಾಲ್ಕನೇ ವಾರ್ಡಿನಲ್ಲಿ ಎರಡು ಕೊಳವೆ ಬಾವಿಗಳಿದ್ದು, ಒಂದನ್ನು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬಳಸಿಕೊಳ್ಳಲಾಗಿದೆ. ಮತ್ತೊಂದರಲ್ಲಿ ನೀರಿದ್ದರೂ ತಾಂತ್ರಿಕ ದೋಷದಿಂದ ಬಳಕೆ ಆಗುತ್ತಿಲ್ಲ. ಈ ಬಗ್ಗೆ ನಗರಸಭೆ, ಜಲಮಂಡಳಿಯ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ’ ಎಂದು ಹೇಳಿದರು.

ಆಯುಕ್ತೆ ಶುಭಾ ಪ್ರತಿಕ್ರಿಯಿಸಿ ‘ಜನರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಅವರಲ್ಲಿಯೇ ತೆರಳಿ ಸಮಸ್ಯೆ ಆಲಿಸಲಾಗುತ್ತಿದೆ. ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಲಾಗಿದೆ. ಸಾರ್ವಜನಿಕರಿಂದ ಬೇಡಿಕೆ ಬಂದಲ್ಲಿ ಅಗತ್ಯವಿದ್ದ ಕಡೆ ತುರ್ತಾಗಿ ಟ್ಯಾಂಕರ್ ನೀರು ಸರಬರಾಜು ಮಾಡುತ್ತಿದ್ದೇವೆ. ನೀರು ಪೂರೈಕೆಗೆ ಇರುವ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.

‘ನೀರಿನ ಬವಣೆ ನೀಗಿಸಲು ಬೇಕಾದಷ್ಟು ಅನುದಾನ ಲಭ್ಯವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ’ ಎಂದರು.

ನಗರಸಭೆ ಹಾಗೂ ಜಲಮಂಡಳಿಯ ಅಧಿಕಾರಿಗಳು ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.