ADVERTISEMENT

ಕುಡಿಯುವ ನೀರು; ಎಚ್ಚರ ವಹಿಸಲು ಸೂಚನೆ

ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 15:08 IST
Last Updated 5 ಮಾರ್ಚ್ 2021, 15:08 IST
ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ಮಾತನಾಡಿದರು
ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ಮಾತನಾಡಿದರು   

ರಾಮನಗರ: ಬೇಸಿಗೆ ಸಮೀಪಿಸುತ್ತಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಿ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಕೆ. ರಾಕೇಶ್ ಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಬರಪೀಡಿತ ಪ್ರದೇಶವೆಂದು ಘೋಷಣೆಯಾದರೆ ಅಂತಹ ಪ್ರದೇಶಗಳಲ್ಲಿ ಟ್ಯಾಂಕರ್‌ಗಳಿಂದ ನೀರು ಹಾಗೂ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪಡೆಯಲು ಅವಕಾಶವಿದೆ. ತಾಲ್ಲುಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ. ಗ್ರಾಮ ಪಂಚಾಯಿತಿಗಳಲ್ಲಿ 15ನೇ ಹಣಕಾಸು ಯೋಜನೆಯಡಿ ಅನುದಾನ ಲಭ್ಯವಿದ್ದು, ತಾ.ಪಂ. ಇಒ ಹಾಗೂ ಪಿಡಿಒಗಳ ಜೊತೆ ತಹಶೀಲ್ದಾರ್‌ಗಳು ಸಮನ್ವಯ ಸಾಧಿಸಿ ಸಮಸ್ಯೆ ಇರುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಪರಿಹರಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಮಳೆ ಹಾಗೂ ಬೆಳೆ ಹಾನಿ ಪ್ರಕರಣಗಳು ಇರುವುದಿಲ್ಲ. ಕನಕಪುರ ತಾಲ್ಲೂಕಿನಲ್ಲಿ ಎರಡು ಜಾನುವಾರು ಹಾನಿ ಪ್ರರಣಗಳಿಗೆ ಪರಿಹಾರ ನೀಡಲಾಗಿದೆ. ಬಾಕಿ ಇರುವ ಒಂದು ಪ್ರಕರಣವನ್ನು ಶೀಘ್ರವಾಗಿ ಪರಿಶೀಲಿಸಿ ವಿಲೇವಾರಿ ಮಾಡುವಂತೆ ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ 6,77,365 ಪ್ಲಾಟ್‌ಗಳಿದ್ದು ಈವರೆಗೆ 2,93,183 ಅನ್ನು ಫ್ರೂಟ್ಸ್‌ ತಂತ್ರಾಂಶಕ್ಕೆ ಸೇರಿಸಲಾಗಿದೆ. ರೈತರಿಗೆ ಸರ್ಕಾರದ ವತಿಯಿಂದ ನೀಡಲಾಗುವ ವಿವಿಧ ಸೌಲಭ್ಯಗಳ ಸಲುವಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ಬೆಳೆಗಳ ವಿವರವನ್ನು ದಾಖಲಿಸಬೇಕಿರುತ್ತದೆ. ವಿವಿಧ ಸರ್ವೆ ನಂಬರ್‌ಗಳಲ್ಲಿ ಒಬ್ಬರೇ ರೈತರ ಜಮೀನು ಇರುತ್ತದೆ. ಇವುಗಳನ್ನು ಪರಿಶೀಲಿಸಿ ಆಧಾರ್ ಸಂಖ್ಯೆಯೊಂದಿಗೆ ತಂತ್ರಾಂಶದಲ್ಲಿ ಅಳವಡಿಸುವ ಕೆಲಸ ಬಾಕಿ ಇರುತ್ತದೆ. ಇದನ್ನು ಪೂರ್ಣ ಗೊಳಿಸಲು ತೋಟಗಾರಿಕೆ, ಕೃಷಿ ಹಾಗೂ ಕಂದಾಯ ಇಲಾಖೆಯವರಿಗೆ ಕೆಲಸವ ಹಂಚಿಕೆ ಮಾಡಿ ಮುಂದಿನ ಸಭೆಗೆ ಪ್ರತ್ಯೇಕವಾಗಿ ಇಲಾಖೆಯ ಪ್ರಗತಿಯ ವಿವರ ಸಲ್ಲಿಸಿ ಎಂದರು.

ಸಕಾಲ ಹಾಗೂ ಭೂಮಿ ಪ್ರಕರಣದ ವಿಷಯಗಳು ನಿಗದಿತ ಅವಧಿಯೊಳಗೆ ವಿಲೇವಾರಿಯಾಗಬೇಕು. ಪ್ರತಿ ದಿನ ತಹಶೀಲ್ದಾರ್ ಈ ಬಗ್ಗೆ ಅರ್ಧ ಗಂಟೆ ಪರಿಶೀಲಿಸಿ ಯಾರ ಲಾಗಿನ್ ನಲ್ಲಿ ಬಾಕಿ ಇದೆ ಎಂದು ತಿಳಿದುಕೊಂಡು ವಿಲೇವಾರಿ ಮಾಡಬೇಕು. ಸೈನಿಕರು ಹಾಗೂ ಮಾಜಿ ಸೈನಿಕರಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿ ಬಂದಲ್ಲಿ ಅದನ್ನು ಪ್ರತ್ಯೇಕವಾಗಿ ವಿಶೇಷ ಕಾಳಜಿ ನೀಡಿ ನಿರ್ವಹಿಸಬೇಕು ಎಂದರು.

ಸ್ಮಶಾನದ್ದೇ ಸಮಸ್ಯೆ: ಜಿಲ್ಲೆಯ 823 ಗ್ರಾಮಗಳಲ್ಲಿ 129 ಗ್ರಾಮಗಳಲ್ಲಿ ರುದ್ರಭೂಮಿ ಇರುವುದಿಲ್ಲ. ಸ್ಮಶಾನ ಇಲ್ಲದ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಲಭ್ಯವಿರುವ ಕಡೆ ಕಾಮಗಾರಿ ಪ್ರಾರಂಭಿಸಿ. ಇಲ್ಲದಿರುವ ಕಡೆ ಖಾಸಗಿಯವರಿಂದ ಖರೀದಿಸಲು ಕ್ರಮ ವಹಿಸುವಂತೆ ತಿಳಿಸಿದರು.

ಸಾಮಾಜಿಕ ಪಿಂಚಣಿ ಹಾಗೂ ಪೌತಿ ಖಾತೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ವಾರಕೊಮ್ಮೆ ಒಂದು ಗ್ರಾಮಕ್ಕೆ ಭೇಟಿ ನೀಡಬೇಕು. ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ನಾಲ್ಕು ತಾಲ್ಲೂಕುಗಳ ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲೆಯ 823 ಗ್ರಾಮಗಳಲ್ಲಿ 129 ಗ್ರಾಮಗಳಲ್ಲಿ ರುದ್ರಭೂಮಿ ಇಲ್ಲ. ಸರ್ಕಾರಿ ಜಾಗ ಇಲ್ಲದೇ ಹೋದಲ್ಲಿ ಖಾಸಗಿ ಜಮೀನು ಖರೀದಿಸಿ ಕಾಮಗಾರಿ ಆರಂಭಿಸಬೇಕು.
ರಾಕೇಶ್ ‌ಕುಮಾರ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.