ADVERTISEMENT

ಅಭಿವೃದ್ಧಿಗಾಗಿ ಅವಿರತ ಶ್ರಮ: ಶಾಸಕ ಎಚ್.ಎ. ಇಕ್ಬಾಲ್ ಹುಸೇನ್

ಹುಣಸನಹಳ್ಳಿ ಮುಖ್ಯರಸ್ತೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 2:21 IST
Last Updated 11 ಜುಲೈ 2025, 2:21 IST
ಅಭಿವೃದ್ಧಿ ಕಂಡಿರುವ ರಾಮನಗರದ ಹುಣಸನಹಳ್ಳಿ ಮುಖ್ಯರಸ್ತೆಯನ್ನು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಗುರುವಾರ ಉದ್ಘಾಟಿಸಿದರು. ನಗರಸಭೆ ಸದಸ್ಯರು ಇದ್ದಾರೆ
ಅಭಿವೃದ್ಧಿ ಕಂಡಿರುವ ರಾಮನಗರದ ಹುಣಸನಹಳ್ಳಿ ಮುಖ್ಯರಸ್ತೆಯನ್ನು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಗುರುವಾರ ಉದ್ಘಾಟಿಸಿದರು. ನಗರಸಭೆ ಸದಸ್ಯರು ಇದ್ದಾರೆ   

ರಾಮನಗರ: ‘ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದ ಕ್ಷೇತ್ರದ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದೇನೆ. ವಿವಿಧ ಇಲಾಖೆಗಳಿಂದ ಅನುದಾನ ತಂದು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.

ಅಭಿವೃದ್ಧಿಗೊಂಡಿರುವ ನಗರದ ಹುಣಸನಹಳ್ಳಿ ಮುಖ್ಯರಸ್ತೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ನಗರದ ಸಂಪೂರ್ಣ ಅಭಿವೃದ್ಧಿಗೆ ಮತ್ತಷ್ಟು ಅನುದಾನ ಬೇಕಿದೆ. ಅದಕ್ಕಾಗಿ, ವಿವಿಧ ಇಲಾಖೆಗಳ ಸಚಿವರನ್ನು ಭೇಟಿ ಮಾಡಿ ಅನುದಾನ ತಂದು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಆ ಮೂಲಕ ನನ್ನನ್ನು ಶಾಸಕನನ್ನಾಗಿ ಮಾಡಿದ ಜನರ ಋಣ ತೀರಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಇಂದು ಉದ್ಘಾಟನೆಯಾಗಿರುವ ಹುಣಸನಹಳ್ಳಿ ಮುಖ್ಯರಸ್ತೆಯು ಹಲವು ಗ್ರಾಮಗಳಿಗೆ ಸಂಪರ್ಕ ಸೇತುವಾಗಿದೆ. ಮುಂಚೆ ಕಿರಿದಾಗಿದ್ದ ರಸ್ತೆಯು ತೀರಾ ಹದಗೆಟ್ಟಿತ್ತು. ಅತಿಯಾದ ದೂಳಿನಿಂದಾಗಿ ರಸ್ತೆ ಬದಿ ವ್ಯಾಪಾರ–ವಹಿವಾಟಿಗೆ ತೊಂದರೆಯಾಗಿತ್ತು. ಗುಂಡಿಗಳಿಂದಾಗಿ ವಾಹನಗಳ ಸಂಚಾರ ದುಸ್ತರವಾಗಿತ್ತು. ನಾನು ಶಾಸಕನಾದ ಬಳಿಕ ರಸ್ತೆ ವಿಸ್ತರಣೆ ಮಾಡಿ ಡಾಂಬರು ಹಾಕಿ ಅಭಿವೃದ್ಧಿಪಡಿಸಲಾಗಿದೆ’ ಎಂದರು.

ADVERTISEMENT

‘ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ನನ್ನ ಮನವಿಗೆ ಸ್ಪಂದಿಸಿ ನೀಡಿದ ₹10 ಕೋಟಿ ವೆಚ್ಚದಲ್ಲಿ ಈ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಇದರ ಜೊತೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ್ ಅಹಮದ್ ಖಾನ್ ಅವರು ತಮ್ಮ ಇಲಾಖೆಯಿಂದ ₹25 ಕೋಟಿ ಅನುದಾನ ನೀಡಿದ್ದಾರೆ. ಅದರಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ’ ಎಂದು ತಿಳಿಸಿದರು.

‘ನಗರದಲ್ಲಿ ಹರಿಯುವ ಅರ್ಕಾವತಿ ನದಿ ದಂಡೆ ಮೇಲೆ ₹157 ಕೋಟಿ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿ ಮಾಡಲಾಗುತ್ತಿದೆ. ನಿರಂತರ ಕುಡಿಯುವ ನೀರಿನ ಯೋಜನೆಯಡಿ ಮನೆ ಮನೆಗೆ ಸ್ಮಾರ್ಟ್ ಮೀಟರ್ ಅಳವಡಿಡಿಕೆ, ಅಂಗನವಾಡಿ ಕೇಂದ್ರಗಳ ನಿರ್ಮಾಣ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಎಲ್ಲವೂ ಪೂರ್ಣಗೊಂಡರೆ ನಗರದ ಚಹರೆಯೇ ಬದಲಾಗಲಿದೆ’ ಎಂದು ಹೇಳಿದರು.

‘ನಗರದ ಹೊರಲವಯದಲ್ಲಿರುವ ರಾಮದೇವರ ಬೆಟ್ಟದಲ್ಲಿ ₹2 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಇತ್ತೀಚೆಗೆ ಚಾಲನೆ ನೀಡಲಾಗಿದೆ. ಅಲ್ಲಿ ದಾಸೋಹ ಭವನ, ರಸ್ತೆ, ತಂಗುದಾಣ ನಿರ್ಮಾಣವಾಗಲಿದೆ. ಇದರಿಂದ ಬೆಟ್ಟದಲ್ಲಿ ಪ್ರವಾಸೋದ್ಯಮಕ್ಕೂ ಮತ್ತಷ್ಟು ಉತ್ತೇಜನ ಸಿಗಲಿದೆ. ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಲಿದೆ’ ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಪೌರಾಯುಕ್ತ ಡಾ. ಜಯಣ್ಣ, ಸದಸ್ಯರಾದ ನಿಜಾಮುದ್ದೀನ್ ಶರೀಫ್, ಅಜ್ಮತ್ ಉಲ್ಲಖಾನ್, ಸಮದ್, ಜಯಲಕ್ಷ್ಮಮ್ಮ, ಮುಖಂಡರಾದ ವೆಂಕಟೇಶ್, ಶಫಿ, ಅತಾವುಲ್ಲಾ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.